ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ

Last Updated 22 ಡಿಸೆಂಬರ್ 2017, 8:21 IST
ಅಕ್ಷರ ಗಾತ್ರ

ಚಾಮರಾಜನಗರ: ವಿಜಯಪುರದಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಗುರುವಾರ ನಗರದಲ್ಲಿ ವಿದ್ಯಾರ್ಥಿ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.

ಕೃತ್ಯದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಪ್ರತ್ಯೇಕ ಪ್ರತಿಭಟನೆ ನಡೆಸಿದವು.

ಬಿವಿಎಸ್‌ ಪ್ರತಿಭಟನೆ: ಬಿವಿಎಸ್‌ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಜೆಎಸ್‌ಎಸ್‌ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಸರ್ಕಾರಿ ಪದವಿಪೂರ್ವ ಬಾಲಕರ ಹಾಗೂ ಬಾಲಕಿಯರ ಕಾಲೇಜು, ಸಿದ್ದಾರ್ಥ ಪ್ರಥಮದರ್ಜೆ ಕಾಲೇಜು, ಸೇಂಟ್‌ ಫ್ರಾನ್ಸಿಸ್‌ ಪದವಿಪೂರ್ವ ಕಾಲೇಜು, ಸರ್ಕಾರಿ ಐಟಿಐ ಕಾಲೇಜುಗಳ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಭುವನೇಶ್ವರಿ ವೃತ್ತದ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಸಮಾವೇಶಗೊಂಡು, ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಜಯಪುರ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಹೀನ ಕೃತ್ಯ ನಡೆದಿದೆ. ದೆಹಲಿ ನಡೆದ ನಿರ್ಭಯಾ ಪ್ರಕರಣದಂತಹ ಘೋರ ಘಟನೆ ಇದು. ಈ ಬಗ್ಗೆ ದೂರು ದಾಖಲಿಸಲು ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಣ್ಣುಮಕ್ಕಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಆದರೆ, ಬಾಲಕಿಯ ಮೇಲೆ ಅತ್ಯಾಚಾರವಾಗಿ ಕೊಲೆ ಯಾಗಿದ್ದರೂ ಎಫ್‌ಐಆರ್‌ ದಾಖಲಿಸಲು ಪೊಲೀಸ್‌ ಇಲಾಖೆ ವಿಳಂಬ ಮಾಡಿದೆ. ಇದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಆರ್. ಜೈನ್‌ ಅವರೇ ನೇರಹೊಣೆ ಎಂದು ದೂರಿದರು.

ಹಿಂದೂಗಳ ಮೇಲೆ ಸಣ್ಣ ದೌರ್ಜನ್ಯ ವಾದರೂ ಹೋರಾಟ ಮಾಡುತ್ತಿದ್ದ ಸಂಸದರಾದ ಪ್ರತಾಪ್‌ಸಿಂಹ, ಶೋಭಾ ಕರದ್ಲಾಂಜೆ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಮುಖಂಡ ಗೋ ಮಧುಸೂದನ್‌ ಅವರು ಈಗ ಏಕೆ ಮೌನವಹಿಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ಯಾಕೆ ಹೋರಾಟ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಪ್ರಕರಣದ ಜವಾಬ್ದಾರಿಯನ್ನು ಬಿಜೆಪಿ ಕೂಡ ಹೊರಬೇಕು ಎಂದು ಹೇಳಿದರು.

ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕು. ಅವರನ್ನು ಶಿಕ್ಷೆಗೆ ಒಳಪಡಿಸುವ ಕೆಲಸವನ್ನು ಸರ್ಕಾರ ಶೀಘ್ರವೇ ಮಾಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಜಿಲ್ಲೆಯಲ್ಲಿ ಬಂದ್‌ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಆರೋಪಿಗಳ ಬಂಧನಕ್ಕೆ ಎಬಿವಿಪಿ ಆಗ್ರಹ

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಗುರುವಾರ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿತು. ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ಜಿಲ್ಲಾಡಳಿತ ಭವನಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತು ಪೊಲೀಸ್‌ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು

ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಾಲಕಿಯ ಪೋಷಕರು ಮತ್ತು ಸಂಬಂಧಿಕರು ಶವವಿಟ್ಟುಕೊಂಡು ರಾತ್ರಿಯಿಡೀ ಧರಣಿ ನಡೆಸಿದರೂ ಪೊಲೀಸರು ನಿರ್ಲಕ್ಷಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರವಾಸದ ನೆಪವೊಡ್ಡಿ ಪ್ರಕರಣವನ್ನೇ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT