ಸಚಿವ ರಮೇಶ ಜಾರಕಿಹೊಳಿ ವಿರುದ್ಧ ರೈತರ ಪ್ರತಿಭಟನೆ

7

ಸಚಿವ ರಮೇಶ ಜಾರಕಿಹೊಳಿ ವಿರುದ್ಧ ರೈತರ ಪ್ರತಿಭಟನೆ

Published:
Updated:
ಸಚಿವ ರಮೇಶ ಜಾರಕಿಹೊಳಿ ವಿರುದ್ಧ ರೈತರ ಪ್ರತಿಭಟನೆ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯು ಕಬ್ಬಿನ ಬಾಕಿ ಹಣವನ್ನು ಉಳಿಸಿಕೊಂಡಿದ್ದು, ತಕ್ಷಣ ಹಣ ಪಾವತಿಸಬೇಕೆಂದು ಒತ್ತಾಯಿಸಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಗುರುವಾರ ಅರೆಬೆತ್ತಲೆ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ಮಾಡಿದರು.

ಬಾಕಿ ಹಣ ಪಾವತಿಸುವಂತೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು, ಎರಡನೇ ದಿನವೂ ಪ್ರತಿಭಟನೆಯನ್ನು ಮುಂದುವರಿಸಿದರು. ಮೈ ಕೊರೆಯುವ ಚಳಿಯಲ್ಲಿ ಶರ್ಟ್‌ ಬಿಚ್ಚಿ ನೆಲದ ಮೇಲೆ ಉರುಳು ಸೇವೆ ಮಾಡಿದರು.

ರಮೇಶ ವಿರುದ್ಧ ಧಿಕ್ಕಾರ ಕೂಗಿದರು. ಹಲವು ಬಾರಿ ಮನವಿ ನೀಡಿದ್ದರೂ ಜಿಲ್ಲಾಡಳಿತ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲವೆಂದು ಜಿಲ್ಲಾಡಳಿತದ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆಯ ಬಾಕಿ ಹಣ ಬಾರದೇ ಇರುವುದು ಸರ್ಕಾರದ ಆಡಳಿತದ ವೈಖರಿಗೆ ಮಾದರಿಯಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಡೈಲಾಗ್‌ ಮೂಲಕ ಆಕ್ರೋಶ; ಸಿನಿಮಾ, ನಾಟಕಗಳ ಡೈಲಾಗ್‌ ಮೂಲಕ ರಮೇಶ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು. ವರನಟ ಡಾ.ರಾಜಕುಮಾರ್‌ ಅಭಿನಯಿಸಿದ ಬಬ್ರುವಾಹನ ಚಲನಚಿತ್ರದ ಡೈಲಾಗ್‌ ಮಾದರಿಯಲ್ಲಿ ರಮೇಶ ಅವರನ್ನು ಕಿಚಾಯಿಸಿದರು. ರಾಮಾಯಣದ ರಾವಣನಂತೆ ರಮೇಶ ಅವರನ್ನು ಬಿಂಬಿಸಿ, ಕಿಚಾಯಿಸಿದರು. ನೆರೆದಿದ್ದವರಲ್ಲಿ ನಗೆ ಮೂಡಿಸಿತು.

ಪ್ರತಿಭಟನೆ ಮುಂದುವರಿಕೆ: ಕಬ್ಬಿನ ಬಾಕಿ ಹಣ ಪಾವತಿಯಾಗುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಹೇಳಿದರು. ಇದೇ ತಿಂಗಳ 8ರಂದು ಡಿಸಿ ಕಚೇರಿ ಬಳಿ ರಮೇಶ ಜಾರಕಿಹೊಳಿ ಅವರಿಗೆ ಘೇರಾವ್ ಹಾಕಿ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿದ್ದೇವು. ಬಾಕಿ ಹಣ ಉಳಿದಿರುವ ರೈತರ ಹೆಸರುಗಳನ್ನು ಪಡೆದುಕೊಂಡಿದ್ದರು. ಇದೇ ತಿಂಗಳ 18ರ ಒಳಗೆ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿದರು.

ರೈತರ ಮನವೊಲಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮತ್ತು ಡಿಸಿಪಿ ಅಮರನಾಥ ರೆಡ್ಡಿ ಪ್ರಯತ್ನಿಸಿದರು. ಆದರೆ, ರೈತರು ಜಗ್ಗಲಿಲ್ಲ. ಪ್ರತಿಭಟನೆಯನ್ನು ಮುಂದುವರಿಸಿದರು. ಗೋಕಾಕ ತಾಲ್ಲೂಕು ಹಿರೇನಂದಿಹಳ್ಳಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ನೂರಾರು ರೈತರ ಬಾಕಿ ಹಣ ಸಂದಾಯವಾಗಬೇಕಿದೆ.

ಹಣ ಬಾರದ್ದರಿಂದ ಜೀವನ ತಾಪತ್ರಯ ಆಗಿದೆ ಎಂದು ರೈತರು ಅಳಲು ತೋಡಿಕೊಂಡರು. ಈ ಸಲ ಹಣ ಪಾವತಿಯಾಗುವವರೆಗೆ ಈ ಆವರಣದಿಂದ ಕದಲುವುದಿಲ್ಲ ಎಂದು ರೈತರು ಸ್ಪಷ್ಠಪಡಿಸಿದರು. ರೈತ ಮುಖಂಡರಾದ ರಾಘವೇಂದ್ರ ನಾಯಕ, ಅಶೋಕ ಯಮಕನಮರಡಿ, ಎಸ್. ಸೌದಾಗರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry