ಹೂಡಿಕೆದಾರರ ಸ್ವರ್ಗ ಆರ್‌.ಆರ್‌. ನಗರ

7

ಹೂಡಿಕೆದಾರರ ಸ್ವರ್ಗ ಆರ್‌.ಆರ್‌. ನಗರ

Published:
Updated:
ಹೂಡಿಕೆದಾರರ ಸ್ವರ್ಗ ಆರ್‌.ಆರ್‌. ನಗರ

ಬೆಂಗಳೂರು–ಮೈಸೂರು ರಸ್ತೆ, ವರ್ತುಲ ರಸ್ತೆ, ನೈಸ್‌ ರಸ್ತೆ ಹಾಗೂ ಕೆಂಗೇರಿ–ಉತ್ತರಹಳ್ಳಿ– ಬನಶಂಕರಿ ರಸ್ತೆಯಿಂದ ಸುತ್ತುವರೆದಿರುವ ಪ್ರದೇಶ ರಾಜರಾಜೇಶ್ವರಿನಗರ. ವರ್ತುಲ ರಸ್ತೆಯ ಹೊರಭಾಗದಲ್ಲಿರುವ ಈ ಪ್ರದೇಶವನ್ನು 15 ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯ ಎಂದೇ ಗುರುತಿಸಲಾಗಿತ್ತು. ಆದರೆ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಬೆಳವಣಿಗೆಯಿಂದಾಗಿ ಇದೀಗ ರಾಜರಾಜೇಶ್ವರಿ ನಗರವನ್ನೂ ದಾಟಿ ಬೆಂಗಳೂರು ಬೆಳೆದಿದೆ. ಹೊರವಲಯ ಎನ್ನುತ್ತಿದ್ದ ಈ ಭಾಗ ರಾಜಧಾನಿಯ ಪ್ರತಿಷ್ಠಿತ ವಸತಿ ಬಡಾವಣೆಗಳಲ್ಲಿ ಒಂದಾಗಿ ರೂಪುಗೊಂಡಿದೆ.

ವ್ಯವಸ್ಥಿತ ಮತ್ತು ಯೋಜಿತ ಬಡಾವಣೆಗಳು, ವಿಶಾಲ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಕುಡಿಯಲು ಕಾವೇರಿ ನೀರಿನ ಸಂಪರ್ಕ, ಹಲವು ಉದ್ಯಾನಗಳು, ಪ್ರಸಿದ್ಧ ದೇವಾಲಯಗಳು ಇಲ್ಲಿರುವುದರಿಂದ, ಈ ಭಾಗದಲ್ಲಿ ವಾಸಿಸಲು ಮತ್ತು ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಜನರು ಆಸಕ್ತಿ ತೋರುತ್ತಿದ್ದಾರೆ.

ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಸ್ವರ್ಗ ಎಂಬಂತೆ ರಾಜರಾಜೇಶ್ವರಿ ನಗರ (ಆರ್‌.ಆರ್‌.ನಗರ) ಬೆಳೆದು ನಿಂತಿದೆ. ಇಲ್ಲಿರುವ ಐಡಿಯಲ್‌ ಹೋಮ್ಸ್, ಬೆಮೆಲ್‌, ಬಿಎಚ್‌ಇಎಲ್‌ ಬಡಾವಣೆ, ಕೆಂಚೇನಹಳ್ಳಿ, ಗೊಟ್ಟಿಗೆರೆ, ಪಟ್ಟಣಗೆರೆ ಪ್ರದೇಶಗಳು ಗಣನೀಯವಾಗಿ ಬೆಳೆದಿವೆ. ನಗರಸಭೆಯಾಗಿದ್ದ ರಾಜರಾಜೇಶ್ವರಿನಗರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ ನಂತರ ಈ ಭಾಗದಲ್ಲಿ ಮೂಲ ಸೌಕರ್ಯ ವೃದ್ಧಿಸಿದ್ದು, ಬೃಹತ್‌ ವಸತಿ ಯೋಜನೆಗಳು ಧಾವಿಸಿವೆ. ಇಲ್ಲಿ ಅಪಾರ್ಟ್‌ಮೆಂಟ್‌ಗಳ ಕಾರುಬಾರು ಜೋರು.

ಗ್ಲೋಬಲ್‌ ಸಿಟಿಯಲ್ಲಿ ಹಲವೂ ಐಟಿ ಕಂಪೆನಿಗಳಿದ್ದು ಉದ್ಯೋಗಾವಕಾಶವೂ ಹೆಚ್ಚಿದೆ. ಇಲ್ಲಿಗೆ ಸಮೀಪವೇ ಜ್ಞಾನಭಾರತಿ, ನಾಯಂಡಹಳ್ಳಿ ರೈಲು ನಿಲ್ದಾಣಗಳಿವೆ. ಆರ್‌.ಆರ್‌.ನಗರದ ಆರ್ಚ್‌ ಬಳಿಯೇ ಮೆಟ್ರೊ ರೈಲು ನಿಲ್ದಾಣವೂ ಬರಲಿರುವುದು ಇಲ್ಲಿನ ರಿಯಲ್‌ ಎಸ್ಟೇಟ್‌ ಬೆಳವಣಿಗೆಗೆ ಇನ್ನಷ್ಟು ವೇಗ ನೀಡಲಿದೆ ಎಂಬ ನಿರೀಕ್ಷೆ ಇದೆ.

ದೇವಾಲಯಗಳ ತಾಣ: ರಾಜರಾಜೇಶ್ವರಿ ನಗರ ಎಂದ ಕೂಡಲೇ ಬೆಂಗಳೂರಿಗರಿಗೆ ನೆನಪಾಗುವುದು ರಾಜರಾಜೇಶ್ವರಿ ದೇವಾಲಯ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ಈ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗದಿಂದ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಬೃಹತ್‌ ಪ್ರವೇಶ ದ್ವಾರವಿದ್ದು, ಅದು ರಾಜರಾಜೇಶ್ವರಿ ನಗರದ ಹೆಬ್ಬಾಗಿಲು. ಇದರ  ನಿರ್ಮಾಣವಾದ ನಂತರದಿಂದ ಆರ್‌.ಆರ್‌.ನಗರದ ಬೆಳವಣಿಗೆಯ ವೇಗವೂ ಹೆಚ್ಚಾಗಿದೆ.

ಇದರ ಜತೆಗೆ ನಿಮಿಷಾಂಬ ದೇವಾಲಯ, ಷಣ್ಮುಖ ದೇವಾಲಯ, ಓಂಕಾರ ಹಿಲ್ಸ್, ರಾಘವೇಂದ್ರ ಸ್ವಾಮಿ ದೇವಾಲಯ, ಭೀರೇಶ್ವರ, ಕಾಳಬೈರವೇಶ್ವರ, ಗಣಪತಿ ದೇವಾಲಯಗಳು ಪ್ರಮುಖವಾದವಾಗಿವೆ. ಅಲ್ಲದೆ ಇಲ್ಲಿನ ಕೆಂಚೇನಹಳ್ಳಿ, ಪಟ್ಟಣಗೆರೆ, ಗಟ್ಟಿಗೆರೆಯಲ್ಲಿ ಗ್ರಾಮ ದೇವತೆಯ ದೇವಾಲಯಗಳೂ ಇವೆ. ಈ ಮೂರು ಗ್ರಾಮಗಳ ಜನರೇ ಈ ಭಾಗದ ಬಹುತೇಕ ಭೂಮಿಯ ಮೂಲ ಒಡೆಯರು. ತಮ್ಮ ಜಮೀನನ್ನು ಈ ರೈತಾಪಿ ಜನರು ಮಾರಿದ ಕಾರಣಕ್ಕೆ ಇಂದು ಇಲ್ಲಿ ರಾಜರಾಜೇಶ್ವರಿ ನಗರ ತಲೆಯೆತ್ತಿದೆ. ಈ ಭಾಗದಲ್ಲಿ ಐಡಿಯಲ್‌ ಹೋಮ್ಸ್ ಬಡಾವಣೆ 1964ರಲ್ಲಿ ನಿರ್ಮಾಣಗೊಂಡಿದೆ. ನಂತರ ಇತರ ಬಡಾವಣೆಗಳು ಬೆಳೆದಿವೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು: ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜು, ಗ್ಲೋಬಲ್‌,  ಜೆಎಸ್‌ಎಸ್‌, ಎಸ್‌ಜೆಬಿಐಟಿ, ಆರ್‌ಎನ್‌ಎಸ್‌ಐಟಿ ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ಕೆಲ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಇದರ ಜತೆಗೆ ಬಾಲ್ಡ್‌ವಿನ್‌ ಶಾಲೆ, ಹಿಲ್‌ ವೀವ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಸ್ವರ್ಗರಾಣಿ ಶಾಲೆ, ಜ್ಞಾನಾಕ್ಷಿ, ರಾಜರಾಜೇಶ್ವರಿ ಶಾಲೆ, ಗ್ಲೋಬಲ್‌ ಸ್ಕೂಲ್‌, ಬಿಜಿಎಸ್‌, ರಾಷ್ಟ್ರೋತ್ಥಾನ ಶಾಲೆ, ಅಕ್ಷರಾ ಇಂಟರ್‌ನ್ಯಾಷನಲ್‌, ಜೈನ್‌ ಕಾಲೇಜುಗಳು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, ಈ ಭಾಗದ ನಗರೀಕರಣದ ಬೆಳವಣಿಗೆಗೆ ಕೊಡುಗೆ ನೀಡಿವೆ.

ಇಲ್ಲಿಗೆ ಕೂಗಳತೆ ದೂರದಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಕೂಡ ಇದೆ. ಇಲ್ಲಿನ ಸಾವಿರಾರು ಎಕರೆ ಪ್ರದೇಶ ಹಸಿರುಮಯವಾಗಿದೆ. ಜತೆಗೆ ಆರ್‌.ಆರ್‌.ನಗರದಲ್ಲಿರುವ ನೇತಾಜಿ ಪಾರ್ಕ್‌, ಬಿಬಿಎಂಪಿ ಪಾರ್ಕ್‌ ಸೇರಿದಂತೆ ಕೆಲ ಉದ್ಯಾನಗಳು ಇಲ್ಲಿನ ಜನರ ವಾಯು ವಿಹಾರಕ್ಕೆ ಮತ್ತು ಮಕ್ಕಳ ಮನರಂಜನೆಗೆ ಅವಕಾಶ ಕಲ್ಪಿಸಿದೆ. ಕೆಲ ಪಾರ್ಕ್‌ಗಳಲ್ಲಿ ಬಯಲು ರಂಗಮಂದಿರವೂ ಇದ್ದೂ, ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ.

ಉದ್ಯಾನಗಳ ಜತೆಗೆ ಇಲ್ಲಿ ಪ್ರತಿಷ್ಠಿತ ಕ್ಲಬ್‌ಗಳೂ ಇವೆ. ಐಡಿಯಲ್‌ ಹೋಮ್ಸ್‌ ಕ್ಲಬ್‌, ದಿ ಕ್ಲಬ್‌, ಬೆಮೆಲ್‌ ಕ್ಲಬ್‌ ಪ್ರಮುಖವಾದವು. ಇಲ್ಲೆಲ್ಲ ಷಟಲ್‌ ಬ್ಯಾಡ್ಮಿಂಟನ್‌, ಈಜು, ಟೇಬಲ್‌ ಟೆನಿಸ್‌, ಕೇರಂ ಸೇರಿದಂತೆ ಒಳಾಂಗಣ ಕ್ರೀಡೆಗಳನ್ನಾಡಲು ಅವಕಾಶ ಇದೆ. ಬೆಂ.ವಿ.ವಿ ಪಕ್ಕದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ), ಭಾರತೀಯ ಅಂಕಿ ಸಂಖ್ಯಾ ಸಂಸ್ಥೆ, ‘ರೀಜಿನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌’ ಇಲ್ಲಿಗೆ ಸಮೀಪದಲ್ಲಿರುವ ಕೇಂದ್ರ ಸರ್ಕಾರಿ ಸಂಸ್ಥೆಗಳಾಗಿವೆ. ಐಡಿಯಲ್ ಹೋಮ್ಸ್‌ನಲ್ಲಿರುವ ಸುಭಾಷ್‌ ಚಂದ್ರಬೋಸ್‌ ಗ್ರಂಥಾಲಯ ಹೈಟೆಕ್‌ ಆಗಿದೆ. ಚನ್ನಬಸಪ್ಪ, ಎಸ್‌.ಎಸ್‌, ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗಳು ಈ ಭಾಗದಲ್ಲಿರುವ ಪ್ರಮುಖ ಆಸ್ಪತ್ರೆಗಳಾಗಿವೆ.

ಹೂಡಿಕೆದಾರರ ಸ್ವರ್ಗ: ಇಷ್ಟೆಲ್ಲ ಸೌಲಭ್ಯ ಹೊಂದಿರುವ ಆರ್‌.ಆರ್‌.ನಗರದಲ್ಲಿ ಬೃಹತ್‌ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಖಾಸಗಿ ಬಿಲ್ಡರ್‌ಗಳಲ್ಲಿ ತೀವ್ರ ಪೈಪೋಟಿ ಇದೆ. ಮೂರು ಮಹಡಿ, ನಾಲ್ಕು ಮಹಡಿ ಅಪಾರ್ಟ್‌ಮೆಂಟ್‌ನಿಂದ ಹಿಡಿದು 18 ಮಹಡಿವರೆಗಿನ ಅಪಾರ್ಟ್‌ಮೆಂಟ್‌ಗಳು ಇಲ್ಲಿ ತಲೆಯೆತ್ತಿವೆ. 2 ಬಿಎಚ್‌ಕೆ, 3 ಬಿಎಚ್‌ಕೆ, ಲಕ್ಷ್ಯುರಿ, ಡಿಲಕ್ಸ್‌ ಫ್ಲಾಟ್‌ಗಳನ್ನು ಬಿಲ್ಡರ್‌ಗಳು ಇಲ್ಲಿ ನಿರ್ಮಿಸುತ್ತಿದ್ದಾರೆ.

ಸ್ಥಳೀಯ ಬಿಲ್ಡರ್‌ಗಳಿಂದ ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ಮಟ್ಟದ ಬಿಲ್ಡರ್‌ಗಳು ಇಲ್ಲಿ ಭಾರಿ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಮುಖವಾಗಿ ಶೋಭಾ, ಪ್ರೆಸ್ಟೀಜ್‌, ಸೆಂಚ್ಯುರಿ, ಡಿ.ಎಸ್‌.ಮ್ಯಾಕ್ಸ್‌, ಚೈತ್ರಾ, ಪಿರಮಿಡ್‌ ಸೇರಿದಂತೆ ಹಲವು ಪ್ರತಿಷ್ಠಿತ ಡೆವಲಪರ್‌ ಕಂಪೆನಿಗಳು ಇಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ತೊಡಗಿವೆ.

ಎಲ್ಲ ಸೌಲಭ್ಯಗಳು ಇಲ್ಲಿ ಇರುವುದರಿಂದ, ರಾಜಧಾನಿಯ ಪ್ರತಿಷ್ಠಿತ ವಸತಿ ಪ್ರದೇಶವಾಗಿ ಬೆಳೆದಿರುವುದರಿಂದ ಇಲ್ಲಿನ ಭೂಮಿಗೆ ಚಿನ್ನದ ಬೆಲೆಯೂ ಇದೆ. 10 ವರ್ಷದಿಂದೀಚೆಗೆ ಭೂಮಿಯ ಬೆಲೆ ನಾಲ್ಕು, ಐದು ಪಟ್ಟು ಹೆಚ್ಚಳವಾಗಿದೆ. 2010ರಿಂದ ಈಚೆಗೆ ಎರಡು, ಮೂರು ಪಟ್ಟು ಹೆಚ್ಚಾಗಿರುವುದರನ್ನು ಗುರುತಿಸಬಹುದು. ಇಲ್ಲಿ ವಸತಿ ಯೋಜನೆಗಳಿಗೆ ಹೂಡಿಕೆ ಮಾಡಿರುವ ಬಿಲ್ಡರ್‌ಗಳಿಗೆ ಹಾಗೂ ಅವರಿಂದ ಮನೆಗಳನ್ನು ಖರೀದಿ ಮಾಡಿರುವ ಗ್ರಾಹಕರಿಗೆ ನಷ್ಟವಾಗಿಲ್ಲ ಎನ್ನುತ್ತಾರೆ ಐಡಿಯಲ್‌ ಹೋಮ್ಸ್‌ ಸೊಸೈಟಿಯ ಉಪಾಧ್ಯಕ್ಷ ರಾಜ್‌ಕುಮಾರ್‌.

10 ವರ್ಷದ ಹಿಂದೆ ಚದರ ಅಡಿಗೆ ₹1200ಕ್ಕೆ ಇಲ್ಲಿ ಫ್ಲ್ಯಾಟ್‌ಗಳು ದೊರೆಯುತ್ತಿದ್ದವು. ಈಗ ಅವುಗಳ ಬೆಲೆ ಚ.ಅಡಿಗೆ ಬೆಲೆ ₹4,500ರಿಂದ ₹5,500ರ ಸುತ್ತಮುತ್ತ ಇದೆ. ಇಲ್ಲಿ ಹೊಸ ಫ್ಲ್ಯಾಟ್‌ಗಳ ಬೆಲೆಯೂ ಚ.ಅಡಿಗೆ ₹4,800ರಿಂದ ₹7,000 ಸಮೀಪದಲ್ಲಿದೆ ಎಂದು ಅವರು ವಿವರಿಸುತ್ತಾರೆ.

ಇನ್ನು ವಸತಿ ಯೋಗ್ಯ ಭೂಮಿಯ ಬೆಲೆ ಸದ್ಯಕ್ಕೆ ಚ.ಅಡಿಗೆ ₹8,000ದಿಂದ ₹10,000 ಇದೆ. ವಾಣಿಜ್ಯ ಬಳಕೆ ಭೂಮಿ ಚ.ಅಡಿಗೆ ₹12,000ದಿಂದ ₹15,000ದವರೆಗೂ ಇದೆ. ಬೆಲೆ ರಸ್ತೆಯಿಂದ ರಸ್ತೆಗೆ ವ್ಯತ್ಯಾಸವಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

ಆರ್‌.ಆರ್‌.ನಗರದಲ್ಲಿ ನೂರಾರು ಹೊಸ ವಸತಿ ಯೋಜನೆಗಳು ನಿರ್ಮಾಣ ಹಂತದಲ್ಲಿದ್ದು, ಮನೆ ಕೊಳ್ಳುವವರನ್ನು ಕೈಬೀಸಿ ಕರೆಯುತ್ತಿದೆ.

***

ಸ್ವಲ್ಪ ಹಿನ್ನಡೆ ಆಗಿದ್ದರೂ ಬೆಲೆ ಕುಸಿದಿಲ್ಲ

ನಗದು ವ್ಯವಹಾರಕ್ಕೆ ಬಿದ್ದಿರುವ ಕಡಿವಾಣ ಹಾಗೂ ಜಿಎಸ್‌ಟಿ ಜಾರಿಯಿಂದ ಈ ಭಾಗದ ರಿಯಲ್‌ ಎಸ್ಟೇಟ್‌ ಬೆಳವಣಿಗೆಗೆ ಕೊಂಚ ಹಿನ್ನಡೆ ಆಗಿದೆ. ಗ್ರಾಹಕರು ಮನೆಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣ ಸಾಕಷ್ಟು ಫ್ಲ್ಯಾಟ್‌ಗಳು ಖಾಲಿ ಇವೆ. ಮೊದಲು ಫ್ಲ್ಯಾಟ್‌ಗಳು ನಿರ್ಮಾಣದ ಹಂತದಲ್ಲಿರುವಾಗಲೇ ಬಿಕರಿಯಾಗುತ್ತಿದ್ದವು. ಆದರೆ ಈಗ ನಿರ್ಮಾಣವಾಗಿ ಎರಡು ವರ್ಷಗಳಾದರೂ ಖರೀದಿದಾರರು ಆಸಕ್ತಿ ತೋರುತ್ತಿಲ್ಲ ಎಂಬುದು ಇಲ್ಲಿನ ಬಿಲ್ಡರ್‌ಗಳ ಅಳಲು. ಇಷ್ಟಾದರೂ ಫ್ಲ್ಯಾಟ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲು ಯಾವ ಬಿಲ್ಡರ್‌ಗಳು ಆಸಕ್ತಿ ತೋರಿಸಿಲ್ಲ.

ಬಫರ್‌ ಜೋನ್‌ ಆತಂಕ: ಆರ್‌.ಆರ್‌.ನಗರದಲ್ಲಿ ವೃಷಭಾವತಿ ನಾಲೆಯೂ ಹರಿದು ಹೋಗಿದೆ. ಇದರ ಅಕ್ಕ–ಪಕ್ಕದ ಪ್ರದೇಶವನ್ನು ಬಫರ್‌ಜೋನ್‌ ಎಂದು ಘೋಷಿಸಲಾಗಿದೆ. ಇದೂ ಸೇರಿದಂತೆ ಕೆಲ ರಾಜಕಾಲುವೆಗಳು ಒತ್ತುವರಿಯಾಗಿವೆ ಎಂಬ ಆರೋಪಗಳೂ ಇವೆ. ಈ ಸಂಬಂಧ ಬೆಂಗಳೂರು ಜಿಲ್ಲಾಡಳಿತ ಕಳೆದ ವರ್ಷ ಈ ಭಾಗದ ಕೆಲ ಕಟ್ಟಡಗಳನ್ನು ಕೆಡವಿತ್ತು. ಅಲ್ಲದೆ ಕೆಲ ಅಪಾರ್ಟ್‌ಮೆಂಟ್‌ಗಳು ನಾಲೆಯ ಸಮೀಪವೇ ನಿರ್ಮಾಣವಾಗಿರುವುದರಿಂದ ಅಲ್ಲಿನ ಫ್ಲ್ಯಾಟ್‌ಗಳನ್ನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.

***

ಬಾಡಿಗೆ ಮನೆಗೆ
1 ಬಿಎಚ್‌ಕೆ ₹ 7,500 ದಿಂದ ಆರಂಭ
2 ಬಿಎಚ್‌ಕೆ ₹12,000 ದಿಂದ ಆರಂಭ
3 ಬಿಎಚ್‌ಕೆ ₹ 15,000ದಿಂದ ಆರಂಭ
* ಅಪಾರ್ಟ್‌ಮೆಂಟ್‌ಗಳಲ್ಲಿ ಬಾಡಿಗೆ ಮನೆ ಪಡೆಯುವವರು ತಿಂಗಳಿಗೆ ಕನಿಷ್ಠ ₹2,000 ನಿರ್ವಹಣಾ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ

ಫ್ಲ್ಯಾಟ್‌ಗಳ ಬೆಲೆ
2 ಬಿಎಚ್‌ಕೆ (1,200 ಚ.ಅ) ₹ 57 ಲಕ್ಷದಿಂದ ಆರಂಭ
3 ಬಿಎಚ್‌ಕೆ (1,600 ಚ. ಅ) ₹77 ಲಕ್ಷದಿಂದ ಆರಂಭ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry