7

ಪಂಚಾಯಿತಿ ಮಟ್ಟದಲ್ಲಿ ಖರೀದಿಗೆ ಒತ್ತಾಯ

Published:
Updated:

ಚಿತ್ತಾಪುರ: ಸರ್ಕಾರವು ರೈತರ ಪ್ರತಿ ಕ್ವಿಂಟಲ್ ತೊಗರಿಗೆ ₹7,500 ಬೆಂಬಲ ಬೆಲೆ ನಿಗದಿ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಗುರುವಾರ ತೊಗರಿ ಬೆಳೆಗಾರರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಹಾಗೂ ರೈತ ಮುಖಂಡರು ಎತ್ತಿನ ಗಾಡಿಯೊಂದಿಗೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರವು ಬೇರೆ ದೇಶಗಳಿಂದ ಅಧಿಕ ಪ್ರಮಾಣದಲ್ಲಿ ತೊಗರಿ ಆಮದು ಮಾಡಿಕೊಂಡಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿಯುತ್ತಿದೆ. ಸರ್ಕಾರ ರೈತರ ಸಮಸ್ಯೆ ಪರಿಹಾರ ಮಾಡಲು ಈಗ ಘೋಷಿಸಿರುವ ಬೆಂಬಲ ಬೆಲೆಯನ್ನು ಪರಿಷ್ಕರಣೆ ಮಾಡಿ ರೈತರ ಬೇಡಿಕೆಯಂತೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಮುಖ್ಯಸ್ಥ ಮಾರುತಿ ಮಾನ್ಪಡೆ, ‘ತೊಗರಿ ಬೆಳೆಯಲು ರೈತರು ಅಪಾರ ಖರ್ಚು ಮಾಡುತ್ತಿದ್ದಾರೆ. ಸರ್ಕಾರದ ನೀತಿಯಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಆದಾಯ ಕಡಿಮೆಯಾಗುತ್ತಿದೆ. ಜನರಿಗೆ ಬೇಕಾದ ಜೀವನಾವಶ್ಯಕ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಪ್ರತಿಯೊಂದಕ್ಕೂ ನಿಗದಿತ ಬೆಲೆ ಇದೆ. ಕೃಷಿ ಉತ್ಪನ್ನಗಳಿಗೆ ಮಾತ್ರ ಬೆಲೆಯೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತೊಗರಿಗೆ ಬೆಂಬಲ ಬೆಲೆಯ ಜೊತೆಗೆ ಸೂಕ್ತ ರೀತಿಯಲ್ಲಿ ಪ್ರತ್ಯೇಕವಾದ ಕಾನೂನು ರಚನೆ ಮಾಡಬೇಕು. ಹೀಗೆ ಮಾಡುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಹೊರಬರುತ್ತಾರೆ. ಸ್ವಾಮಿನಾಥನ್ ವರದಿ ಜಾರಿಗೊಳಿ ಸಬೇಕು. ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಲ್ಲಿನ ಸಾಲ ಮನ್ನಾ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘2015-16ನೇ ಸಾಲಿನಲ್ಲಿ ಕೇಂದ್ರ ಸರ್ಕಾರ 67 ಲಕ್ಷ ಟನ್, 2016-17ನೇ ಸಾಲಿನಲ್ಲಿ 52 ಲಕ್ಷ ಟನ್, 2017-18ನೇ ಸಾಲಿನಲ್ಲಿ 18 ಲಕ್ಷ ಟನ್ ತೊಗರಿ ಆಮದು ಮಾಡಿಕೊಂಡಿದೆ. ದೇಶದಲ್ಲಿ ತೊಗರಿ ಸಂಗ್ರಹ ಅಧಿಕವಾಗಿದೆ. ರೈತರು ಅಧಿಕ ತೊಗರಿ ಬೆಳೆದಿದ್ದಾರೆ ಎಂದು ತೊಗರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿಲ್ಲ. ಖರೀದಿದಾರರು ಕಡಿಮೆ ಬೆಲೆ ಖರೀದಿ ಮಾಡುತ್ತಿದ್ದಾರೆ. ಅದರ ಗಂಭೀರ ಸಮಸ್ಯೆಯನ್ನು ರೈತರು ಅನುಭವಿಸಬೇಕಾಗಿದೆ. ಸರ್ಕಾರ ರೈತರ ಗೋಳಿಗೆ ಸ್ಪಂದನೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಅಧ್ಯಕ್ಷ ರೈತ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ‘ಆಳುವ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಸಾಲದ ಸುಳಿಗೆ ಸಿಲುಕಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೊಗರಿ ಖರೀದಿಗೆ ಅವೈಜ್ಞಾನಿಕ ಪದ್ಧತಿ ಅನುಸರಿಸದೆ ಎಕರೆಗೆ 5 ಕ್ವಿಂಟಲ್‌ನಂತೆ ರೈತರು ಬೆಳೆದಿರುವ ಎಲ್ಲಾ ತೊಗರಿ ಖರೀದಿ ಮಾಡಬೇಕು’ ಎಂದು ಆಗ್ರಹಿಸಿದರು.

ಲಾಡ್ಜಿಂಗ್ ಕ್ರಾಸ್‌ನಿಂದ ತಹಶೀ ಲ್ದಾರ್ ಕಚೇರಿವರೆಗೆ ರೈತರು ಎತ್ತಿನ ಗಾಡಿಯೊಂದಿಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮೆರವಣಿಗೆ ನಡೆಸಿದರು. ರಾಜ್ಯಪಾಲರಿಗೆ ಬರೆದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ತಾಲ್ಲೂಕು ಸಂಚಾಲಕ ಮಂಜುಗೌಡ ಪೊಲೀಸ್ ಪಾಟೀಲ್, ಸಹ ಸಂಚಾಲಕರಾದ ಸಿದ್ರಾಮಪ್ಪ ರೇಷ್ಮಿ, ರಮೇಶ ಬಮ್ಮನಳ್ಳಿ, ಮುಖಂಡರಾದ ಅಶೋಕ ಮ್ಯಾಗೇರಿ, ಗುರಣ್ಣ ಬಮ್ಮನಳ್ಳಿ, ಮಹೇಶ ಬಟಗಿರಿ, ನಾಗರಾಜ ಹೂಗಾರ, ಭೀಮಣ್ಣ ಸೀಬಾ, ಶಾಂತಕುಮಾರ ಮಳಖೇಡ, ಮುರುಗೇಂದ್ರ ಭಜಂತ್ರಿ, ಸಿದ್ರಾಮ ಭೋವಿ, ರೇವಣಸಿದ್ದಪ್ಪ, ದಶರಥ ದೊಡ್ಡಮನಿ, ರಮೇಶ ತುಕಾರಾಮ, ಮಹಾದೇವ ಪಾಲಪ, ಸಿದ್ರಾಮಯ್ಯ ಗೊಂಬಿಮಠ, ಸಂಜೀವರೆಡ್ಡಿ ಪಾಲಪ, ಭೀಮರೆಡ್ಡಿ ಗೋಪಸೇನ್, ರವೀಂದ್ರ ಗೊಬ್ಬೂರ, ಅಕ್ಕಮಹಾದೇವಿ ನಾಗೇಶ ಉಪಸ್ಥಿತರಿದ್ದರು.

* * 

ತೊಗರಿ ಖರೀದಿಗೆ ಯಾವುದೇ ಮಿತಿ ನಿಗದಿ ಮಾಡದೆ ರೈತರು ಬೆಳೆದ ಎಲ್ಲಾ ತೊಗರಿಯನ್ನು ಖರೀದಿಸಬೇಕು. ಪಂಚಾಯಿತಿಗೊಂದು ಕೇಂದ್ರ ಶುರು ಮಾಡಬೇಕು.

ಮಲ್ಲಿಕಾರ್ಜುನ ಎಮ್ಮೆನೋರ್, ಬಿಜೆಪಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry