7

ರವಿ ಪುತ್ರನ ‘ಬೃಹಸ್ಪತಿ’ ವೇಷ

Published:
Updated:
ರವಿ ಪುತ್ರನ ‘ಬೃಹಸ್ಪತಿ’ ವೇಷ

ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಈಗ ‘ಬೃಹಸ್ಪತಿ’ಯ ವೇಷ ಧರಿಸಿದ್ದಾರೆ. ಈ ಸಿನಿಮಾದ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು.

ಸಿ.ಡಿ. ಬಿಡುಗಡೆ ನೆಪದಲ್ಲೇ ಸಿನಿಮಾ ಬಗ್ಗೆಯೂ ಒಂದಿಷ್ಟು ಮಾಹಿತಿ ನೀಡಲು ‘ಬೃಹಸ್ಪತಿ’ ತಂಡ ಸುದ್ದಿಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ನಾಯಕ ಮನೋರಂಜನ್ ಮಾತ್ರವಲ್ಲದೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್, ನಿರ್ದೇಶಕ ನಂದಕಿಶೋರ್‌, ನಟರಾದ ಜಗ್ಗೇಶ್, ಅವಿನಾಶ್, ಸಾಧು ಕೋಕಿಲ ಸೇರಿದಂತೆ ಹಲವರು ಅಲ್ಲಿ ಸೇರಿದ್ದರು.

ಮನೋರಂಜನ್ ಮತ್ತು ನಟ ತಾರಖ್ ಪೊನ್ನಪ್ಪ ಅವರು ಕಾರ್ಯಕ್ರಮದ ಆರಂಭದಲ್ಲಿಯೇ, ವೇದಿಕೆಯ ಮೇಲೆ ಕೆಲವು ಡೈಲಾಗ್‌ಗಳನ್ನು ಹೇಳಿ ಅಲ್ಲಿದ್ದವರ ಹುಬ್ಬೇರುವಂತೆ ಮಾಡಿದರು.

ಇದನ್ನು ಕಂಡ ನಿರ್ಮಾಪಕ ಮುನಿರತ್ನ, ‘ಮನೋರಂಜನ್ ಅವರ ಅಭಿನಯವನ್ನು ನಾನು ನೋಡಿದ್ದು ಇವತ್ತೇ. ಕನ್ನಡಕ್ಕೆ ಒಳ್ಳೆಯ ನಟ ಸಿಕ್ಕಿದ್ದಾರೆ. ಇವರಿಗೆ ಒಳ್ಳೆಯ ಭವಿಷ್ಯ ಇದೆ. ಒಬ್ಬ ಮಾಸ್ ಹೀರೊ ನಮಗೆ ಸಿಕ್ಕಿದ್ದಾರೆ ಎನ್ನಲು ಅಡ್ಡಿಯಿಲ್ಲ’ ಎಂದು ಮೆಚ್ಚುಗೆ ಸೂಚಿಸಿದರು. ‘ತಂದೆ ರವಿಚಂದ್ರನ್ ಅವರನ್ನೂ ಮೀರಿಸುವಂತೆ ನೀನು ಬೆಳೆಯಬೇಕು’ ಎಂದು ಮನೋರಂಜನ್ ಅವರಿಗೆ ಕಿವಿಮಾತು ಹೇಳಿದರು.

ಇದೇ ಬಗೆಯ ಮೆಚ್ಚುಗೆಯ ಮಾತುಗಳು ನಟ ಜಗ್ಗೇಶ್ ಅವರಿಂದಲೂ ಬಂದವು. ‘ಮನೋರಂಜನ್ ಅವರು ಅಪ್ಪನಿಗಿಂತ ಸೂಪರ್ ಆಗಿದ್ದಾರೆ. ಎರಡು ಪುಟಗಳಷ್ಟಿರುವ ಸಂಭಾಷಣೆಯನ್ನು ಅದ್ಭುತವಾಗಿ ಹೇಳಿದ್ದಾರೆ. ರವಿ ತಮ್ಮ‌ ಪುತ್ರನನ್ನು ಸಿಂಹವನ್ನು ಸಾಕಿದಂತೆ ಸಾಕಿದ್ದಾರೆ. ಮಗ ತಾನಾಗಿಯೇ ಹೆಜ್ಜೆ ಇಟ್ಟು ನಡೆಯುವುದನ್ನು ಕಲಿಯಲಿ ಎನ್ನುವುದು ರವಿಚಂದ್ರನ್ ಅವರ ಉದ್ದೇಶ’ ಎಂದರು.

‘ಹತ್ತು ಪುಟಗಳಷ್ಟು ದೀರ್ಘವಾದ ಡೈಲಾಗ್ ಹೇಳುವ‌ ಮೀಟರ್ ತಮಗೆ ಇದೆ ಎಂಬುದನ್ನು ಮನೋರಂಜನ್ ತೋರಿಸಿದ್ದಾರೆ’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು ಜಗ್ಗೇಶ್.

‘ನನ್ನ ಎರಡನೆಯ ಸಿನಿಮಾ‌ ಇದು. ಮೊದಲು ನನ್ನಲ್ಲೇ ವಿಶ್ವಾಸ‌ ಇರಲಿಲ್ಲ. ಆದರೆ, ರಾಕ್‌ಲೈನ್ ವೆಂಕಟೇಶ್ ಅವರು ನನ್ನಲ್ಲಿ ಭರವಸೆ ತುಂಬಿದರು’ ಎಂದರು ಮನೋರಂಜನ್. ಸಿನಿಮಾವನ್ನು ಜನವರಿ 5ರಂದು ಬಿಡುಗಡೆ ಮಾಡಬೇಕು ಎನ್ನುವುದು ತಂಡದ ಗುರಿ. ‘ಈ ಸಿನಿಮಾವನ್ನು ಪ್ರೀತಿಯಿಂದ ಮಾಡಿದ್ದೇವೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು ನಂದಕಿಶೋರ್.

ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕಿದೆ. ಛಾಯಾಗ್ರಹಣದ ಹೊಣೆಯನ್ನು ಸತ್ಯ ಹೆಗಡೆ ಹೊತ್ತುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry