ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯ ನಿರ್ಲಕ್ಷಿಸಿದ ನವ್ಯ, ಬಂಡಾಯದ್ದು ಕೆಟ್ಟ ಸಂಪ್ರದಾಯ

Last Updated 22 ಡಿಸೆಂಬರ್ 2017, 9:01 IST
ಅಕ್ಷರ ಗಾತ್ರ

ಧಾರವಾಡ: ‘ನವೋದಯ ಕಾಲದಲ್ಲಿ ಕುವೆಂಪು ಸೇರಿದಂತೆ ಅನೆಕ ಸಾಹಿತಿಗಳಿಂದ ನಡೆದ ಮಕ್ಕಳ ಸಾಹಿತ್ಯದ ಕೃಷಿಯು ನವ್ಯದಲ್ಲಿ ಕ್ಷೀಣಿಸಿ, ಬಂಡಾಯ ಕಾಲದಲ್ಲೂ ಮುಂದುವರಿದದ್ದು ಕೆಟ್ಟ ಸಂಪ್ರದಾಯ’ ಎಂದು ಹಿರಿಯ ಕವಿ ಡಾ. ಚೆನ್ನವೀರ ಕಣವಿ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ಬುಧವಾರ ಆಯೋಜಿಸಿದ್ದ 2016–17ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಮರೆಯಾಗುತ್ತಿದ್ದ ಮಕ್ಕಳ ಸಾಹಿತ್ಯವನ್ನು ಜತನದಿಂದ ಕಾಪಾಡಿ ಅದನ್ನು ಮುಂದುವರಿಸಿಕೊಂಡು ಬಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಶ್ರೇಯಸ್ಸು ಸಲ್ಲುತ್ತದೆ. ಯಾವುದೇ ದೇಶದ ಸಾಹಿತ್ಯ ಅಲ್ಲಿನ ಮಕ್ಕಳ ಸಾಹಿತ್ಯದ ಮೂಲಕವೇ ಪೂರ್ಣಗೊಳ್ಳುತ್ತದೆ. ಮಕ್ಕಳಿಗೆ ನೀತಿ ಬೋಧನೆಗಿಂತ ಹೆಚ್ಚಾಗಿ ಕಾಲ್ಪನಿಕ ಪ್ರಪಂಚ ಕ್ರಿಯಾಶೀಲಗೊಳಿಸಿ ಸಾಹಸ, ಪ್ರಚೋದನಾತ್ಮಕ ಚಿಂತನೆ ಬೆಳೆಯುವಂತೆ ಮಾಡಬೇಕಾಗಿದೆ’ ಎಂದರು.

‘ಭಾಷೆ, ಸಂಸ್ಕೃತಿ ಮತ್ತು ಸಮಾಜ ಪ್ರತ್ಯೇಕ ಘಟಕಗಳಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ’ ಎಂದು ಹೇಳಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ‘ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರವನ್ನು ನಾವೆಲ್ಲರೂ ಖಂಡಿಸಬೇಕು.  ಇಂಥ ಘಟನೆ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸದಂತ ಸ್ಥಿತಿ ಪೋಷಕರಲ್ಲಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

ಅಕಾಡೆಮಿಯ ಅಧ್ಯಕ್ಷ ವೇದವ್ಯಾಸ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಸಚಿವೆ ಉಮಾಶ್ರೀ, ಸಚಿವ ವಿನಯ ಕುಲಕರ್ಣಿ, ನೀಲಕಂಠಪ್ಪ ಅಸೂಟಿ, ವೀರಣ್ಣ ಮತ್ತಿಕಟ್ಟಿ, ಮಲ್ಲಿಕಾರ್ಜುನ ಮಾಳಿಗೇರ ಇದ್ದರು.

ನನ್ನನ್ನು ಹಣ ಕೇಳುವ ಅಗತ್ಯವೇ ಇಲ್ಲ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೆ, ಮುಂದೆ ವೇದವ್ಯಾಸ ಕೌಲಗಿ ಹಾಗೂ ನೀಲಕಂಠಪ್ಪ ಅಸೂಟಿ ಇರುತ್ತಾರೆ. ಹೀಗಿರುವಾಗ ನನ್ನ ಬಳಿ ಹಣ ಕೇಳುವುದರಲ್ಲಿ ಅರ್ಥವೇ ಇಲ್ಲ’ ಎಂಬ ವಿನಯ ಕುಲಕರ್ಣಿ ಮಾತು ಸಭೆಯಲ್ಲಿ ನಗು ಉಕ್ಕಿಸಿತು.

ಇದಕ್ಕೂ ಮೊದಲು ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಅವರು, ಅಕಾಡೆಮಿಯ ಮುಂದಿನ ಯೋಜನೆಗಳಿಗೆ ₹2 ಕೋಟಿ ನೀಡುವಂತೆ ಸಚಿವ ವಿನಯ ಕುಲಕರ್ಣಿ ಅವರನ್ನು ಕೇಳಿದರು. ಆಗ ಅವರು, ತಮ್ಮ ಜೇಬಿಗೆ ಕೈಹಾಕಿಕೊಂಡು ಹಣವಿಲ್ಲ ಎಂದು ತೋರಿಸಿದರು.

* * 

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮೂಲಕ ನೀಡುವ ಪ್ರಶಸ್ತಿಗಳು ಹಲವು ವರ್ಷಗಳಿಂದ ಬಾಕಿ ಉಳಿದಿದ್ದವು. ಈಗ ಅವೆಲ್ಲವನ್ನೂ ನೀಡುವ ಮೂಲಕ ಆಡಳಿತ ಮತ್ತೆ ಹಳಿಗೆ ಬಂದಂತಾಗಿದೆ.
ಡಾ. ಚೆನ್ನವೀರ ಕಣವಿ, ಹಿರಿಯ ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT