7

ತಾಲ್ಲೂಕು ಕಚೇರಿ ಎದುರು ರೈತ ಸಂಘದಿಂದ ತಮಟೆ ಚಳವಳಿ

Published:
Updated:

ಮದ್ದೂರು: ತಾಲ್ಲೂಕು ಕಚೇರಿಯಲ್ಲಿನ ಲಂಚಗುಳಿತನ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಕಚೇರಿ ಎದುರು ತಮಟೆ ಚಳವಳಿ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಅವರು, ದಾರಿಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಧ್ಯಾಹ್ನ ಕಚೇರಿ ಆವರಣದಲ್ಲಿಯೇ ಅಡುಗೆ ತಯಾರಿಸಿ, ಭೋಜನ ಮಾಡಿದರು.

ಜಿಲ್ಲಾ ಘಟಕದ ಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ‘ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಜನ ಸಾಮಾನ್ಯರ ಕೆಲಸಗಳು ನಿಗದಿತ ಅವಧಿಯೊಳಗೆ ಆಗುತ್ತಿಲ್ಲ. ಖಾತೆ ಬದಲಾವಣೆ, ತಿದ್ದುಪಡಿ, ಭೂಮಾಪನ ಇಲಾಖೆಯಲ್ಲಿ ಅಳತೆ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಪ್ರತಿಯೊಂದಕ್ಕೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆ ಹಾಗೂ ಶವ ಸಂಸ್ಕಾರದ ಹಣ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಬೇಕು. ರೈತರು ಅಡವಿಟ್ಟ ಚಿನ್ನಾಭರಣಗಳನ್ನು ಹರಾಜು ಮಾಡಬಾರದು. ರೇಷ್ಮೆ ಬೆಳೆಗೆ ಪ್ರೋತ್ಸಾಹಧನ ನೀಡಬೇಕು. ಒಣಗಿದ ತೆಂಗಿನ ಮರ ಒಂದಕ್ಕೆ ₹ 10 ಸಾವಿರ ಪರಿಹಾರ, ಟನ್ ಕಬ್ಬಿಗೆ ₹ 3,500 ಹಣ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ನಾಗರಾಜು ಪ್ರತಿಭಟನಾ ಸ್ಥಳಕ್ಕೆ ಬಂದು, ತಾಲ್ಲೂಕು ಕಚೇರಿಯಲ್ಲಿ ಕೆಲ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವ ಬಗ್ಗೆ, ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ರೈತರಿಂದ ದೂರುಗಳು ಬಂದಿವೆ. ಇಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದೇನೆ. ಒಂದು ವಾರದೊಳಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ಪಾರದರ್ಶಕ ಆಡಳಿತಕ್ಕೆ ಯತ್ನಿಸುವುದಾಗಿ ಭರವಸೆಯಿತ್ತ ಬಳಿಕ ಪ್ರತಿಭಟನೆ ಹಿಂಪಡೆದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ವಿಶ್ವನಾಥ್, ತಾಲ್ಲೂಕು ಅಧ್ಯಕ್ಷ ಸಿ. ರಮೇಶ್, ಸದಸ್ಯರಾದ ಸೋ.ಶಿ. ಪ್ರಕಾಶ್, ವೈ.ಕೆ. ರಾಮೇಗೌಡ, ಡಿ.ಎನ್. ಲಿಂಗೇಗೌಡ, ರಾಮಲಿಂಗೇಗೌಡ, ಮಾದೇಗೌಡ, ಎಚ್.ಕೆ. ಪ್ರಭುಲಿಂಗು, ತಮ್ಮೇಗೌಡ, ಕೆಂಪೇಗೌಡ, ಕಿರಣ್‌ಕುಮಾರ್‌, ಶ್ರೀಧರ್, ಮಹೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

* * 

ಮುಂಗಾರು ಮಳೆ ತಡವಾದ ಕಾರಣ, ಶೇ 85ರಷ್ಟು ಕೃಷಿ ಚಟುವಟಿಕೆಗಳು ನಡೆದಿಲ್ಲ. ಸರ್ಕಾರ ಹಿಂಗಾರು ಬೆಳೆಗೆ ಹೊಸದಾಗಿ ಸಾಲ ನೀಡುವ ಜತೆಗೆ ಬೆಳೆ ಕಟಾವಿನವರೆಗೂ ನಾಲೆಗಳಿಗೆ ನೀರು ಹರಿಸಬೇಕು

ಎಸ್‌.ವಿಶ್ವನಾಥ್‌, ಜಿಲ್ಲಾ ಘಟಕದ ಉಪಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry