7

ನಾಗಮಂಗಲ –ಮಂಡ್ಯ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

Published:
Updated:
ನಾಗಮಂಗಲ –ಮಂಡ್ಯ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

ಬಿ.ಸಿ.ಮೋಹನ್‌ ಕುಮಾರ್‌

ನಾಗಮಂಗಲ: ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ನಾಗಮಂಗಲ–ಮಂಡ್ಯ ರಸ್ತೆಯಲ್ಲಿ ಗುಂಡಿಗಳ ಕಾರುಬಾರು ಜೋರಾಗಿದೆ. ಇದರಿಂದ ವಾಹನ ಸವಾರರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನ ಸವಾರರು, ಬಸ್, ಕಾರು ಹಾಗೂ ಇನ್ನಿತರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ರಸ್ತೆಯು ಪಟ್ಟಣದ ಆರಂಭದಲ್ಲೇ ಗುಂಡಿ ಬಿದ್ದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣಕ್ಕೆ ಅನತಿ ದೂರದಲ್ಲಿರುವ ಅಮ್ಮನಕಟ್ಟೆ ತಿರುವಿನಲ್ಲಿಯೇ ರಸ್ತೆಯ ಅಗಲಕ್ಕೂ ಆಳ ಮತ್ತು ಅಗಲವಾದ ಗುಂಡಿ ಬಿದ್ದಿದ್ದು ವಾಹನ ಸವಾರರ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ತಿರುವಿನಲ್ಲಿ ಗುಂಡಿ ಬಿದ್ದಿರುವುದು ಕಾಣದೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಲ್ಲಿಂದ ಆರಂಭವಾಗುವ ಗುಂಡಿಗಳ ಕಥೆ ತಾಲ್ಲೂಕಿನ ಗಡಿ ಗ್ರಾಮ ಲಿಂಗಮ್ಮನಹಳ್ಳಿವರೆಗೆ ಮುಂದುವರಿದಿದೆ.

ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರ ಮಂಡ್ಯಕ್ಕೆ ಹೋಗುವ ಖಾಸಗಿ ವಾಹನಗಳು ನಾಗಮಂಗಲ–ಜಕ್ಕನಹಳ್ಳಿ –ದುದ್ದ ಮಾರ್ಗವಾಗಿ ಮಂಡ್ಯಕ್ಕೆ ಹೋಗುತ್ತಾರೆ. ಇದು ಬಳಸು ಹಾದಿಯಾದರೂ ರಸ್ತೆ ಉತ್ತಮವಾಗಿರುವುದರಿಂದ ಪ್ರಯಾಣಿಕರು ಈ ದಾರಿಯಲ್ಲಿ ಸಾಗುತ್ತಾರೆ. ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಮಹಾಮಜ್ಜನಕ್ಕೆ ಮಂಡ್ಯದಿಂದ ಬರುವ ಯಾತ್ರಾರ್ಥಿಗಳು ಮಂಡ್ಯ–ಬಸರಾಳು– ನಾಗಮಂಗಲ ಮಾರ್ಗವಾಗಿ ಶ್ರವಣಬೆಳಗೊಳ ತಲುಪುತ್ತಾರೆ. ಅವರಿಗೆ ಈಗಿರುವ ರಸ್ತೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದೆ ಎಂಬುದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ನಾವು ದಿನನಿತ್ಯ ನಮ್ಮ ಕೆಲಸಕಾರ್ಯಗಳಿಗಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗುತ್ತೇವೆ, ಆದರೆ ಇಲ್ಲಿಯ ರಸ್ತೆ ತುಂಬಾ ಹದಗೆಟ್ಟಿದ್ದು ಸಂಚರಿಸಲು ತುಂಬಾ ತೊಂದರೆಯಾಗುತ್ತದೆ’ ಎಂದು ಪ್ರಯಾಣಿಕ ದೇವಲಾಪುರದ ಡಿ.ಎಂ.ಜಗದೀಶ್, ಬಳಪದಮಂಟಿಕೊಪ್ಪಲು ನಿವಾಸಿ ಸುಂದರ್ ತಿಳಿಸಿದರು. ‘ರಸ್ತೆ ರಿಪೇರಿಗೆ ಆದ್ಯತೆ ನೀಡಿದ್ದು ಇನ್ನು ಕೆಲ ದಿನಗಳಲ್ಲಿ ಡಾಂಬಡರೀಕರಣಗೊಳಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ಶ್ರೀನಾಥ್ ಹೇಳಿದರು. ‘ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಬೇಗ ಅಭಿವೃದ್ಧಿಪಡಿಸಬೇಕು. ಇಲ್ಲವಾದಲ್ಲಿ ನಾವು ಪ್ರತಿಭಟಿಸಬೇಕಾಗುತ್ತದೆ’ ಎಂದು ರೈತಸಂಘದ ಕಾರ್ಯದರ್ಶಿ ಹರಳಕೆರೆ ಗೋಪಿ ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry