7

ಸಂಸದ ಸಿ.ಎಸ್‌.ಪುಟ್ಟರಾಜು ವಿರುದ್ಧ ತನಿಖೆಗೆ ಆದೇಶ

Published:
Updated:
ಸಂಸದ ಸಿ.ಎಸ್‌.ಪುಟ್ಟರಾಜು ವಿರುದ್ಧ ತನಿಖೆಗೆ ಆದೇಶ

ಮಂಡ್ಯ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಹೊತ್ತಿರುವ ಸಂಸದ ಸಿ.ಎಸ್‌.ಪುಟ್ಟರಾಜು ವಿರುದ್ಧ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್‌.ಮೂರ್ತಿ ಅವರು ಅರಣ್ಯ ಇಲಾಖೆ ಜಾಗೃತ ದಳಕ್ಕೆ ಆದೇಶಿಸಿದ್ದಾರೆ.

ಎಸ್‌.ಟಿ.ಜಿ ಗಣಿ ಕಂಪೆನಿಯ ಪಾಲುದಾರರಾಗಿರುವ ಸಂಸದ ಪುಟ್ಟರಾಜು ಅವರು ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟ ಕಾವಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಆರ್‌.ರವೀಂದ್ರ ಆಗಸ್ಟ್ 21ರಂದು ಮುಖ್ಯ ಕಾರ್ಯದರ್ಶಿಯಾಗಿದ್ದ ಸುಭಾಷ್‌ಚಂದ್ರ ಕುಂಟಿಆ ಅವರಿಗೆ ದೂರು ಸಲ್ಲಿಸಿದ್ದರು. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನ.22ರಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ದೂರಿನ ಪ್ರತಿ ರವಾನಿಸಿತ್ತು. ಈಗ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತನಿಖೆಗೆ ಆದೇಶ ನೀಡಿದ್ದಾರೆ.

ತನಿಖೆಗೆ ಸಿದ್ಧ: ‘ಜಿ.ಟಿ.ದೇವೇಗೌಡ ಅವರನ್ನಾಗಲೀ, ನನ್ನನ್ನಾಗಲೀ ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಸೋಲುವ ಭೀತಿ ಎದುರಾಗಿದ್ದು, ನಮ್ಮ ಮೇಲೆ ತನಿಖೆಯ ಅಸ್ತ್ರ ಬಳಸುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧವಾಗಿದ್ದೇನೆ’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಪ್ರತಿಕ್ರಿಯಿಸಿದರು.

‘ಮೂರು ವರ್ಷಗಳಿಂದ ಪಾಂಡವಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸಂಸದರ ಪಾತ್ರದ ಬಗ್ಗೆಯೂ ಹಲವು ದೂರು ನೀಡಿದ್ದೇನೆ. ಲೋಕಾಯುಕ್ತ, ಎಸಿಬಿಗೂ ದೂರು ಸಲ್ಲಿಸಿದ್ದೇನೆ. ಈಚೆಗೆ ನಾನು ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗಿದೆ’ ಎಂದು ಆರ್‌.ಟಿ.ಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry