7

ಸೆರೆ ಸಿಕ್ಕ ಸಲಗ: ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಇಲಾಖೆ

Published:
Updated:
ಸೆರೆ ಸಿಕ್ಕ ಸಲಗ: ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಇಲಾಖೆ

ಚನ್ನಗಿರಿ: ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೂವರನ್ನು ಕೊಂದು ಆತಂಕ ಉಂಟುಮಾಡಿದ್ದ ಕಾಡಾನೆಯನ್ನು ಚನ್ನಗಿರಿ ತಾಲ್ಲೂಕಿನ ಮಾನಮಟ್ಟಿಯಲ್ಲಿ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಗುರುವಾರ ಕೊನೆಗೂ ಯಶಸ್ವಿಯಾಗಿದೆ.

ಆನೆ ಸೆರೆಹಿಡಿಯುವುದಕ್ಕಾಗಿ ಆರು ದಿನಗಳಿಂದ ಅರಣ್ಯ ಇಲಾಖೆಯ 100ಕ್ಕೂ ಹೆಚ್ಚು ಸಿಬ್ಬಂದಿ ಮಾನಮಟ್ಟಿಯಲ್ಲಿ ಬೀಡು ಬಿಟ್ಟಿದ್ದರು. ಮಂಗಳವಾರ ಕಾಡಾನೆ ಕಾಣಿಸಿಕೊಂಡಿತ್ತಾದರೂ ಸಾಕಾನೆಗಳ ಜತೆ ಕಾದಾಟ ನಡೆಸಿ ತಪ್ಪಿಸಿಕೊಂಡಿತ್ತು. ಆದ್ದರಿಂದ ಕಾರ್ಯಾಚರಣೆಗೆ ಬುಧವಾರ ಬಿಡುವು ನೀಡಲಾಗಿತ್ತು.

ಗುರುವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಒಂದು ಕಾಡಾನೆ ಮಾನಮಟ್ಟಿ ಅರಣ್ಯ ಪ್ರದೇಶದಲ್ಲಿ ಮೇಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಅರಿವಳಿಕೆ ತಜ್ಞರು ಹಾಗೂ ಶಾರ್ಪ್‌ ಶೂಟರ್ಸ್ ಏಳು ಪಳಗಿದ ಆನೆಗಳೊಂದಿಗೆ ಅರಣ್ಯಕ್ಕೆ ನುಗ್ಗಿದರು.

ತಂಡವು 10.15ರ ಹೊತ್ತಿಗೆ ಕಾಡಾನೆ ಮೇಯುತ್ತಿರುವ ಸ್ಥಳಕ್ಕೆ ತಲುಪಿತು. 10.30ಕ್ಕೆ ಸುಮಾರು 100 ಮೀಟರ್ ದೂರದಲ್ಲಿ ನಿಂತ ಶಾರ್ಪ್‌ ಶೂಟರ್ಸ್ ಆನೆಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಿದರು. 10.45ಕ್ಕೆ ಕಾಡಾನೆ ಪ್ರಜ್ಞೆ ಕಳೆದುಕೊಂಡಿತು. ಸಿಬ್ಬಂದಿ, ಹಗ್ಗಗಳಿಂದ ಕಾಡಾನೆಯನ್ನು ಬಿಗಿದು ಬಂಧಿಸಿದರು.

11 ಗಂಟೆ ವೇಳೆಗೆ ಆನೆಗೆ ಪ್ರಜ್ಞೆ ಮರಳಿತು. ಕೂಡಲೇ ಏಳು ಪಳಗಿದ ಆನೆಗಳ ಸಹಾಯದೊಂದಿಗೆ ಸಲಗವನ್ನು ಲಾರಿ ನಿಂತ ಸ್ಥಳಕ್ಕೆ ಎಳೆದುಕೊಂಡು ಬರಲಾಯಿತು. ಲಾರಿಯಲ್ಲಿದ್ದ ಪಂಜರಕ್ಕೆ ಆನೆಯನ್ನು ದಬ್ಬಲಾಯಿತು.

ಸಕ್ರೆಬೈಲು ಬಿಡಾರಕ್ಕೆ ರವಾನೆ: ಗುರುವಾರ ಸೆರೆ ಹಿಡಿದ ಕಾಡಾನೆಯನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಬಿಡಾರಕ್ಕೆ ಕಳುಹಿಸಲಾಗಿದೆ. ಈ ಕಾಡಾನೆಯೊಂದಿಗೆ ಕಾದಾಟ ನಡೆಸಿದ ದಿಟ್ಟ ಆನೆ ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ವಿಕ್ರಮ್‌ ತೆರಳಿವೆ. ಜತೆಗೆ ಕೆಲ ಸಿಬ್ಬಂದಿಯೂ ತೆರಳಿದ್ದಾರೆ. ಈ ಪಳಗಿದ ಆನೆಗಳು ಕಾಡಾನೆಯನ್ನು ಸಕ್ರೆಬೈಲಿನಲ್ಲಿ ಇಳಿಸಿ ಮತ್ತೆ ಕಾರ್ಯಾಚರಣೆ ತಂಡವನ್ನು ಸೇರಿಕೊಳ್ಳಲಿವೆ.

ದಾಂದಲೆ ನಡೆಸಿದ 20 ವರ್ಷ ವಯಸ್ಸಿನ ಇನ್ನೊಂದು ಕಾಡಾನೆಯನ್ನು ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿದೆ. ಆದ್ದರಿಂದ ಆ ಆನೆಯನ್ನು ಕೂಡಾ ಒಂದು ವಾರದಲ್ಲಿ ಸೆರೆ ಹಿಡಿಯಲಾಗುವುದು ಎಂದು ಡಿಸಿಎಫ್ ಬಾಲಚಂದ್ರ ತಿಳಿಸಿದ್ದಾರೆ.

‘ಏಳು ಪಳಗಿದ ಆನೆಗಳ ಪೈಕಿ ಅಭಿಮನ್ಯು ಆನೆಯ ಕಾರ್ಯ ಶ್ಲಾಘನೀಯ. ಈ ಆನೆ ಯಾವ ಭಯ ಇಲ್ಲದೇ ಮುನ್ನುಗ್ಗಿ ಕಾಡಾನೆಯ ಜತೆ ಕಾದಾಟ ನಡೆಸಿದ್ದರಿಂದ ಮಂಗಳವಾರ ಹಲವು ಸಿಬ್ಬಂದಿಯ ಪ್ರಾಣ ಉಳಿದುಕೊಂಡಿದೆ. ಒಂದೆರಡು ದಿನಗಳ ನಂತರ ಮತ್ತೆ ಕಾರ್ಯಾಚರಣೆ ಆರಂಭಿಸುತ್ತೇವೆ. ಸ್ಥಳೀಯರು ನಮಗೆ ಸಹಕಾರ ನೀಡಬೇಕು’ ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ದಿನೇಶ್ ಮನವಿ ಮಾಡಿದರು.

ಆನೆ ನೋಡಲು ಜನಸಾಗರ

ಗುರುವಾರ ಕಾಡಾನೆ ಸೆರೆ ಹಿಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಗ್ಗಿ, ಹನುಮಲಾಪುರ, ಶಂಕರಿಪುರ, ತಾವರೆಕೆರೆ, ನೆಲ್ಲಿಹಂಕಲು, ಮುಗಳಿಹಳ್ಳಿ, ದುರ್ವಿಗೆರೆ, ಪಾಂಡೋಮಟ್ಟಿ, ಗೊಪ್ಪೇನಹಳ್ಳಿ, ಚನ್ನಗಿರಿ, ಹೊನ್ನೇಬಾಗಿ, ರಾಜಗೊಂಡನಹಳ್ಳಿ, ಮಾವಿನಹೊಳೆ, ಗಂಡಗನಹಂಕಲು, ತಿಪ್ಪಗೊಂಡನಹಳ್ಳಿ ಗ್ರಾಮಗಳ ಜನರು ಈ ಸ್ಥಳಕ್ಕೆ ಬಂದಿದ್ದರು. ಸೆರೆಹಿಡಿದಿದ್ದ ಕಾಡಾನೆ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡರು. ಈ ಸ್ಥಳದಲ್ಲಿ ಜನಸಾಗರವೇ ಸೇರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry