7

‘ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಿರುವ ಕಾಂಗ್ರೆಸ್‌’

Published:
Updated:

ತೀರ್ಥಹಳ್ಳಿ: ರಾಜ್ಯದಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ಹತ್ಯೆ ವಿರೋಧಿಸಿ ತಾಲ್ಲೂಕು ಕಚೇರಿ ಮುಂಭಾಗ ಗುರುವಾರ ಹಿಂದೂ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಆರಗ ಜ್ಞಾನೇಂದ್ರ, ‘ಹಿಂದೂಗಳ ಹತ್ಯೆಗೆ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಪ್ರಚೋದನೆ ನೀಡುತ್ತಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸ್ ಬಲ ಬಳಸಿಕೊಂಡು ಹಿಂದೂಗಳ ಹತ್ಯೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದೆ. ಪಿಎಫ್‌ಐ, ಕೆಡಿಎಫ್‌, ಎಸ್‌ಡಿಪಿಐ ಸಂಘಟನೆಗಳು ಹಿಂದೂಗಳ ಕಗ್ಗೊಲೆಗೆ ಹೊರಟಿದ್ದು, ತಡೆಯುವ ಶಕ್ತಿ ಕಾಂಗ್ರೆಸ್‌ ಸರ್ಕಾರಕ್ಕೆ ಇಲ್ಲದಂತಾಗಿದೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದೇ ಕಾಂಗ್ರೆಸ್‌ ಆಣತಿಯಂತೆ ವರ್ತಿಸುವ ಪೊಲೀಸರ ವಿರುದ್ಧ ಹಿಂದೂಪರ ಸಂಘಟನೆಗಳು ಹೋರಾಟ ನಡೆಸಲಿವೆ’ ಎಂದು ಆರಗ ಎಚ್ಚರಿಸಿದರು.

ಕಾಂಗ್ರೆಸ್‌ ಹಿಂದೂಗಳ ಸಮಾಧಿ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಿದೆ. ಹಿಂದೂಗಳ ಹತ್ಯೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸಬೇಕು. ದ್ವೇಷ ಹರಡಿ ಅಶಾಂತಿ, ಭಯದ ವಾತಾವರಣ ಸೃಷ್ಟಿಸುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಅಪಹರಣದ ನಂತರ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ಮುಚ್ಚಿಹಾಕಿದ ಶಾಪ ಶಾಸಕ ಕಿಮ್ಮನೆ ರತ್ನಾಕರ ಅವರಿಗೆ ತಟ್ಟದೇ ಇರದು. ಗಾಜನೂರು ವಿಶ್ವನಾಥಶೆಟ್ಟಿ ಕೊಲೆ ಆರೋಪಿಗಳು ಪೊಲೀಸ್ ರಕ್ಷಣೆಯಲ್ಲಿ ಬಚಾವ್‌ ಆಗಿರುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ಸರ್ಕಾರ ಹಿಂದೂಗಳ ಮಾರಣಹೋಮಕ್ಕೆ ನಿಂತಿದೆ ಎಂದು ಆರಗ ಆರೋಪಿಸಿದರು.

ಆರ್‌ಎಎಸ್‌ಎಸ್‌ ಪ್ರಾಂತ್ಯ ಸಹ ಸಂಚಾಲಕ ಭಾರತಿಪುರ ದಿನೇಶ್‌ ಮಾತನಾಡಿ, ‘ಸೌಹಾರ್ದ ಬಯಸುವ ಹಿಂದೂಗಳ ಬದುಕಿಗೆ ಕೇಡು ಉಂಟುಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಹಿಂದೂಗಳ ಹತ್ಯೆ ಪ್ರಶ್ನಿಸಿದರೆ ಕೋಮುವಾದಿಗಳು ಎಂದು ಬಣ್ಣಿಸಲಾಗುತ್ತಿದೆ. ಮುಸ್ಲಿಂ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್‌ ಹಿಂದೂಗಳ ಹತ್ಯೆ ಘಟನೆಗಳ ನಾಯಕತ್ವ ವಹಿಸಿದೆ’ ಎಂದು ಆರೋಪಿಸಿದರು. ಆರ್‌ಎಸ್‌ಎಸ್‌ ಮುಖಂಡ ಲೋಹಿತಾಶ್ವ ಕ್ಯಾದಿಗೆರೆ, ಬಜರಂಗದಳ ಸಂಚಾಲಕ ಸಂತೋಷ್‌ ಬಾಳೇಬೈಲು ಮಾತನಾಡಿದರು.

ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಚಕ್ಕೋಡಬೈಲು ಬೆನಕ ಭಟ್‌, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಕಾಸರವಳ್ಳಿ ಶ್ರೀನಿವಾಸ್‌, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌, ಸದಸ್ಯರಾದ ಚಂದವಳ್ಳಿ ಸೋಮಶೇಖರ್‌, ಸಾಲೇಕೊಪ್ಪ ರಾಮಚಂದ್ರ, ಗುಡ್ಡೇಕೊಪ್ಪ ಮಂಜುನಾಥ್‌, ಪ್ರಶಾಂತ್‌ ಕುಕ್ಕೆ, ಗೀತಾ ಶೆಟ್ಟಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್‌ ಜವಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಮಂಜುನಾಥಶೆಟ್ಟಿ ಅವರೂ ಇದ್ದರು. ತಹಶೀಲ್ದಾರ್‌ ಆನಂದಪ್ಪನಾಯ್ಕ್‌ ಅವರಿಗೆ ಮನವಿ ನೀಡಲಾಯಿತು.

ನಿಷೇಧಾಜ್ಞೆ ನಡುವೆ ಪ್ರತಿಭಟನಾ ಸಭೆ

144 ಸೆಕ್ಷನ್‌ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನಾ ಸಭೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿಭಟನೆಗೆ ಬಂದ ಹಿಂದೂಪರ ಸಂಘಟನೆಯ ಮುಖಂಡರಿಗೆ ಸ್ಥಳದಲ್ಲಿದ್ದ ಹಿರಿಯ ಪೊಲೀಸರು ಸೆಲ್ಯೂಟ್‌ ಹೊಡೆದು, ಸ್ವಾಗತ ನೀಡಿದರು. ನಿಷೇಧಾಜ್ಞೆ ನಡುವೆ ಪ್ರತಿಭಟನಾ ಸಭೆಗೆ ಅವಕಾಶ ನೀಡಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry