3

ಕಥೆಯಲ್ಲಿ ಧಮ್ಮಿಲ್ಲ; ಅಭಿಮಾನಿಗೆ ನಿರಾಸೆ ಆಗೊಲ್ಲ

Published:
Updated:
ಕಥೆಯಲ್ಲಿ ಧಮ್ಮಿಲ್ಲ; ಅಭಿಮಾನಿಗೆ ನಿರಾಸೆ ಆಗೊಲ್ಲ

ಸಿನಿಮಾ: ಅಂಜನಿಪುತ್ರ

ನಿರ್ಮಾಪಕ: ಎಂ.ಎನ್‌. ಕುಮಾರ್‌

ನಿರ್ದೇಶಕ: ಎ. ಹರ್ಷ

ತಾರಾಗಣ: ಪುನೀತ್‌ ರಾಜಕುಮಾರ್‌, ರಶ್ಮಿಕಾ ಮಂದಣ್ಣ, ರಮ್ಯಕೃಷ್ಣ, ಚಿಕ್ಕಣ್ಣ, ಗಿರಿ

ಆಗರ್ಭ ಶ್ರೀಮಂತ ಅವಿಭಕ್ತ ಕುಟುಂಬ. ಅಲ್ಲಿ ಎಲ್ಲರ ಕಣ್ಮಣಿಯಾಗಿರುವ ಒಬ್ಬ ಹುಡುಗ. ಹಾಸಿ ಹೊದೆಯುವಷ್ಟು ಹಣವಿದ್ದರೂ ತನ್ನದಲ್ಲದ ತಪ್ಪಿಗೆ ಬಲಿಯಾಗಿ ಕುಟುಂಬದಿಂದ ಬೇರಾಗಿ ಮಾರುಕಟ್ಟೆಯಲ್ಲಿ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದಾನೆ. ಹಿಂದುಮುಂದಿಲ್ಲದ ಅಬ್ಬೇಪಾರಿಯಂತೆ ಕಾಣುವ ಹುಡುಗನ ಹಿಂದೆ ದೊಡ್ಡದೊಂದು ಮನೆತನದ ಬಲವಿದೆ.

ಆ ಸತ್ಯ ಹೊರಬೀಳುತ್ತಿದ್ದಂತೆಯೇ ಕುಟುಂಬಗೌರವದ ರಕ್ಷಕನಾಗಿ ಬದಲಾಗುತ್ತಾನೆ. ಹೆಣದ ಮೇಲೆ ಹೆಣಗಳು ಉರುಳುತ್ತವೆ. ಅಮ್ಮನೇ ಮಗನಿಗೆ ‘ನಮ್ಮ ಕುಟುಂಬಕ್ಕೆ ಅವಮಾನ ಮಾಡಿದವನ ಕೈ ಮುರಿದು ತಾ’ ಎನ್ನುತ್ತಾನೆ. ಖಳನನ್ನು ಕೊಲ್ಲಹೊರಟ ನಾಯಕನಿಗೆ ಪೊಲೀಸ್‌ ಅಧಿಕಾರಿ ‘ನೀನು ಧೀರ. ಹೋಗಿ ಕೊಲ್ಲು’ ಎಂದು ಬೆನ್ನುತಟ್ಟಿ ಕಳಿಸುತ್ತಾನೆ.

ಹೀಗೆ ಮನೆತನದ ಮರ್ಯಾದೆಯ ರಕ್ಷಣೆಯನ್ನೇ ಬಂಡವಾಳವಾಗಿಸಿಕೊಂಡ ಅಸಂಖ್ಯ ಕಥೆಗಳು ಈಗಾಗಲೇ ಬಂದುಹೋಗಿವೆ. ಕಥೆಯ ದೃಷ್ಟಿಯಿಂದ ‘ಅಂಜನಿಪುತ್ರ’ ಹೊಸತೇನನ್ನೂ ನೀಡುವುದಿಲ್ಲ. ಇದೊಂದು ಬಗೆಯಲ್ಲಿ ಹಳೆ ಪಾನೀಯವನ್ನೇ, ಕುರುಕಲಿನೊಟ್ಟಿಗೆ ತಿನ್ನಲು ಕೊಟ್ಟ ಹಾಗಿದೆ.

ತಮಿಳಿನ ‘ಪೂಜೈ’ ಅನ್ನು ಕನ್ನಡಕ್ಕೆ ತರುವಾಗ ನಿರ್ದೇಶಕ ಹರ್ಷ, ‘ಪುನೀತ್‌’ ತಾರಾವರ್ಚಸ್ಸಿನ ಒಗ್ಗರಣೆಯನ್ನೂ ಸೇರಿಸಿದ್ದಾರೆ. ತಾಯಿ ಸೆಂಟಿಮೆಂಟ್‌, ಮೈಚಳಿ ಬಿಟ್ಟು ಮಾಡಿದ ಅಪ್ಪು ಡಾನ್ಸ್‌, ಮಾತು ಬೋರಾಗುತ್ತಿದೆ ಅನಿಸಿದಾಗಲೆಲ್ಲ ಮನುಷ್ಯರ ದೇಹವನ್ನೇ ಪುಟ್‌ಬಾಲ್ ಆಗಿಸುವ ಫೈಟ್‌, ಗೊಂಬೆಯಂಥ ನಾಯಕಿಯ ನವಿರು ನಗೆ ಹೀಗೆ ಪುನೀತ್‌ ಅವರ ಮಾಸ್‌ ಅಭಿಮಾನಿಗಳು ಸೀಟಿ ಹೊಡೆಯಲು ಬೇಕಾಗುವ ಎಲ್ಲ ಅಂಶಗಳನ್ನೂ ಇಟ್ಟುಕೊಂಡು ಸಿನಿಮಾ ಕಟ್ಟುವ ಭರದಲ್ಲಿ ಹರ್ಷ ಅವರಿಗೆ ಕಥೆ ಅಷ್ಟು ಮುಖ್ಯವೆನಿಸಿದಂತಿಲ್ಲ.

ತಮಿಳು ಕಥೆಯನ್ನು ಕನ್ನಡಕ್ಕೆ ತರುವಾಗ ಅವರು ಪುನೀತ್‌ ಇಮೇಜ್‌ ಅನ್ನು ಗಮನದಲ್ಲಿಟ್ಟುಕೊಂಡು ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆಯೇ ವಿನಾ ಅದನ್ನು ಕನ್ನಡದ ಕಥೆಯಾಗಿಸುವ ಯಾವ ಸಾಧ್ಯತೆಯ ಕಡೆಗೂ ಗಮನಹರಿಸಿಲ್ಲ. ಮಾರುಕಟ್ಟೆ, ದೇವಸ್ಥಾನಗಳ ಸೆಟ್‌ಗಳು ತೀರಾ ಕೃತಕ ಅನಿಸುತ್ತವೆ.

ದೊಡ್ಡ ಮನೆ, ಡೊಳ್ಳು ಕುಣಿತದವರನ್ನಷ್ಟೇ ತೋರಿಸಿ ಹಳ್ಳಿ ಎಂದು ನಂಬಿಸುವ, ಬಯಲುಭೂಮಿ, ಹಳೆಯ ಕೋಟೆ ತೋರಿಸಿ ರಾಜಸ್ಥಾನ ಎಂದು ಬಿಂಬಿಸುವ ಸುಲಭ ಮಾರ್ಗ ಆಯ್ದುಕೊಂಡಿರುವ ನಿರ್ದೇಶಕರು, ತಮ್ಮೆಲ್ಲ ಶ್ರಮವನ್ನು ನಾಯಕನಿಗೆ ಬಿಲ್ಡಪ್‌ ಕೊಡುವುದಕ್ಕೆ ಮೀಸಲಾಗಿಟ್ಟಿರುವುದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ.

ಉಗ್ರಂ ಮಂಜು, ಜಹಾಂಗೀರ್‌ ಅವರಂಥ ಪ್ರತಿಭಾವಂತ ಕಲಾವಿದರು ಸುಯ್ಯನೆ ಬಂದು ಈ ಬಿಲ್ಡಪ್‌ ಕೊಡುವ ಕೆಲಸವನ್ನಷ್ಟೇ ಮಾಡಿ ಟಪಕ್‌ನೆ ಮರೆಯಾಗುತ್ತಾರೆ. ಕೊನೆಯಲ್ಲಿ ಕನ್ನಡ ಭಾಷೆಯ ಭಾವನಾತ್ಮಕತೆಯನ್ನು ಬಳಸಿಕೊಳ್ಳಲೆಂದೇ ಕಥೆಯನ್ನು ಅನಗತ್ಯವಾಗಿ ರಾಜಸ್ಥಾನಕ್ಕೆ ಗಡೀಪಾರು ಮಾಡಲಾಗಿರುವುದೂ ಅಸಹಜವಾಗಿದೆ.

ಕಾಲುಂಗುರ, ಅರಿಶಿನ ಕುಂಕುಮ ಕೊಟ್ಟು ಪ್ರೇಮನಿವೇದನೆ ಮಾಡಿಸಿ, ‘ನಾನು ಮದ್ರಾಸಿ ಅಲ್ಲ, ಕನ್ನಡಿಗ’, ‘ಹಿಸ್ಟರಿಯಲ್ಲಿ ತಂದೆತಾಯಿಯನ್ನು ದೇವರು ಅಂದಿದ್ದಾರೆ, ಪ್ರೇಮಿಗಳನ್ನಲ್ಲ’ ಎಂಬಂಥ ಆಕರ್ಷಕ ಡೈಲಾಗ್‌ ಹೊಡೆಸಿ, ಜನಪ್ರಿಯ ಮಾದರಿಯ ಹುಸಿ ಸಾಮಾಜಿಕ ಸಂದೇಶವನ್ನು ತುರುಕುವ ವ್ಯಾಪಾರಿ ಗಿಮಿಕ್‌ ಅನ್ನೂ ನಿರ್ದೇಶಕರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆದರೆ ಪೊಲೀಸ್‌ ಅಧಿಕಾರಿಯೊಬ್ಬ ನಾಯಕನಿಗೆ ಕೊಲೆ ಮಾಡಲು ಬೆನ್ನೆಲುಬಾಗಿ ನಿಲ್ಲುವುದು, ಪೊಳ್ಳು ಮರ್ಯಾದಾ ರಕ್ಷಣೆಯ ಕಾರಣಕ್ಕೆ ಅಮ್ಮನೇ ಮಗನಿಗೆ ಹಿಂಸೆಗೆ ಪ್ರೇರೇಪಿಸುವ ಸನ್ನಿವೇಶಗಳು ಸಮಾಜಕ್ಕೆ ಎಂಥ ಸಂದೇಶ ನೀಡಬಹುದು ಎಂಬ ಪ್ರಶ್ನೆ ಅವರಿಗೆ ಎದುರಾದಂತಿಲ್ಲ.

ಇಡೀ ಚಿತ್ರದಲ್ಲಿ ಹೆಚ್ಚು ಕನ್ನಡತನ ಇರುವುದು ಚಿಕ್ಕಣ್ಣ ಮತ್ತು ಗಿರಿ ಜೋಡಿಯ ಹಾಸ್ಯದಲ್ಲಿ. ಕೆಲವು ಸಲ ಹದ್ದುಮೀರಿದರೂ ಅವರು ಭರಪೂರ ರಂಜನೆಯನ್ನಂತೂ ನೀಡುತ್ತಾರೆ. ಕೊನೆಯಲ್ಲಿ ಸಾಧುಕೋಕಿಲ ಅವರೂ ಸಾತ್‌ ನೀಡುತ್ತಾರೆ. ಅದು ಸಾಲದೆಂಬಂತೆ ಪುನೀತ್‌ ಕೂಡ ಆಗೀಗ ಕಾಮಿಡಿ ಮಾಡಿದ್ದಾರೆ. ತಮ್ಮ ಹಿಂದಿನ ಸಿನಿಮಾಗೆ ಹೋಲಿಸಿದರೆ ರಶ್ಮಿಕಾ ಮಂದಣ್ಣ, ಇನ್ನೊಂದಿಷ್ಟು ಬಗೆಯ ಮುಖಭಾವಗಳನ್ನು ಕಲಿತುಕೊಂಡಿದ್ದಾರೆ.

ರವಿಶಂಕರ್‌ ಅವರಿಗೆ ಅಬ್ಬರಿಸಲು ಹೆಚ್ಚು ಅವಕಾಶವಿಲ್ಲ. ಖಳನಾಗಿ ಮುಖೇಶ್‌ ತಿವಾರಿ ಗಮನಸೆಳೆಯುತ್ತಾರೆ. ರಮ್ಯಕೃಷ್ಣ ತಮ್ಮ ಪಾತ್ರದ ಅಗತ್ಯವನ್ನು ತುಂಬಿದ್ದಾರೆ.

ನಾಯಕನ ಶೌರ್ಯ, ಪ್ರತಾಪಗಳು, ಖಳನ ಅಟ್ಟಹಾಸ, ಅಮ್ಮನ ಭಾವನಾತ್ಮಕತೆ ಎಲ್ಲವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವಲ್ಲಿ ರವಿ ಬಸ್ರೂರ ಸಂಗೀತ ಪಾತ್ರ ದೊಡ್ಡದಿದೆ. ಅವರ ಸಂಯೋಜನೆಯ ಯಾವ ಹಾಡೂ ಮತ್ತೆ ಮತ್ತೆ ಗುನುಗಿಕೊಳ್ಳುವಂತಿಲ್ಲ. ಆದರೆ ಆ ಕ್ಷಣದ ಕಮರ್ಷಿಯಲ್‌ ಅಗತ್ಯವನ್ನು ಪೂರೈಸಲು ಶಕ್ತವಾಗಿವೆ. ಸ್ವಾಮಿ ಜೆ. ಛಾಯಾಗ್ರಹಣ ಅಚ್ಚುಟ್ಟಾಗಿದೆ.

ದೊಡ್ಡಪರದೆಯ ಮೇಲೆ ಪುನೀತ್‌ ಅವರನ್ನು ಒಂದಿಷ್ಟು ಹೊತ್ತು ಆರಾಧನಾಭಾವದಿಂದ ನೋಡಲು ಬಯಸುವವರಿಗೆ ಈ ಚಿತ್ರ ಇಷ್ಟವಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry