7

ಘೋಷಿತ ಅಪರಾಧಿಗೆ 14 ವರ್ಷ ಜೈಲು

Published:
Updated:

ಮೈಸೂರು: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಘೋಷಿತ ಅಪರಾಧಿ ಕೆ.ಜಿ.ಮಹೇಶ್‌ ಗೌಡ ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 14 ವರ್ಷ ಕಠಿಣ ಜೈಲು ಹಾಗೂ ₹ 5 ಲಕ್ಷ ದಂಡ ವಿಧಿಸಿ ಗುರುವಾರ ಆದೇಶ ನೀಡಿದೆ.

ದಂಡದ ಮೊತ್ತದಲ್ಲಿ ₹ 4 ಲಕ್ಷವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ನ್ಯಾಯಾಧೀಶ ವಿ.ಎಂ.ಪಾವಲೆ ಸೂಚಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಎರಡು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತರ ನಿಧಿಯಿಂದ ಬಾಲಕಿಗೆ ₹ 3 ಲಕ್ಷ ಪರಿಹಾರ ನೀಡಿದೆ.

ವಿಚಾರಣೆ ನಡೆಸಿದ ನ್ಯಾಯಾಲಯ ನ.23ರಂದು ತೀರ್ಪು ಕಾಯ್ದಿರಿಸಿತ್ತು. ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಬಳಿಕ ತಲೆಮರೆಸಿಕೊಂಡಿದ್ದ. ಹೀಗಾಗಿ, ನ್ಯಾಯಾಲಯ ಡಿ.16ರಂದು ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು. ಆರೋಪಿಯು ವಕೀಲರೊಂದಿಗೆ ಬುಧವಾರ ನ್ಯಾಯಾಲಯಕ್ಕೆ ಶರಣಾಗಿದ್ದ.

ಹಣಕಾಸು ವ್ಯವಹಾರ ನಡೆಸುತ್ತಿದ್ದ ಮಹೇಶ್ ಗೌಡ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ. ಹಣಕಾಸಿನ ನೆರವು ನೀಡುವ ನೆಪದಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಯ ತಾಯಿಯ ಸ್ನೇಹ ಸಂಪಾದಿಸಿದ್ದ. ಕುಶಲೋಪರಿ ವಿಚಾರಿಸುವ ನೆಪದಲ್ಲಿ ಆಗಾಗ ಮನೆಗೆ ಹೋಗಿ ಬರುತ್ತಿದ್ದ.

‘ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಚಾರ ನಡೆಸಿದ್ದ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಗರ್ಭಿಣಿಯಾಗಿದ್ದ ಸಂಗತಿ ಗೊತ್ತಾಗಿದೆ. 2014ರ ಅಕ್ಟೋಬರ್‌ನಲ್ಲಿ ಬಾಲಕಿಯು ಗಂಡು ಶಿಶುವಿಗೆ ಜನ್ಮನೀಡಿದ್ದಳು. ಹೆರಿಗೆ ಮಾಡಿಸಿದ ವೈದ್ಯರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದರು’ ಎಂದು ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಸಿ.ಶಿವರುದ್ರಸ್ವಾಮಿ ತಿಳಿಸಿದರು.

‘ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯ ಆಪ್ತ ಸಮಾಲೋಚನೆ ನಡೆಸಿದಾಗ ಅತ್ಯಾಚಾರ ಎಸಗಿದ ಸಂಗತಿ ಗೊತ್ತಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದರು. ಬಾಲಕಿಗೆ ಜನಿಸಿದ ಮಗು ತನ್ನದಲ್ಲವೆಂದು ಆರೋಪಿ ನಿರಾಕರಿಸಿದ್ದರಿಂದ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಆಗ ಅತ್ಯಾಚಾರ ನಡೆಸಿದ್ದ ವಿಚಾರ ದೃಢಪಟ್ಟಿತ್ತು’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry