7

ಬಹುದಿನಗಳ ಸಮಸ್ಯೆಗೆ ಪರಿಹಾರ

Published:
Updated:
ಬಹುದಿನಗಳ ಸಮಸ್ಯೆಗೆ ಪರಿಹಾರ

ಕಡೂರು: ಕಡೂರಿನ ಮೆಸ್ಕಾಂ ಕಚೇರಿಯ ಮುಂದೆ 200 ಮೀಟರ್ ಉದ್ದದ ಒಳಚರಂಡಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿದ್ದು, ಬಹುದಿನಗಳ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

ಕಡೂರು ಪಟ್ಟಣದಲ್ಲಿ ಹಾದು ಹೋಗಿರುವ 206 ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಸ್ಕಾಂ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಮಳೆಗಾಲದಲ್ಲಿ ಜನರು ಓಡಾಡುವಂತಿರಲಿಲ್ಲ. ಮಳೆ ಬಂದರೆ ಈ ಕಚೇರಿ ಮುಂದೆ ಸುಮಾರು 300 ಮೀಟರ್ ಗಳಷ್ಟು ದೂರ 3 ಅಡಿಗಳಷ್ಟು ನೀರು ನಿಲ್ಲುತ್ತಿತ್ತು.

ಈ ನೀರು ಹೋಗಲು ಜಾಗವಿಲ್ಲದೆ ರಸ್ತೆ ಸಂಚಾರ ಅಸ್ತವ್ಯಸ್ತವಾದರೆ, ಮೆಸ್ಕಾಂ ಕಚೇರಿಯೊಳಗೆ ಹೋಗಲೂ ಸಾದ್ಯವಾಗುತ್ತಿರಲಿಲ್ಲ. ದ್ವಿಚಕ್ರ ವಾಹನ ಸವಾರರು ಬೀಳುವುದು ಮಾಮೂಲಿಯಾಗಿತ್ತು. ಪ್ರತಿ ಮಳೆಗಾಲದಲ್ಲಿ ಜನರು ಹಿಡಿಶಾಪ ಹಾಕುವುದು ಏಳೆಂಟು ವರ್ಷಗಳಿಂದ ಮಾಮೂಲಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಇದರತ್ತ ಗಮನ ಹರಿಸದಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿತ್ತು.

ಆದರೆ, ಇದೀಗ ಪ್ರಾಧಿಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ₹ 12 ಲಕ್ಷ ವೆಚ್ಚದಲ್ಲಿ 200 ಮೀಟರ್ ಭೂಗತ ಚರಂಡಿ ಕಾಮಗಾರಿ ಆರಂಭಿಸಿದೆ. ಸುಮಾರು 40 ದಿನಗಳಲ್ಲಿ ಕಾಮಗಾರಿ ಮುಗಿಯಲಿದೆ ಎನ್ನುತ್ತಾರೆ ಪ್ರಾಧಿಕಾರದ ಎ.ಇ. ಸತ್ಯನಾರಾಯಣ.

ಇಲ್ಲಿ ನಿಲ್ಲುತ್ತಿದ್ದ ನೀರು ಮರವಂಜಿ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿ ಮೂಲಕ ಪಟ್ಟಣದ ಹೊರವಲಯಕ್ಕೆ ಹೋಗುತ್ತದೆ. ಆದರೆ, ಇದಕ್ಕೆ ಶನಿ ದೇವಸ್ಥಾನದ ಬಳಿ ಸೇತುವೆ ನಿರ್ಮಿಸುವ ಅಗತ್ಯವಿದೆ. ಆಗ ಈ ನೀರು ಸರಾಗವಾಗಿ ಹರಿದು ಬಿಜಿಎಸ್ ಶಾಲೆಯ ಹತ್ತಿರವಿರುವ ಚಿಕ್ಕೊಡ್ಡು ನಾಲೆ ಸೇರುತ್ತದೆ. ಇಲ್ಲದಿದ್ದರೆ ಮೆಸ್ಕಾಂ ಕಚೇರಿ ಮುಂದಿನ ಸಮಸ್ಯೆ ಶನಿ ದೇವಸ್ಥಾನದ ರಸ್ತೆ ಪಕ್ಕದ ಜಾಗಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಪುರಸಭೆಯವರು ಇದರತ್ತ ಕೂಡಲೇ ಗಮನ ಹರಿಸಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry