ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಗೆ ₹ 6 ಸಾವಿರ ಸಹಾಯ ಧನ

Last Updated 22 ಡಿಸೆಂಬರ್ 2017, 6:50 IST
ಅಕ್ಷರ ಗಾತ್ರ

ಸಿದ್ದಾಪುರ: ‘ಮೊದಲಬಾರಿಗೆ ಗರ್ಭಿಣಿ ಆದವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಒಟ್ಟು ₹ 6 ಸಾವಿರ ಸಹಾಯಧನ ದೊರೆಯಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಂತೋಷ ಡಿ. ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ವಿಷಯ ಹೇಳಿದರು.

‘ಈ ಯೋಜನೆಯ ಅನ್ವಯ ಗರ್ಭಿಣಿಗೆ ಆರಂಭದಲ್ಲಿ ₹1 ಸಾವಿರ, ಆರು ತಿಂಗಳು ಆದಾಗ ₹ 2 ಸಾವಿರ, ಹೆರಿಗೆ ಆದಾಗ ₹ 2 ಸಾವಿರ, ನಂತರ ₹ 1 ಸಾವಿರ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ’ ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್, ‘ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ಅನಿಲ ಭಾಗ್ಯ ಯೋಜನೆ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ 2,799 ಫಲಾನುಭವಿಗಳು ಆಯ್ಕೆಯಾಗಿದ್ದಾರೆ’ ಎಂದು ಆಹಾರ ಇಲಾಖೆಯ ಅಧಿಕಾರಿ ಎನ್‌.ಐ ಗೌಡ ಹೇಳಿದರು. ‘ಶಾಲೆಗಳಿಗೆ ಬಿಸಿಯೂಟಕ್ಕೆ ಪಡಿತರವನ್ನು ಕಡಿಮೆ ನೀಡಲಾಗುತ್ತದೆಯೇ’ ಎಂದು ಸುಧೀರ್ ಗೌಡರ್ ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚೈತನ್ಯ ಕುಮಾರ್, ‘ಶಾಲೆಗಳು ನೀಡುವ ಇಂಡೆಂಟ್ ಆಧರಿಸಿ ಪಡಿತರ ನೀಡುತ್ತೇವೆ. ತಾಲ್ಲೂಕಿಗೆ ಒಂದು ತಿಂಗಳಿಗೆ ಒಟ್ಟು 340 ರಿಂದ 380 ಕ್ವಿಂಟಲ್ ಪಡಿತರ ನೀಡಲಾಗುತ್ತದೆ. ಈ ತಿಂಗಳು 282 ಕ್ವಿಂಟಲ್ ಕೊಡಬೇಕಾಗಿದೆ. ಶಾಲೆಗಳಲ್ಲಿ ಕಳೆದ ತಿಂಗಳ ನೀಡಿದ ಸಾಮಗ್ರಿಗಳು ಉಳಿದಿದ್ದರೆ, ಈ ತಿಂಗಳು ಕಡಿಮೆ ಇಂಡೆಂಟ್ ನೀಡುತ್ತಾರೆ’ ಎಂದರು.

‘ಶಾಲೆಯಲ್ಲಿ ಎಲ್ಲ ಮಕ್ಕಳೂ ಬಿಸಿಯೂಟ ಮಾಡುತ್ತಿದ್ದರೆ ಕಡಿಮೆ ಪಡಿತರ ಹೇಗೆ ಸಾಕಾಗುತ್ತದೆ’ ಎಂದು ಸುಧೀರ್ ಗೌಡರ್ ಪ್ರಶ್ನಿಸಿದರು. ಅದಕ್ಕೆ ಚೈತನ್ಯ ಕುಮಾರ್, ‘ಶೇ 97.50ರಷ್ಟು ಮಕ್ಕಳು ಬಿಸಿಯೂಟ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ‘ವಿವಿಧ ರೋಗಗಳ ಕುರಿತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಒಬ್ಬರಿಗೆ ಡೆಂಗೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿದೆ’ ಎಂದರು.

ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಟಿ.ಹೆಗಡೆ ಮಾತನಾಡಿ, ‘ನೀರಾವರಿ ಉದ್ದೇಶಕ್ಕಾಗಿ ಬಿಪಿಎಲ್ ಕಾರ್ಡ್‌ ಹೊಂದಿರುವ 242 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಮಂಜೂರಾತಿ ನೀಡಲಾಗಿದೆ’ ಎಂದು ತಿಳಿಸಿದರು. ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ, ಇಒ ಶ್ರೀಧರ ಭಟ್ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರು ಇದ್ದರು.

* * 

ಕೃಷಿಕರ ಬೆಳೆ ರಕ್ಷಣೆಗೆ ನೀಡಿರುವ ಬಂದೂಕುಗಳ ನವೀಕರಣದ ಪರವಾನಗಿ ಶುಲ್ಕ ಹೆಚ್ಚಿಸಿರುವುದರಿಂದ ಅದನ್ನು ಇಟ್ಟುಕೊಳ್ಳುವುದು ರೈತರಿಗೆ ಕಷ್ಟವಾಗಿದೆ
ರಘುಪತಿ ಹೆಗಡೆ
ತಾಲ್ಲೂಕು ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT