7

ಪಾವಗಡ: ಬಾಲಕಿ ಅತ್ಯಾಚಾರ ಖಂಡಿಸಿ ರಸ್ತೆ ತಡೆ

Published:
Updated:
ಪಾವಗಡ: ಬಾಲಕಿ ಅತ್ಯಾಚಾರ ಖಂಡಿಸಿ ರಸ್ತೆ ತಡೆ

ಪಾವಗಡ: ವಿಜಯಪುರದಲ್ಲಿ ಬಾಲಕಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಕರ್ನಾಟಕ ರಕ್ಷಣಾ ಪಡೆ, ಬಹುಜನ ಸಮಾಜ ಪಕ್ಷದ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ರಸ್ತೆ ತಡೆ ನಡೆಸಿದರು. 9ನೇ ತರಗತಿ ವಿದ್ಯಾರ್ಥಿನಿ ದಾನಮ್ಮ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ವಿರೋಧಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ತಳ ಸಮುದಾಯಗಳು, ಬಡವರ ಮೇಲೆ ದಿನೇ ದಿನೇ ದೌರ್ಜನ್ಯ, ಕೊಲೆ, ಅತ್ಯಾಚಾರಗಳು ಹೆಚ್ಚುತ್ತಿವೆ. ಆರೋಪಿಗಳು ಪ್ರಭಾವ ಬಳಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಮಹಾ ಆದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು. ಕರ್ನಾಟಕ ರಕ್ಷಣಾ ಪಡೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಹರೀಶ್, ಬಿ.ಎಸ್.ಪಿ ಮಂಜುನಾಥ್ ಇದ್ದರು.

ಪ್ರತಿಭಟನೆ: ವಿಜಯಪುರದಲ್ಲಿ ವಿದ್ಯಾರ್ಥಿನಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂದೆ ಗುರುವಾರ ಪ್ರತಿಭಟಿಸಿದರು.

‘ರಾಜ್ಯದಲ್ಲಿ ಬಾಲಕಿಯರು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಣಗಳು ಹೆಚ್ಚುತ್ತಿವೆ. ಅತ್ಯಾಚಾರ, ಕೊಲೆಯಂತಹ ಅಮಾನವೀಯ ಘಟನೆಗಳು ನಡೆದರೂ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿರುವುದು ಆತಂಕಕಾರಿ’ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

‘ಪೋಷಕರು ದೂರು ದಾಖಲಿಸಿಕೊಳ್ಳುವಂತೆ ಧರಣಿ ನಡೆಸಿದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಮುಖ್ಯಮಂತ್ರಿಗಳ ಪ್ರವಾಸದ ನೆಪ ಒಡ್ಡಿ ಇಲಾಖೆ ಉನ್ನತ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಜನತೆ ಮೇಲೆ ಶೋಷಣೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ’ ಎಂದರು.

‘ದೂರು ದಾಖಲಿಸಲು ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅತ್ಯಾಚಾರ ನಡೆಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು’ ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರೇಡ್ 2 ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಸಲ್ಲಿಸಲಾಯಿತು. ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಕಾವಲಗೆರೆ ರಾಮಾಂಜಿ, ಶೇಖರ್ ಬಾಬು, ಎಬಿವಿಪಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಇದ್ದರು.

ತುರುವೇಕೆರೆ: ವಿಜಯಪುರದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ  ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಬೇಕು  ಎಂದು ಆಗ್ರಹಿಸಿ ತಾಲ್ಲೂಕಿನ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು.

ನೂರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ದುಷ್ಕೃತ್ಯ ಎಸಗಿದ ಅಪರಾಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶ್ರೀಹರಿ ಮಾತನಾಡಿ, ‘ಇತ್ತೀಚೆಗೆ ದಲಿತರು ಮತ್ತು ದಲಿತರ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ದಲಿತಗೆ ರಕ್ಷಣೆಯೇ ಇಲ್ಲದಂತಾಗಿದೆ. ದಲಿತರು ಮತ್ತು ಶೋಷಿತರ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಮತ್ತು ಶೋಷಣೆಗಳು ನಡೆದಲ್ಲಿ ಅದನ್ನು ಖಂಡಿಸಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.

ಉಪತಹಶೀಲ್ದಾರ್ ಸಿದ್ದಗಂಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಚೇತನ್, ತಾಲ್ಲೂಕು ಉಪಾಧ್ಯಕ್ಷ ಎ.ಆರ್.ರಮೇಶ್ ಗೌಡ, ನಗರ ಕಾರ್ಯದರ್ಶಿ ಅಭಿಷೇಕ್, ಪದಾಧಿಕಾರಿಗಳಾದ ಪ್ರತಾಪ್, ರಂಜಿತ್, ಪುನೀತ್ ಇದ್ದರು.

ಮೆರವಣಿಗೆ

ಮಧುಗಿರಿ: ವಿಜಯಪುರ ನಗರದ ದಲಿತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ದಲಿತ ಸಂಘಟನೆಗಳು ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಶಾಲೆಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ದಲಿತ ಸಂಘಟನೆ ಪದಾಧಿಕಾರಿಗಳಾದ ಡಿ.ಭರತ್‌ಕುಮಾರ್, ಹನುಮಂತರಾಜು, ಎನ್. ಮಹಾಲಿಂಗೇಶ್, ಮಹರಾಜು, ರಾಜೇಂದ್ರ, ಎಸ್.ಬಿ.ಟಿ.ರಾಮು, ಗರಣಿ ಗಿರೀಶ್, ಬಂದ್ರೇಹಳ್ಳಿ ಮಂಜುನಾಥ್, ರಾಜು, ಹೇಮಂತ್, ಪೋಸ್ಟ್ ಮರಿಯಪ್ಪ, ಬಾಲಾಜಿ, ಪುನೀತ್, ವೆಂಕಟರವಣಪ್ಪ, ಎಸ್.ಡಿ.ವೆಂಕಟೇಶ್, ಹರ್ಷದ್, ಸಯ್ಯದ್, ಲಕ್ಷ್ಮಿಪತಿ ಇದ್ದರು.

ಅತ್ಯಾಚಾರಕ್ಕೆ ಖಂಡನೆ

ಶಿರಾ: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಆರೋಪಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬಹುಜನ ವಿದ್ಯಾರ್ಥಿ ಸಂಘ ಹಾಗೂ ಎಸ್.ಡಿ.ಪಿ.ಐ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಯಿತು. ನಗರದ ಪ್ರವಾಸಿ ಮಂದಿರದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಟೈರ್ ರಂಗನಾಥ್, ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್.ನವೀನ್‌ಕುಮಾರ್, ಸಂಚಾಲಕ ನಿತಿನ್ ತಿಪ್ಪೇಶ್, ಎಸ್.ಡಿ.ಪಿ.ಐ ವೇದಿಕೆ ಅಧ್ಯಕ್ಷ ಅಮೃದ್ದೀನ್, ಕಾರ್ತೀಕ್, ನವೋದಯ ವೇದಿಕೆಯ ಜಯರಾಮಕೃಷ್ಣ, ಅವಿನಾಶ್, ರಮೇಶ್, ಕೃಷ್ಣಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry