ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 120 ಮಂದಿಗೆ ₹25.80 ಲಕ್ಷ ವಂಚನೆ

Last Updated 22 ಡಿಸೆಂಬರ್ 2017, 5:40 IST
ಅಕ್ಷರ ಗಾತ್ರ

ಉಡುಪಿ: ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಮೈಟೆಕ್ ಐಟಿಐ ಸಂಸ್ಥೆ ₹25.80 ಲಕ್ಷ ತರಬೇತಿ ವೇತನ (ಸ್ಟೈಪೆಂಡ್‌) ನೀಡದೆ ವಂಚನೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಆಭರಣ ವ್ಯಾಪಾರಿಗಳ ಮತ್ತು ಕೆಲಸಗಾರರ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಬಿ. ರಾಮಾಚಾರಿ ಆರೋಪಿಸಿದರು.

ಆಭರಣ ಮತ್ತು ರತ್ನದ ಆಭರಣ ತಯಾರಿಕೆ ತರಬೇತಿ ನೀಡುವುದಾಗಿ ಜಿಲ್ಲೆಯ 120 ಜನರನ್ನು ನೋಂದಣಿ ಮಾಡಿಕೊಂಡ ಮೈ ಟೆಕ್ ಸಂಸ್ಥೆ ಅವರಿಗೆ 3 ತಿಂಗಳ ತರಬೇತಿ ಅವಧಿಯಲ್ಲಿ ನೀಡಬೇಕಿದ್ದ ₹ 21,500 ವೇತನ ನೀಡದೆ ನೀಡದೆ ಮೋಸ ಮಾಡಿದೆ. ಬ್ಯಾಂಕ್ ಆಫ್‌ ಇಂಡಿಯಾದ ಉಡುಪಿ ಘಟಕದ ಶಾಖೆ ಸಹ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ. ಒಟ್ಟು 2 ಸಾವಿತ ಖಾತೆ ಕೌಶಲ ಯೋಜನೆ ತರಬೇತಿ ವೇತನ ನೀಡುವ ಸಲುವಾಗಿ ಈ ಶಾಖೆಯಲ್ಲಿ ಆರಂಭಿಸಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಗಂಭೀರ ಆರೋಪ ಮಾಡಿದರು.

ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ನೀಡಿ, ಆ ಮೂಲಕ ಅವರು ಸ್ವಂತ ಉದ್ಯೋಗಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ ಜಾರಿಗೆ ತಂದಿದೆ.

120ಕ್ಕೂ ಅಧಿಕ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಸಾಮಾನ್ಯ ಸಭೆಗೆ ಬಂದಿದ್ದ ಮೈಟೆಕ್ ಐಟಿಐ ಕಾಲೇಜಿನ ಸಂಸ್ಥಾಪಕ ಉದಯ ಆಚಾರ್ಯ ಪಳ್ಳಿ ಮೂರು ತಿಂಗಳ ತರಬೇತಿ ಪಡೆದುಕೊಳ್ಳಬೇಕು ಎಂದು ಸದಸ್ಯರನ್ನು ಮನವಿ ಮಾಡಿದರು. ಪ್ರಮಾಣ ಪತ್ರವೂ ಸಿಗುವುದರಿಂದ ಸಾಲ ಪಡೆದುಕೊಳ್ಳಲು ಅಥವಾ ಸ್ವಂತ ಉದ್ಯಮ ಆರಂಭಿಸಲು ಸಹಾಯ ಆಗಲಿದೆ ಎಂಬ ಕಾರಣಕ್ಕೆ 120 ಮಂದಿ ಸೇರಿದರು ಎಂದು ಹೇಳಿದರು.

3 ತಿಂಗಳ ಕಾಲ ಪ್ರತಿ ದಿನ 4 ಗಂಟೆ ಅವಧಿಯ ತರಬೇತಿ ಎಂದು ಹೇಳಿದ ಅವರು, ಪೂರ್ಣ ಅವಧಿಯ ತರಬೇತಿ ನೀಡಿಲ್ಲ. ಕೊನೆಗೆ ಪರೀಕ್ಷೆ ನಡೆಸಿ ಎಲ್ಲರಿಗೂ ಪ್ರಮಾಣ ಪತ್ರ ನೀಡಿದ್ದಾರೆ. ಸ್ಟೈಪೆಂಡ್ ಬಗ್ಗೆ ಕೇಳಿದಾಗ ಅದು ಕೆಲ ತಿಂಗಳ ನಂತರ ಬರಲಿದೆ ಎಂದು ಹೇಳಿದ್ದಾರೆ. ಆದರೆ ಇದಕ್ಕಾಗಿ ಸಂಸ್ಥೆಯವರು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರಂಭಿಸಿದ್ದ ಪ್ರತ್ಯೇಕ ಬ್ಯಾಂಕ್ ಖಾತೆಗೆ ತರಬೇತಿ ಅವಧಿಯ ಮೂರೂ ತಿಂಗಳು ತಲಾ ₹7500 ಜಮೆಯಾಗಿದೆ ಎಂದು ಹೇಳಿದರು.

ಜಮೆಯಾದ ಹಣ ಮತ್ತೆ ಸಂಸ್ಥೆಯ ಖಾತೆಗೆ ಮರಳುವಂತೆ (ರಿವರ್ಸ್‌) ಮೊದಲೇ ಅರ್ಜಿಗೆ ಎಲ್ಲ ಪ್ರಶಿಕ್ಷಣಾರ್ಥಿಗಳಿಂದ ಸಹಿ ಪಡೆದಿದ್ದರು. ಆದ್ದರಿಂದ ಜಮೆಯಾದ ಕೆಲವೇ ಹೊತ್ತಿನಲ್ಲಿ ಹಣ ಮೈಟೆಕ್ ಸಂಸ್ಥೆಯ ಖಾತೆಗೆ ವರ್ಗಾವಣೆಯಾಗಿದೆ. ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದಾಗ ಅದನ್ನು ಸರಿಪಡಿಸುವ ಉದ್ದೇಶದಿಂದ ರಿವರ್ಸ್‌ ಟ್ರಾನ್ಸ್‌ಫರ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅದನ್ನು ದುರುಪಯೋಗಪಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ರಾಮಾಚಾರಿ ಗಂಭೀರ ವರು ಆರೋಪ ಮಾಡಿದರು.

ಮೈಟೆಕ್ ಸಂಸ್ಥೆಯವರಿಗೆ ಈ ಬಗ್ಗೆ ಕೇಳಿದರೆ ಉದ್ಧಟತನದಿಂದ ಮಾತನಾಡುತ್ತಾರೆ. ನಾವು ಪ್ರಭಾವಿಗಳಾಗಿದ್ದು ಏನೂ ಮಾಡ ಲಾಗದು ಎಂಬ ದಾಟಿಯಲ್ಲಿ ಅವರು ಉತ್ತರ ನೀಡುತ್ತಾರೆ ಎಂದು ಅವರು ಹೇಳಿದರು.

ಸಾವಿರಾರು ಕೋಟಿ ಹಗರಣ

ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಗೆ ₹5 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ದೇಶದ ಎಲ್ಲ ಜಿಲ್ಲೆಗಳಲ್ಲಿ 120ಕ್ಕೂ ಅಧಿಕ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಉಡುಪಿಯ ಒಂದೇ ಪ್ರಕರಣದಲ್ಲಿ ₹25 ಲಕ್ಷ ವಂಚನೆಯಾಗಿದೆ.

ಇಲ್ಲಿಯೇ ಇನ್ನೂ 2 ಸಾವಿರ ಜನರಿಗೆ ಮೋಸ ಆಗಿರುವ ಶಂಕೆ ಇದೆ. ಇಡೀ ದೇಶದಲ್ಲಿ ತೆಗೆದುಕೊಂಡರೆ ಸಾವಿರಾರು ಕೋಟಿಯ ಹಗರಣ ನಡೆದಿರಬಹುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದರ ಮೂಲಕ ಪತ್ರ ಬರೆಯಲಾಗುವುದು. ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಪ್ರತ್ಯೇಕ ತಂಡದಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ರಾಮಾಚಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT