7

ಮತಯಂತ್ರ ವಿಶ್ವಾಸಾರ್ಹತೆ ಅನುಮಾನ ಅನಗತ್ಯ

Published:
Updated:
ಮತಯಂತ್ರ ವಿಶ್ವಾಸಾರ್ಹತೆ ಅನುಮಾನ ಅನಗತ್ಯ

ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗಳು, ಇವಿಎಂ ವಿಶ್ವಾಸಾರ್ಹತೆ ಕುರಿತಾದ ಪ್ರಶ್ನೆಗಳನ್ನು ಬಗೆಹರಿಸಲು ನೆರವಾಗಿವೆ. ಇದೇ ಮೊದಲ ಬಾರಿಗೆ ಗುಜರಾತ್ ವಿಧಾನಸಭೆ ಚುನಾವಣೆ ನಡೆದ 182 ಮತಗಟ್ಟೆಗಳಲ್ಲಿ ಇವಿಎಂ ಜೊತೆ ಮತ ಪರಿಶೀಲನಾ ವ್ಯವಸ್ಥೆಯನ್ನೂ ಅಳವಡಿಸಲಾಗಿತ್ತು. ಮತದಾರರು ಹಾಕಿದ ಮತಗಳನ್ನು ತಾಳೆ ಮಾಡುವಂತಹ ವಿವಿಪ್ಯಾಟ್ ಯಂತ್ರಗಳಿಂದ ಹೊರಬಿದ್ದ ಚೀಟಿಗಳನ್ನು ಎಣಿಕೆ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ಈ ಎಣಿಕೆ ಕಾರ್ಯ ಮಾಡಲಾಗಿದೆ. ಹೀಗಿದ್ದೂ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ (ಇವಿಎಂ) ತಪ್ಪು ಹುಡುಕುವ ಪ್ರಯತ್ನ ಮುಂದುವರಿದಿದೆ. ಯವ ನಾಯಕ ಹಾರ್ದಿಕ್ ಪಟೇಲ್ ಅವರು ಇವಿಎಂಗಳನ್ನು ದೂಷಿಸುವುದು ಮುಂದುವರಿಸಿದ್ದಾರೆ. ಸುಮಾರು ಎರಡು ದಶಕಗಳಿಂದ ಚುನಾವಣೆಗಳಲ್ಲಿ ಮತದಾನಕ್ಕಾಗಿ ಭಾರತ ಅನುಸರಿಸಿಕೊಂಡು ಬರುತ್ತಿರುವ ಎಲೆಕ್ಟ್ರಾನಿಕ್ ವ್ಯವಸ್ಥೆ ವಿರುದ್ಧ ಸವಾಲು ಹಾಕುವಲ್ಲಿ ಈ ಬಗೆಯ ವಿವರಣೆ ಇಲ್ಲದ ಆರೋಪಗಳಿಂದ ಹೆಚ್ಚು ಲಾಭವಿಲ್ಲ. ಇವಿಎಂ ಗಳನ್ನು ಹ್ಯಾಕ್ ಮಾಡುವುದು ಸಾಧ್ಯವಿದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಲು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಈ ವರ್ಷ ಆಹ್ವಾನ ನೀಡಿದಾಗ ಯಾರೊಬ್ಬರೂ ಮುಂದೆ ಬರಲಿಲ್ಲ. ಇವಿಎಂಗಳನ್ನು ಟೀಕಿಸುತ್ತಾ ಕೂರುವ ಬದಲು ಮತಪರಿಶೀಲನಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕ್ರಮಗಳ ಬಗ್ಗೆ ಆಲೋಚಿಸುವುದು ಸೂಕ್ತ.

ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತಿತ್ತು. ಬ್ಲೂಟೂಥ್ ತಂತ್ರಜ್ಞಾನದ ಮೂಲಕ ಇವಿಎಂಗಳನ್ನು ದುರ್ಬಳಕೆ ಮಾಡಬಹುದಾದ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ನಾಯಕರೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತಪತ್ರ ಬಳಕೆಯಾಗಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒತ್ತಾಯಿಸಿದ್ದಾರೆ. ಈ ಹಿಂದೆ ಬಿಜೆಪಿ ಸಹ ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. 1980 ಹಾಗೂ 90ರ ದಶಕಗಳಲ್ಲಿ ಸಮಾಲೋಚನೆ ಹಾಗೂ ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯ ಪ್ರಕ್ರಿಯೆ ಮೂಲಕ ಮತದಾನಕ್ಕೆ ಇವಿಎಂಗಳ ಅಳವಡಿಕೆ, ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆಯಾಗಿತ್ತು ಎಂಬುದನ್ನು ಮರೆಯಲಾಗದು. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಗೊಳಿಸುವ ಪ್ರಯತ್ನ ಇದಾಗಿತ್ತು. ಇವಿಎಂಗಳಲ್ಲಿ ದೋಷಗಳು ಇದ್ದಲ್ಲಿ ಅವನ್ನು ಸರಿಪಡಿಸುವ ಪ್ರಯತ್ನಗಳಾಗಬೇಕು. ಕಾಗದದ ಮತಪತ್ರಗಳ ಬಳಕೆ ಇದಕ್ಕೆ ಪರಿಹಾರವಲ್ಲ. ಈ ಎಲ್ಲಾ ವಾದವಿವಾದಗಳ ನಡುವೆ, ಚುನಾವಣಾ ಪ್ರಕ್ರಿಯೆ ಬಗ್ಗೆ ಜನರಲ್ಲಿ ವಿಶ್ವಾಸ ಕುಂದುವಂತಾಗುವುದು ಅನಪೇಕ್ಷಿತ. ‘ಇವಿಎಂ ಅಕ್ರಮ ಅಸಾಧ್ಯ’ ಎಂದು ಈಗ ಮುಖ್ಯ ಚುನಾವಣಾ ಕಮಿಷನರ್ ಎ. ಕೆ. ಜೋತಿ ಹೇಳಿದ್ದಾರೆ. ಇವಿಎಂ ಕುರಿತಾದ ಸಂಶಯ ಅಳಿಸಿಹಾಕಿ ಸಾರ್ವಜನಿಕರಿಗೆ ಮನದಟ್ಟು ಮಾಡಿಸುವಲ್ಲಿ ಚುನಾವಣಾ ಆಯೋಗ ಸಹ ಎಡವಿದೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೂ ಈ ಬಾರಿ ಚರ್ಚೆಯ ವಸ್ತುವಾಗಿದ್ದು ದುರದೃಷ್ಟಕರ ಬೆಳವಣಿಗೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಆಯೋಗವು ದಿನಾಂಕ ಪ್ರಕಟಿಸಿದ ರೀತಿ ಸಮಾಧಾನಕರವಾಗಿರಲಿಲ್ಲ. ಇದು ಅನಗತ್ಯ ಅನುಮಾನ ಹುಟ್ಟುಹಾಕಲು ಕಾರಣವಾಗಿತ್ತು. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ ನಂತರ ಹಿಂತೆಗೆದುಕೊಂಡಿತು. ಆದರೆ ಮತದಾನ ಮಾಡಿದ ನಂತರ ರೋಡ್‌ ಷೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏನೂ ಕ್ರಮ ಜರುಗಿಸದ ಆಯೋಗದ ನಿಲುವಿನ ಬಗ್ಗೆ ಟೀಕೆಗಳೂ ವ್ಯಕ್ತವಾದವು. ಮುಕ್ತ ಹಾಗೂ ನ್ಯಾಯಯುತ ಚುನಾವಣೆ, ಪ್ರಜಾಪ್ರಭುತ್ವದ ಮೂಲಭೂತ ಅಂಶ. ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ, ನಂಬಿಕೆ ಮುಖ್ಯ. ಸೋತ ಪಕ್ಷ ಮತ್ತೊಂದು ಚುನಾವಣೆಗೆ ಸ್ಪರ್ಧಿಸಲು ಅಣಿಯಾಗುವ ವಿಶ್ವಾಸ, ನಂಬಿಕೆಗೆ ಎಂದೂ ಧಕ್ಕೆ ಆಗಬಾರದು. ಪ್ರಜಾಪ್ರಭುತ್ವ ಯಾವುದೋ ಗುಂಪಿನ ಪ್ರಭುತ್ವವಾಗಬಾರದು. ಸ್ಪರ್ಧಾತ್ಮಕ ಚುನಾವಣೆ ಪ್ರಕ್ರಿಯೆ, ರಾಜಕೀಯ ನಾಯಕರ ಸ್ವಹಿತಾಸಕ್ತಿ ಚಟುವಟಿಕೆಗಳಿಗೆ ತಡೆ ಹಾಕುವಂತಹದ್ದಾಗಬೇಕು. ಚುನಾವಣಾ ಆಯೋಗಕ್ಕೆ ಆ ಅಧಿಕಾರ ನಿಯಂತ್ರಣದ ಹೊಣೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry