7

ಶುಕ್ರವಾರ 22–12–1967

Published:
Updated:

ಪೊಲೀಸ್‌ ಕಚೇರಿಯಲ್ಲಿ ‘ಚೀನ ನಿರ್ಮಿತ’ ಟೈಂಬಾಂಬ್‌ ಸ್ಫೋಟ

ಕಲ್ಕತ್ತ, ಡಿ. 21– 
ಇಂದು ಇಲ್ಲಿನ ಲಾಲ್‌ ಬಜಾರ್‌ ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ಚೀನ ನಿರ್ಮಿತವೆಂದು ಹೇಳಲಾದ ಟೈಂ ಬಾಂಬ್‌ ಸ್ಫೋಟಗೊಂಡು ಕಚೇರಿಯ ಲಿಫ್ಟ್‌ಗೆ ಭಾರಿ ಹಾನಿಯುಂಟಾಗಿದೆ.

ಲಿಫ್ಟಿನಲ್ಲಿರಿಸಲಾಗಿದ್ದ ಟೈಂ ಬಾಂಬ್‌ ಇಂದು ಸಂಜೆ ನಾಲ್ಕುಗಂಟೆ ಸಮಯದಲ್ಲಿ ಸ್ಫೋಟಗೊಂಡಿತು. ಸಾವು ನೋವೇನೂ ಸಂಭವಿಸಿಲ್ಲ.

ಟೈಂ ಬಾಂಬ್‌ ಸ್ಫೋಟ ಉಗ್ರಸ್ವರೂಪದಿದ್ದು, ಬಾಂಬಿನ ಅವಶೇಷ, ಲಿಫ್ಟಿನ ಮಾಳಿಗೆಯನ್ನು ಭೇದಿಸಿಕೊಂಡು, ಮೂರಂತಸ್ತಿನ ಕಟ್ಟಡದ ಮೇಲೆ ಛಾವಣೆಗೆ ಹೊಡೆದಿದೆಯೆಂದು ಅಧಿಕೃತ ವಕ್ತಾರರು ತಿಳಿಸಿದರು.

‘ಗುರುತಿಸಲಾಗದ’ ಕಪ್ಪು ಅಕ್ಕಿ!

ಬೆಂಗಳೂರು, ಡಿ. 21–
  ಪಿ.ಎಸ್‌. ಸದಸ್ಯ ಶ್ರೀ ವಿ. ಶ್ರೀನಿವಾಸ ಶೆಟ್ಟರು ಇಂದು ಮೇಲ್ಮನೆಯಲ್ಲಿ ‘ಕಪ್ಪು ಅಕ್ಕಿ’ಯನ್ನು ಪ್ರದರ್ಶಿಸಿ ಮಾನವನ ಸೇವನೆಗೆ ಅನರ್ಹವಾದ ಅಕ್ಕಿಯನ್ನು ನಗರದಲ್ಲಿ ಹಂಚಲಾಗುತ್ತಿದೆಯೆಂದು ಆಕ್ಷೇಪಿಸಿದರು.

‘ರಾಮರಾಯರೇ ಈಗಲೂ ಗೃಹಮಂತ್ರಿ’

ಬೆಂಗಳೂರು, ಡಿ. 21–
ಗೃಹಸಚಿವರ ರಾಜೀನಾಮೆ ವಿಷಯ ಮೇಲ್ಮನೆಯಲ್ಲಿ ಇಂದು ಮತ್ತೆ ಪ್ರಸ್ತಾಪಕ್ಕೆ ಬಂದಾಗ ಆಹಾರ ಸಚಿವ ಶ್ರೀ ಬಿ.ಡಿ. ಜತ್ತಿಯವರು ‘ರಾಜೀನಾಮೆ ಅಂಗೀಕಾರವಾಗುವವರೆಗೆ ತಾಂತ್ರಿಕವಾಗಿ, ಕಾನೂನು ಮತ್ತು ಘಟನಾತ್ಮಕ ದೃಷ್ಟಿಯಿಂದ ಶ್ರೀ ಎಂ.ವಿ. ರಾಮರಾವ್‌ರವರೇ ಗೃಹಸಚಿವರಾಗಿ ಮುಂದುವರಿಯುವರು’ ಎಂದು ತಿಳಿಸಿದರು.

ಬದಲಿ ಹೃದಯಿ ವಾಷ್‌ಕಾನ್‌ಸ್ಕಿ ನಿಧನ

ಕೇಪ್‌ಟೌನ್‌, ಡಿ. 21–
ವಿಶ್ವದಲ್ಲೇ ಪ್ರಥಮ ಬಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಬದಲಿ ಹೃದಯ ಪಡೆದ ಲೂಯಿಸ್‌ ವಾಷ್‌ಕಾನ್‌ಸ್ಕಿ ಇಂದು ಬೆಳಿಗ್ಗೆ ನಿಧನರಾದರು.

ಎಣ್ಣೆ ಎಂದು ತಪ್ಪು ತಿಳಿದು ಫಾಲಿಡಾಲ್‌ ಚಪಾತಿಗೆ: ಮೂವರ ಬಲಿ

ಬೆಂಗಳೂರು, ಡಿ. 21–
ಎಣ್ಣೆ ಎಂದು ತಪ್ಪಾಗಿ ತಿಳಿದು ಫಾಲಿಡಾಲ್‌ ಬೆರೆಸಿ ಚಪಾತಿ ತಯಾರಿಸಿ ಸೇವಿಸಿದ ಪರಿಣಾಮವಾಗಿ 3 ಮಂದಿ ಸಹೋದರ, ಸಹೋದರಿಯರು ಮರಣಹೊಂದಿದ ದುರಂತ ಕೃಷ್ಣರಾಜಪುರದ ಬಳಿಯಿರುವ ಬೈರಸಂದ್ರದಲ್ಲಿ ನಡೆಯಿತು.

ಚಪಾತಿ ತಯಾರಿಸಿದ 18 ವರ್ಷ ವಯಸ್ಸಿನ ಜಯಮ್ಮ ಆಸ್ಪತ್ರೆಯಲ್ಲಿ ಪ್ರಜ್ಞಾನಹೀನ ಸ್ಥಿತಿಯಲ್ಲಿದ್ದಾಳೆ.

ಮಹಾಜನ್‌ ವರದಿ ಕ್ಷಿಪ್ರ ಜಾರಿಗೆ ಪ್ರಧಾನಿಗೆ ಮುಲ್ಕಾ ಒತ್ತಾಯ (ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಡಿ. 21–
ಕಮ್ಯುನಿಸ್ಟ್‌ ಪಕ್ಷ ಮತ್ತು ಎಸ್‌.ಎಸ್‌.ಪಿ.ಗಳನ್ನು ಬಿಟ್ಟು ಸಂಸತ್ತಿನಲ್ಲಿನ ಎಲ್ಲ ವಿರೊಧ ಪಕ್ಷಗಳ ನಾಯಕರೂ ಇಂದು ಪ್ರಧಾನಮಂತ್ರಿಯವರನ್ನೂ, ಅವರ ಸಹೋದ್ಯೋಗಿಗಳನ್ನೂ ಭೇಟಿ ಮಾಡಿ, ಮಹಾರಾಷ್ಟ್ರ–ಮೈಸೂರು ಗಡಿ ವಿವಾದವನ್ನು ಕುರಿತ ಮಹಾಜನ್‌ ಆಯೋಗದ ವರದಿಯ ಬಗ್ಗೆ ಸುಮಾರು ಎಂಬತ್ತು ನಿಮಿಷಗಳ ಕಾಲ ಚರ್ಚಿಸಿದರು. ಆದರೆ ಯಾವ ತೀರ್ಮಾನಕ್ಕೂ ಬರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry