7

ಚನ್ನಕೇಶವಸ್ವಾಮಿ ವೈಕುಂಠ ಏಕಾದಶಿ 29ಕ್ಕೆ

Published:
Updated:
ಚನ್ನಕೇಶವಸ್ವಾಮಿ ವೈಕುಂಠ ಏಕಾದಶಿ 29ಕ್ಕೆ

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸಣ್ಣಕ್ಕಿ ಬಾಗೂರಿನ ಚನ್ನಕೇಶವಸ್ವಾಮಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮವು ಡಿ. 29ರ ಬೆಳಿಗ್ಗೆ 5ರಿಂದ ರಾತ್ರಿ 9 ರವರೆಗೆ ನಡೆಯಲಿದೆ.

ದೇಗುಲದಲ್ಲಿ ಅಂದು ಬೆಳಿಗ್ಗೆ 5ರಿಂದ ಗಂಗಾಪೂಜೆ, ಸುಪ್ರಭಾತ ಸೇವೆ, 6ಕ್ಕೆ ಪಂಚಾಮೃತ ಮಹಾಭಿಷೇಕ, 7ಕ್ಕೆ ತೋಮಾಲ ಮತ್ತು ಪುಷ್ಪಾಲಂಕಾರ ಸೇವೆ, 8ಕ್ಕೆ ವೇದಘೋಷ, ಮಹಾನೈವೇದ್ಯ, ಮಹಾಮಂಗಳಾರತಿ ಹಾಗೂ ಭೂವೈಕುಂಠ ದ್ವಾರ ದರ್ಶನ ಸೇವೆ, 9ಕ್ಕೆ ವಿಷ್ಣು ಸಹಸ್ರನಾಮ ಹಾಗೂ ವೇದ ಪಾರಾಯಣ, ಅರ್ಚನೆ, ಮಹಾಮಂಗಳಾರತಿ, ವೈಕುಂಠದ್ವಾರ ದರ್ಶನ ಸೇವೆ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಲಿವೆ.

ವೈಕುಂಠ ಏಕಾದಶಿ ವಿಶೇಷ: ಧನುರ್ಮಾಸದಲ್ಲಿ ಬರುವ ಶುಕ್ಲಪಕ್ಷದ ಏಕಾದಶಿಯನ್ನು ವೈಕುಂಠ ಏಕಾದಶಿ ಎನ್ನುತ್ತಾರೆ. ಅಂದು ಉಪವಾಸವಿದ್ದು ಮಹಾವಿಷ್ಣುವನ್ನು ಆರಾಧಿಸಲಾಗುತ್ತದೆ. ವಿಷ್ಣು ದೇವಾಲಯಗಳಲ್ಲಿ ಉತ್ತರ ದಿಕ್ಕಿಗೆ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ವೈಕುಂಠದ್ವಾರ ನಿರ್ಮಿಸಲಾಗುತ್ತದೆ ಎನ್ನುತ್ತಾರೆ ಚನ್ನಕೇಶವಸ್ವಾಮಿ ದೇಗುಲದ ಪ್ರಧಾನ ಪುರೋಹಿತ ಬಿ.ಕೆ.ಶ್ರೀನಿವಾಸನ್‌.

2ನೇ ಬಾರಿ ಆಚರಣೆ: ತಿರುಪತಿಯಲ್ಲಿ ನಡೆಯುವ ರೀತಿಯಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮವನ್ನು ಈ ದೇಗುಲದಲ್ಲಿ 2ನೇ ಬಾರಿಗೆ ಆಯೋಜಿಸಲಾಗಿದೆ. ಲೋಕ ಕಲ್ಯಾಣಕ್ಕಾಗಿ, ಗ್ರಾಮದ ಉದ್ಧಾರಕ್ಕಾಗಿ, ಭಕ್ತರ ಒಳಿತಿಗಾಗಿ, ಸಮೃದ್ಧ ಮಳೆ–ಬೆಳೆಗಾಗಿ ಪ್ರಾರ್ಥಿಸಿ ಈ ವಿಶಿಷ್ಟ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭೂವೈಕುಂಠ ದ್ವಾರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಗುವುದು ಎನ್ನುತ್ತಾರೆ ದೇವಸ್ಥಾನ ಸಮಿತಿ ಸದಸ್ಯರು.

ನೂರೊಂದು ದೇಗುಲ: ನೂರೊಂದು ದೇಗುಲ ಹಾಗೂ ಬಾವಿ ನೆಲೆಬೀಡು, ವಿಜಯನಗರದ ಅರಸರು, ಚಿತ್ರದುರ್ಗದ ಪಾಳೇಗಾರರು ಆಳಿದ ಸಂಪದ್ಬರಿತ ನಾಡು ಇದಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಐತಿಹಾಸಿಕ ಚನ್ನಕೇಶವಸ್ವಾಮಿ ದೇಗುಲ. ಈ ದೇವಾಲಯವನ್ನು ಹೊಯ್ಸಳರ ಅರಸ ವಿಷ್ಣುವರ್ಧನ ನಿರ್ಮಿಸಿದ್ದನು ಎಂದು ಹೇಳಲಾಗಿದೆ. ಇಲ್ಲಿನ ಬೃಂದಾವನ ವಸಂತವಾಟಿಕೆ, ಕೈಸಾಲಿ, ಯಾಗಲಾಸಿ, ತುಲಾಭಾರ ಸ್ತಂಭಗಳು ಸಾಕ್ಷಿಯಾಗಿವೆ ಎನ್ನುತ್ತಾರೆ ಸಮಾಜ ಸೇವಕ ಎ.ಆರ್‌.ಶಮಂತ್‌.

ಪಂಚಲೋಹ ಬಳಕೆ: ಚಿತ್ರದುರ್ಗದ ಪಾಳೆಗಾರ ಚಿಕ್ಕಣ್ಣನಾಯಕ ಮಾಡಿಸಿದ್ದ ಎನ್ನಲಾದ ಪಂಚಲೋಹದ ಎರಕ ಹೋರುವ ಬಂಗಾರದ ಮುಲಾಮು ಹಾಕಿರುವ ಪ್ರತಿಮೆ ಇಲ್ಲಿವೆ. ಚನ್ನಕೇಶವಸ್ವಾಮಿ ಪ್ರತಿಮೆ ಶಂಖ, ಚಕ್ರ, ಗದಾ, ಪದ್ಮದಿಂದ ಅಲಂಕೃತವಾಗಿದೆ. ಉತ್ಸವಮೂರ್ತಿ, ಶ್ರೀದೇವಿ ಮತ್ತು ಭೂದೇವಿ, ಕೋದಂಡರಾಮ ವಿಗ್ರಹಗಳನ್ನು ಪಂಚಲೋಹದಿಂದ ತಯಾರು ಮಾಡಲಾಗಿದೆ. ಸುಮಾರು 800 ವರ್ಷಗಳ ಐತಿಹಾಸಿಕ ದೇಗುಲ ಇದಾಗಿದೆ.

ಮಠಾಧೀಶರು ಭಾಗಿ

ಬೆಲಗೂರು ಮಾರುತಿ ಪೀಠದ ಬಿಂದು ಮಾದವಶರ್ಮಾ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ವೈಕುಂಠ ಏಕಾದಶಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

* * 

ಬಾಗೂರಿನಲ್ಲಿರುವ ಐತಿಹಾಸಿಕ ಶಿಲಾ ಶಾಸನ, ವಾಸ್ತುಶಿಲ್ಪ ಅವಸಾನ ಹೊಂದುತ್ತಿದ್ದು ಅದನ್ನು ಸಂರಕ್ಷಿಸಲು ಪ್ರಾಚ್ಯವಸ್ತು ಇಲಾಖೆ ಕ್ರಮ ಕೈಗೊಳ್ಳಬೇಕು.

ಎ.ಆರ್‌.ಶಮಂತ್‌, ಹೊಸದುರ್ಗ ನಿವಾಸಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry