ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮು, ಚುಮು ಚಳಿಗೆ ನಡುಗಿದ ಜನತೆ

Last Updated 21 ಡಿಸೆಂಬರ್ 2017, 10:15 IST
ಅಕ್ಷರ ಗಾತ್ರ

ಧಾರವಾಡ: ಕಳೆದ ನಾಲ್ಕು ದಿನಗಳಿಂದ ಚಳಿಯ ಕೊರೆತ ಹೆಚ್ಚಾಗಿದೆ. ಮೂಲೆಯಲ್ಲಿದ್ದ ಮಫ್ಲರ್‌, ಸ್ವೆಟ್ಟರ್‌ಗಳು ಹೊರಬಂದಿವೆ. ಚಳಿಗೆ ಜನರು ನಡುಗಲಾರಂಭಿಸಿದ್ದಾರೆ.

ಕಳೆದ ವರ್ಷ ಇದೇ ದಿನ 12.6ಡಿಗ್ರಿ ಇದ್ದ ತಾಪಮಾನ, ಈ ಬಾರಿ 11.4ಕ್ಕೆ ಕುಸಿದಿದೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಕಳೆದ ವರ್ಷದ ಅತ್ಯಂತ ಕನಿಷ್ಠ ತಾಪಮಾನ 10 ಡಿಗ್ರಿ ದಾಖಲಾಗಿತ್ತು.

‘ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಅದರ ಪ್ರಭಾವ ನಮ್ಮ ರಾಜ್ಯದ ಮೇಲೂ ಆಗುತ್ತಿರುವುದರಿಂದ ಮೇಲ್ಮೈ ಚಳಿ ಗಾಳಿ ಬೀಸುತ್ತಿದೆ. ಜತೆಗೆ ವಾತಾವರಣದಲ್ಲಿ ಆದ್ರತೆಯ ಪ್ರಮಾಣ ಕುಸಿದಿದೆ. ಹೀಗಾಗಿ ವಾತಾವರಣದಲ್ಲಿದ್ದ ನೀರನ್ನು ಗಾಳಿ ಹೆಚ್ಚಾಗಿ ಹೀರಿಕೊಳ್ಳುತ್ತಿರುವುದರಿಂದ ಚಳಿ ಪ್ರಮಾಣ ಹೆಚ್ಚೆನಿಸುತ್ತಿದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಪ್ರಾಧ್ಯಾಪಕ ಡಾ. ಶೇಖರಪ್ಪ ಹಾಲಕಟ್ಟಿ ಹೇಳಿದರು.

‘ಡಿ. 23ರ ನಂತರ ಸೂರ್ಯ ದಕ್ಷಿಣದಿಂದ ಪಥ ಬದಲಿಸಲು ಆರಂಭಿಸುತ್ತಾನೆ. ಹೀಗಾಗಿ ಸೂರ್ಯನ ಕಿರಣಗಳು ನೇರವಾಗಿ ಬೀಳದೆ, ಓರೆಯಾಗಿ ಭೂಮಿಗೆ ಬೀಳುವುದರಿಂದಲೂ ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಡಿಸೆಂಬರ್ ಅಂತ್ಯ ಹಾಗೂ ಜ.14ರ ಹೊತ್ತಿಗೆ ಸೂರ್ಯ ಉತ್ತರಕ್ಕೆ ಪಥ ಬದಲಿಸುವವರೆಗೂ ಚಳಿ ಇದ್ದೇ ಇರುತ್ತದೆ’ ಎಂದರು.

‘ಜನರಿಗೆ ಚಳಿಯ ಬಿಸಿ ತಾಗುತ್ತಿದ್ದರೂ ಕೆಲ ಬೆಳೆಗಳಿಗೆ ಚಳಿ ಒಳ್ಳೆಯದೇ ಆಗಿದೆ. ಗೋಧಿ, ಕಡಲೆ, ಕುಸುಬೆ ಬೆಳೆಗಳ ಬೆಳವಣಿಗೆಗೆ ಚಳಿಯ ಇಬ್ಬನಿಯೇ ಸಾಕು. ಆದರೆ, ಕುಸಬೆ ಬೆಳೆಗೆ ಹೇನುಭಾದೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದರ ಹತೋಟಿಗೆ ಕ್ರಮ ಕೈಗೊಳ್ಳಬೇಕು. ಎಡೆ ಹೊಡೆದರೆ ನೀರು ಆವಿಯಾಗುವುದನ್ನು ತಡೆಗಟ್ಟಬಹುದು. ಬೆಳೆಯೂ ಉತ್ತಮವಾಗಿರಲಿದೆ’ ಎಂದು ಡಾ.ಹಾಲಕಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT