ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಕದಡುವ ಪ್ರಯತ್ನ ಹುಸಿಗೊಳಿಸಿ

Last Updated 22 ಡಿಸೆಂಬರ್ 2017, 5:36 IST
ಅಕ್ಷರ ಗಾತ್ರ

ತುಮಕೂರು: ‘ಕೋಮು ಸೌಹಾರ್ದ ಕದಡುವ ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನವನ್ನು ಒಗ್ಗಟ್ಟಿನಿಂದ ಹುಸಿಗೊಳಿಸಬೇಕು’ ಎಂದು ಶಾಸಕ ಡಾ.ರಫೀಕ್ ಅಹಮ್ಮದ್ ಹೇಳಿದರು. ಗುರುವಾರ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ (ಎಸ್‌ಐಒ) ಸಂಘಟನೆಯು ಆಯೋಜಿಸಿದ್ದ ‘ಹಲವು ಧರ್ಮಗಳು, ಒಂದು ಭಾರತ ಧ್ಯೇಯ’ ಸಂದೇಶದ ‘ಸೌಹಾರ್ದ ಸಮಾವೇಶ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

'ದೇಶದಲ್ಲಿ ಶಾಂತಿ, ನೆಮ್ಮದಿಯಿಂದ ಜನರು ಜೀವನ ನಡೆಸಬೇಕಾದರೆ ಏಕತೆ ಮತ್ತು ಸಾಮರಸ್ಯ ಅವಶ್ಯಕವಾಗಿದೆ. ಹೃದಯದಲ್ಲಿ ಒಳ್ಳೆಯ ಭಾವನೆ ಇದ್ದರೆ ಮನೆಯಲ್ಲಿ ಸಾಮರಸ್ಯ. ಮನೆಯಲ್ಲಿ ಸಾಮರಸ್ಯವಿದ್ದರೆ ಸಮಾಜ, ದೇಶದಲ್ಲಿ ಶಾಂತಿ ಇರುತ್ತದೆ. ದೇಶದಲ್ಲಿ ಶಾಂತಿ ಇದ್ದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ದೇಶದ ಪ್ರತಿಯೊಬ್ಬರೂ ಅವರು ತೋರಿದ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ’ ಎಂದು ತಿಳಿಸಿದರು.

‘ಸಾಮರಸ್ಯ ಕದಡು, ಶಾಂತಿ, ನೆಮ್ಮದಿ ಕೆಡಿಸು ಎಂದು ಯಾವ ಧರ್ಮದ ಪವಿತ್ರ ಗ್ರಂಥವೂ ಹೇಳಿಲ್ಲ. ಎಲ್ಲ ಪವಿತ್ರ ಗ್ರಂಥಗಳು  ಮೊದಲು ಮಾನವನಾಗು. ಸನ್ಮಾರ್ಗದಲ್ಲಿ ನಡೆ ಎಂಬ ಸಂದೇಶವನ್ನು ಸಾರಿವೆ. ಅದರಂತೆ ಎಲ್ಲರೂ ಅರಿತು ನಡೆಯಬೇಕಾಗಿದೆ. ಎಲ್ಲೋ ಕೆಲವು ಹಿತಾಸಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತವೆ. ಅಂಥದ್ದಕ್ಕೆ ಮಹತ್ವ ಕೊಡಬೇಕಿಲ್ಲ’ ಎಂದು ಹೇಳಿದರು.

‘ಶಿಕ್ಷಣಕ್ಕೆ ಒತ್ತು ಕೊಡಬೇಕು. ಅದರಲ್ಲೂ ಮಹಿಳೆಯರ ಶಿಕ್ಷಣ ಕೊಡಿಸಲು ಹೆಚ್ಚಿನ ನಿಗಾ ವಹಿಸಬೇಕು. ಸರ್ಕಾರ ಅನೇಕ ಸೌಕರ್ಯಗಳನ್ನು ಕಲ್ಪಿಸಿದೆ. ಅವುಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು. ಪೋಷಕರು, ಶಿಕ್ಷಕರು ಮಾರ್ಗದರ್ಶನ ಮಾಡಬೇಕು’ ಎಂದು ತಿಳಿಸಿದರು.

ಎಸ್‌ಐಒ ಸಂಘಟನೆ ರಾಜ್ಯ ಕಾರ್ಯದರ್ಶಿ ದಾನಿಶ್ ಚಂಡಾಡಿ ಮಾತನಾಡಿ, ‘ಭಾರತ ಎಂದರೆ ಬಹುಸಂಸ್ಕೃತಿಯ ತೊಟ್ಟಿಲು. ಭಾರತ ಎಂದರೆ ಮತ್ತೊಂದು ಹೆಸರೇ ಏಕತೆ’ ಎಂದು ಹೇಳಿದರು.

‘ಧರ್ಮ ಎಂದರೆ ಸಹ ಸೃಷ್ಟಿಗಳ ಬಗ್ಗೆ ಕಾಳಜಿ ಇರಬೇಕು. ಬೇರೆಯವರಿಗೆ ಒಳಿತು ಬಯಸುವುದೇ ಧರ್ಮದ ಸಾರವಾಗಿದೆ. ಆದರೆ, ಈಚೆಗೆ ಧರ್ಮ, ಜಾತಿಗಳ ಹೆಸರಿನಲ್ಲಿ ಹಿಂಸಾಕೃತ್ಯ ನಡೆಸುವ ಪ್ರಯತ್ನ ನಡೆಯುತ್ತಿದೆ. ಕೋಮು ಹಿಂಸೆ ಎಂಬುದು ಸಾಂಸ್ಥಿಕರಣಗೊಳ್ಳುತ್ತಿರುವುದು ಕಳವಳ
ಕಾರಿಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಧಿಕಾರ, ಜವಾಬ್ದಾರಿ ಸ್ಥಾನದಲ್ಲಿರುವವರೇ ಕೋಮು ಪ್ರಚೋದನೆ ನೀಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆ, ನಿರುದ್ಯೋಗ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಹಾಗೆಯೇ ನೇಪಥ್ಯಕ್ಕೆ ಸರಿಸಿದ್ದಾರೆ’ ಎಂದು ದೂರಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ನಾಯಕ್ ಮಾತನಾಡಿ, ‘ಸಂಕುಚಿತ ಮನೋಭಾವದಿಂದ ದೂರವಾಗಬೇಕು. ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ನಮ್ಮ ನಾಡಗೀತೆಯಲ್ಲಿರುವಂತೆ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸಬ್ ಕಾ ಭಗವಾನ್ ಏಕ್ ಹೈ ಎಂಬ ಸಾರ ಅರಿತು ಬದುಕಬೇಕು’ ಎಂದು ನುಡಿದರು.

ಎಸ್‌ಐಒ ರಾಜ್ಯ ಘಟಕದ ಅಧ್ಯಕ್ಷ ಮಹಮ್ಮದ್ ರಫೀಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಜಮಾತೆ ಇಸ್ಲಾಂ ಹಿಂದ್ ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಯಿಕ್ ಉಲ್ಲಾ ಖಾನ್ ಮನ್ಸೂರಿ, ತುಮಕೂರು ಘಟಕ ಅಧ್ಯಕ್ಷ ಹನೀಫ್ ಉಲ್ಲಾ, ಮುಖಂಡರಾದ ತಾಜುದ್ದೀನ್ ಶರೀಫ್, ಇನಾಯತ್ ಉಲ್ಲಾ ವೇದಿಕೆಯಲ್ಲಿದ್ದರು. ಎಸ್‌ಐಒ ತುಮಕೂರು ಘಟಕದ ಅಧ್ಯಕ್ಷ ಇನಾಮ್ ಉಲ್ಲಾ ಪ್ರಾಸ್ತಾವಿಕ ಮಾತನಾಡಿದರು

ಹಾಸನದಲ್ಲೇ ಇಂದಿಗೂ ರಂಜಾನ್ ಆಚರಣೆ

‘ನಾನು 15 ವರ್ಷಗಳ ಹಿಂದೆ ಹಾಸನದಲ್ಲಿ ಉರ್ದು ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದೆ. ಅಲ್ಲಿನ ಮಕ್ಕಳು, ಪೋಷಕರೊಂದಿಗಿನ ಒಡನಾಟ ಅದ್ಭುತವಾದುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ನಾಯಕ್ ಹೇಳಿದರು.

‘ಅಂದಿನ ವಿದ್ಯಾರ್ಥಿಗಳು ಇಂದಿಗೂ ಸಂಪರ್ಕದಲ್ಲಿದ್ದಾರೆ. ಈಗಲೂ ರಂಜಾನ್ ಹಬ್ಬವನ್ನು ಹಾಸನದಲ್ಲಿಯೇ ಆಚರಣೆ ಮಾಡುತ್ತೇನೆ. ನಾವೆಲ್ಲರೂ ಒಂದು ಎಂಬ ಭಾವನೆ ಇದ್ದಾಗ ಇದು ಸಾಧ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT