3

‘ಅಧಿಕಾರಕ್ಕೆ ತನ್ನಿ, 24 ಗಂಟೆಯಲ್ಲಿ ಸಾಲ ಮನ್ನಾ’

Published:
Updated:
‘ಅಧಿಕಾರಕ್ಕೆ ತನ್ನಿ, 24 ಗಂಟೆಯಲ್ಲಿ ಸಾಲ ಮನ್ನಾ’

ಬಾಗಲಕೋಟೆ: ‘ರಾಜ್ಯದ 18 ಮಂದಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನೆಗೆ ತೆರಳಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವಂತೆ ಕೇಳುವ ತಾಕತ್ತು ಇದೆಯೇ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಪ್ರಶ್ನಿಸಿದರು.

ಇಲ್ಲಿನ ಕಲಾ ಭವನದಲ್ಲಿ ಗುರುವಾರ ನಡೆದ ಜೆಡಿಎಸ್ ಯುವ ಘಟಕದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇಡೀ ರಾಷ್ಟ್ರದಲ್ಲಿ ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಕುಮಾರಸ್ವಾಮಿ ಹೊಂದಿದ್ದಾರೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಯೊಳಗೆ ರೈತರ ಎಲ್ಲಾ ಸಾಲ ಮನ್ನಾ ಮಾಡಲಾಗುವುದು’ ಎಂದರು.

‘ಸರ್ಕಾರದ ಸಾಧನೆ ನೆಪದಲ್ಲಿ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಹಣ ಪೋಲು ಮಾಡುತ್ತಿದ್ದಾರೆ ಎಂದು ಟೀಕಿಸಿದ ಮಧು ಬಂಗಾರಪ್ಪ, ಹೋದಲ್ಲೆಲ್ಲಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾ ಬರೀ ಬೆಂಕಿ ಹಚ್ಚುವ ಮಾತನಾಡುವ ಬಿಜೆಪಿ ಮುಖಂಡರು ಮೊದಲು ತಮ್ಮನ್ನು ಪರಿವರ್ತನೆ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಜೆಡಿಎಸ್ ಬೇರೆಯವರಿಗೆ ಅಧಿಕಾರದ ಗದ್ದುಗೆ ಕೊಡಿಸುವ ಕಿಂಗ್ ಮೇಕರ್ ಆಗುವುದಿಲ್ಲ. ಬದಲಿಗೆ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಯೋಜನೆ ಹೊಂದಿದೆ. ಗುಜರಾತ್‌ನಲ್ಲಿ ಬಿಜೆಪಿ–ಕಾಂಗ್ರೆಸ್ ಅಲ್ಲದೇ ಮೂರನೇ ಶಕ್ತಿ ಇದ್ದರೆ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತಿತ್ತು. ಅದೇ ಪರಿಸ್ಥಿತಿ ಈಗ ರಾಜ್ಯದಲ್ಲಿಯೂ ಇದೆ. ರಾಷ್ಟ್ರೀಯ ಪಕ್ಷಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿರುವ ಜನತೆ ಸ್ಥಳೀಯ ಹಿತಾಸಕ್ತಿಗಳಿಗೆ ಬದ್ಧವಾಗಿರುವ ಜೆಡಿಎಸ್‌ನತ್ತ ಒಲವು ಹೊಂದಿವೆ’ ಎಂದರು.

‘ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕಕ್ಕೆ ದೇವೇಗೌಡರ ಕೊಡುಗೆ. 20 ತಿಂಗಳ ಅಧಿಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರ ಸಾಧನೆಗಳನ್ನು ಮತದಾರರ ಮನೆ ಮನೆಗೆ ತಲುಪಿಸುವಂತೆ’ ಕಾರ್ಯಕರ್ತರಿಗೆ ಸಲಹೆ ನೀಡಿದ ಮಧು ಬಂಗಾರಪ್ಪ, ‘ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂದುಕೊಳ್ಳಬೇಡಿ. ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ, ಚಳವಳಿಗಳನ್ನು ರೂಪಿಸಿ ಮತದಾರರ ಮನಗೆಲ್ಲುವಂತೆ’  ಮುಖಂಡರಿಗೆ ಕಿವಿಮಾತು ಹೇಳಿದರು.

ಬಾದಾಮಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಹನುಮಂತ ಮಾವಿನಮರದ ಮಾತನಾಡಿ, ‘ರಾಜ್ಯದ ಒಳಿತಿಗಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲಾಗುವುದು’ ಎಂದರು.

‘ಗ್ರಾಮವಾಸ್ತವ್ಯದ ಮೂಲಕ ಆಡಳಿತ ಯಂತ್ರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ದ ಶ್ರೇಯ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಮುಖ್ಯಮಂತ್ರಿಯಾಗಿದ್ದ ವೇಳೆ ಸಾರಾಯಿ, ಲಾಟರಿ ನಿಷೇಧದಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದ ಕುಮಾರಸ್ವಾಮಿ, ಭಾಗ್ಯಲಕ್ಷ್ಮಿ ಯೋಜನೆ, ಹೆಣ್ಣು ಮಕ್ಕಳಿಗೆ ಸೈಕಲ್ ಕೊಡುವ ಮೂಲಕ ಜನಸಾಮಾನ್ಯರ ಮನಗೆದ್ದಿದ್ದರು’ ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರವಿ ಹುಣಶ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ಈಗ ಕಾಂಗ್ರೆಸ್–ಬಿಜೆಪಿಯಲ್ಲಿ ಇರುವ ನಾಯಕರೆಲ್ಲಾ ಹಿಂದೆ ಜನತಾಪರಿವಾರದಲ್ಲಿ ಇದ್ದರು. ಹಾಗಾಗಿ ಜೆಡಿಎಸ್ ನಾಯಕತ್ವ ಬೆಳೆಸುವ ಕಾರ್ಖಾನೆಯಾಗಿದೆ. ಜಿಲ್ಲೆಯಲ್ಲಿ ಪಕ್ಷ ಮತ್ತೆ ಪ್ರಾಬಲ್ಯ ಹೊಂದಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಮುಖಂಡ ಘನಶ್ಯಾಂ ಭಾಂಡಗೆ, 2018ರ ಚುನಾವಣೆಯನ್ನು ಇಡೀ ದೇಶವೇ ಗಮನಿಸುತ್ತಿದೆ. ಕಾಂಗ್ರೆಸ್–ಬಿಜೆಪಿ ಕೇವಲ ಮಾತಿನ ಬಂಡವಾಳ ಹೊಂದಿವೆ ಎಂಬುದು ರಾಜ್ಯದ ಜನರಿಗೂ ಮನದಟ್ಟಾಗಿದೆ. ಹಾಗಾಗಿ ಅವರೆಲ್ಲಾ ಜೆಡಿಎಸ್‌ನತ್ತ ಒಲವು ಹೊಂದಿದ್ದಾರೆ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬೈಯ್ಯುವುದು ಬೇಡ. ಬಾದಾಮಿ ಕ್ಷೇತ್ರದಲ್ಲಿ ಈ ಬಾರಿ ಖಾತೆ ತೆರೆಯೋಣ. ಯುವಜನರಿಂದ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ಸಮಾರಂಭದಲ್ಲಿ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗುಬ್ಬಿ ಮಾತನಾಡಿದರು. ವೇದಿಕೆಯಲ್ಲಿ ಮೈಸೂರು ವಿಭಾಗದ ಕಾರ್ಯಾಧ್ಯಕ್ಷ ನರಸಿಂಹಪ್ಪ, ಪ್ರಧಾನ ಕಾರ್ಯದರ್ಶಿ ಹರೀಶ ಕುಮಾರ, ಮುಖಂಡರಾದ ತಿಮ್ಮೇಗೌಡ, ಸಲೀಂ ಮೊಮಿನ್, ಶರಣು ಹುರಕಡ್ಲಿ, ನಿಂಗಪ್ಪ ಬಾಳಿಕಾಯಿ, ಯಾಸೀನ್ ನದಾಫ, ಅಪ್ಪಣ್ಣ ಹಿರೇಹಾಳ ಉಪಸ್ಥಿತರಿದ್ದರು.

‘ಜಗಳ ಮುಂದುವರೆದರೆ ಮುಳುಗುತ್ತೇವೆ’

ಭಾಷಣದ ವೇಳೆ ಪಕ್ಷದ ಜಿಲ್ಲಾ ಘಟಕದಲ್ಲಿನ ಆಂತರಿಕ ಕಲಹದ ಬಗ್ಗೆ ಪ್ರಸ್ತಾಪಿಸಿದ ಮಧು ಬಂಗಾರಪ್ಪ, ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುನ್ನಡೆದರೆ ಯಶಸ್ಸು ಪಡೆಯುತ್ತೇವೆ. ಜಗಳ ಮುಂದುವರೆದರೆ ಎಲ್ಲರೂ ಮುಳುಗಲಿದ್ದೇವೆ ಎಂದು ಮುಖಂಡರಿಗೆ ಚಾಟಿ ಬೀಸಿದರು.

ಫೆಬ್ರುವರಿ 4ರಂದು ದಾವಣಗೆರೆ ಇಲ್ಲವೇ ಹಾವೇರಿಯಲ್ಲಿ ಯುವ ಘಟಕದ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ 4ರಿಂದ 5 ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿದ ಮಧು, ಹೊಸ ಮತದಾರರನ್ನು ತಲುಪುವಂತೆ ಮುಖಂಡರಿಗೆ ಸಲಹೆ ನೀಡಿದರು.

ಸಭೆಗೆ ಬಾದಾಮಿ ತಾಲ್ಲೂಕಿನಿಂದ ಹೆಚ್ಚಿನ ಜನ ಬಂದಿದ್ದ ಕಾರಣ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹನುಮಂತ ಮಾವಿನಮರದ ಹೆಸರು ಹೇಳುತ್ತಿದ್ದಂತೆಯೇ ಶಿಳ್ಳೆ, ಚಪ್ಪಾಳೆ, ಕೂಗಾಟ, ಜೈಕಾರ ಕೇಳಿಬರುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry