7
ಶಾಸಕರ ಗ್ರಾಮ ಸಂಚಾರದ ವೇಳೆ ಕೇಳಿ ಬಂದ ದೂರು

ಹಣ ಕೊಟ್ಟವರಿಗೆ ಎರಡೆರಡು ಮನೆ ಹಂಚಿಕೆ

Published:
Updated:
ಹಣ ಕೊಟ್ಟವರಿಗೆ ಎರಡೆರಡು ಮನೆ ಹಂಚಿಕೆ

ಔರಾದ್: ‘ಹಣ ಕೊಟ್ಟವರಿಗೆ ಮನೆ ಹಂಚಿಕೆ ಮಾಡಲಾಗುತ್ತದೆ. ಒಂದೊಂದು ಕುಟುಂಬದಲ್ಲಿ ಎಡ್ಮೂರು ಸರ್ಕಾರಿ ಮನೆ ಇವೆ. ಆದರೆ ನಾವು ಈಗಲೂ ಗುಡಿಸಲಿನಲ್ಲಿ ಇದ್ದೇವೆ’ ಎಂದು ತಾಲ್ಲೂಕಿನ ಗಣೇಶಪುರ (ಎ) ಗ್ರಾಮದ ಮಹಿಳೆಯರು ಗೋಳು ತೋಡಿಕೊಂಡರು.

ಶಾಸಕ ಪ್ರಭು ಚವಾಣ್ ಮತ್ತು ಅಧಿಕಾರಿಗಳು ಬುಧವಾರ ನಡೆಸಿದ ಗ್ರಾಮ ಸಂಚಾರದ ವೇಳೆ ಗಣೇಶಪುರ ಗ್ರಾಮದ ಮಹಿಳೆಯರು ತಮ್ಮ ಊರಿನ ಸಮಸ್ಯೆಗಳು ಗಟ್ಟಿ ಧ್ವನಿಯಿಂದಲೇ ಹೇಳಿದರು. ‘ನೀವು ಬೇಕಾದರೆ ನಮ್ಮ ಮನೆಗೆ ಬನ್ನಿ, ನಮ್ಮ ಕಷ್ಟ ಏನು ಅಂತ ನಿಮಗೆ ಗೊತ್ತಾಗುತ್ತದೆ. ಎಷ್ಟೋ ಸಲ ಅರ್ಜಿ ಹಾಕಿದರೂ ಒಂದು ಮನೆ ಸಿಕ್ಕಿಲ್ಲ. ಆದರೆ ಹಣ ಕೊಟ್ಟವರಿಗೆ ಮತ್ತು ಪ್ರಭಾವ ಬಳಸುವವರಿಗೆ ಎರಡೆರಡು ಮನೆ ಮಂಜೂರು ಮಾಡಲಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಈಗ ಚುನಾವಣೆ ಸಮೀಪಿಸುತ್ತಿದೆ. ಅದಕ್ಕಾಗಿ ಈಗ ನಮ್ಮ ಸಮಸ್ಯೆ ಕೇಳಲು ಬರುತ್ತಿದ್ದೀರಿ’ ಎಂದು ಮಹಿಳೆಯೊಬ್ಬರು ನೇರವಾಗಿಯೇ ಅಂದು ಬಿಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಪ್ರಭು ಚವಾಣ್, ‘ನಾನು ಈಗ ಮತ ಕೇಳಲು ನಿಮ್ಮ ಬಳಿ ಬಂದಿಲ್ಲ. ಪ್ರತಿ ವರ್ಷದಂತೆ ಈಗಲೂ ಗ್ರಾಮ ಸಂಚಾರ ನಡೆಸಿ ನಿಮ್ಮ ಸಮಸ್ಯೆ ಕಷ್ಟ–ಸುಖ ಕೇಳಲು ಬಂದಿದ್ದೇನೆ’ ಎಂದು ಹೇಳಿ ಸಮಾಧಾನಪಡಿಸಿದರು.

‘ಇಂದು ಐದಾರು ಊರಿನಲ್ಲಿ ನಡೆಸಿದ ಗ್ರಾಮ ಸಂಚಾರದ ವೇಳೆ ಬಹುತೇಕ ಜನ ಮನೆ ಹಂಚಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಿವೇಶನ ರಹಿತ ಬಡ ಜನರಿಗೆ ಮನೆ ಹಂಚಲು ತಿಳಿಸುತ್ತದೆ. ಆದರೆ ಹಣ ಪಡೆದು ಅರ್ಹರಿಗೆ ವಂಚನೆ ಮಾಡುವುದು ಸರಿಯಲ್ಲ ’ಎಂದು ಶಾಸಕರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಪಿಡಿಒಗಳು ಗ್ರಾಮಕ್ಕೆ ಬರುವುದಿಲ್ಲ. ಶೌಚಾಲಯ ಕಟ್ಟಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಕಟ್ಟಿಕೊಂಡರೆ ಸಮಯಕ್ಕೆ ಸರಿಯಾಗಿ ಹಣ ನೀಡುವುದಿಲ್ಲ. ಪಡಿತರ ಧಾನ್ಯ ಸರಿಯಾಗಿ ಕೊಡುವುದಿಲ್ಲ. ನಿಯಮಿತವಾಗಿ ಕುಡಿಯಲು ನೀರು ಸಿಗುವುದಿಲ್ಲ. ಕೊಳವೆ ಬಾವಿ ಕೆಟ್ಟರೆ ವಾರಗಟ್ಟಲೇ ರಿಪೇರಿ ಮಾಡುವುದಿಲ್ಲ. ಗ್ರಾಮ ಸೇವಕರು ಯಾರು ಎಂಬುದು ಗೊತ್ತಿಲ್ಲ’ ಎಂದು ಗ್ರಾಮ ಸಂಚಾರದ ವೇಳೆ ಜನ ಅಧಿಕಾರಿಗಳ ಸಮ್ಮುಖದಲ್ಲೇ ತಮ್ಮ ಊರಿನ ಸಮಸ್ಯೆ ಹೇಳಿಕೊಂಡರು.

‘ಗಣೇಶಪುರದಲ್ಲಿನ ಸ್ಮಶಾನ ಭೂಮಿ ಸಮಸ್ಯೆ ಆದಷ್ಟು ಬೇಗ ಪರಿಹರಿಸಲಾಗುವುದು. ಪಡಿತರ ಧಾನ್ಯ ನಿಯಮಿತವಾಗಿ ವಿತರಿಸದ ಡೀಲರ್‌ಗಳ ಬದಲಾವಣೆ ಮಾಡಲಾಗುವುದು’ ಎಂದು ತಹಶೀಲ್ದಾರ್ ಎಂ. ಚಂದ್ರಶೇಖರ ಈ ವೇಳೆ ಭರವಸೆ ನೀಡಿದರು.

‘ಪಿಡಿಒಗಳು ಕಡ್ಡಾಯವಾಗಿ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಉಳಿದು ಅಲ್ಲಿ ಬರುವ ಊರುಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಅವರ ಕೆಲಸ. ಆದರೆ ಕೆಲ ಕಡೆ ಪಿಡಿಒಗಳ ಕಾರ್ಯವೈಖರಿ ಬಗ್ಗೆ ದೂರುಗಳು ಬಂದಿವೆ. ಸುಧಾರಿಸಿಕೊಳ್ಳಲು ಸೂಚಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ ತಿಳಿಸಿದರು.

ಹುಲ್ಯಾಳ, ಎಕಂಬಾ, ಜಮಾಲಪುರ, ಖಂಡಿಕೇರಿ, ಮುಂಗನಾಳ ಗ್ರಾಮದಲ್ಲಿ ಗ್ರಾಮ ಸಂಚಾರ ಸಭೆ ನಡೆಯಿತು. ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

*

ಗ್ರಾಮ ಸಂಚಾರದ ವೇಳೆ ಜನ ತಮ್ಮ ಸಮಸ್ಯೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ ಸೌಲಭ್ಯ ವಂಚಿತರಿಗೆ ನ್ಯಾಯ ಒದಗಿಸಿಕೊಡಬೇಕು.

–ಪ್ರಭು ಚವಾಣ್, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry