ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಮಘಮಿಸುವ ಸಾಂಬಾರ್-ರಸಂ ಪುಡಿಗಳು

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸಾರಿನ ಪುಡಿ

ಬೇಕಾಗುವ ಸಾಮಗ್ರಿಗಳು: 1 ಚಮಚ ಮೆಂತೆ, 2 ಚಮಚ ಜೀರಿಗೆ, 4 ಚಮಚ ಧನಿಯಾ, 1 ಚಮಚ ಸಾಸಿವೆ, 2 ಚಮಚ ಉದ್ದಿನಬೇಳೆ, 2 ಚಮಚ ಕಡಲೇಬೇಳೆ, ಕಾಲುಚಮಚ ಪುಡಿಹಿಂಗು, 1 ಕಪ್‌ನಷ್ಟು ಕರಿಬೇವಿನ ಸೊಪ್ಪು, 20ರಿಂದ 25 ಬ್ಯಾಡಗಿ ಮೆಣಸಿನಕಾಯಿ ಹಾಗೂ ಹುರಿಯಲು 2 ಚಮಚ ಎಣ್ಣೆ.

ಮಾಡುವ ವಿಧಾನ: ಒಂದು ಬಾಣಲಿಗೆ ಮೆಂತೆ ಹಾಕಿ ಬಿಸಿಮಾಡಿಕೊಳ್ಳಿ. ನಂತರ ಸ್ವಲ್ಪ ಎಣ್ಣೆ ಹಾಕಿ, ಹಿಂಗು ಹಾಕಿ ಹುರಿದುಕೊಳ್ಳಿ. ಅದನ್ನು ತೆಗೆದಿಟ್ಟುಕೊಂಡು ಅದೇ ಬಾಣಲಿಗೆ ಜೀರಿಗೆ ಹಾಕಿ ಹುರಿಯಿರಿ. ನಂತರ ಧನಿಯಾ ಹಾಗೂ ಸಾಸಿವೆಯನ್ನು ಹುರಿದುಕೊಳ್ಳಬೇಕು. ಅದೇ ರೀತಿ ಉದ್ದಿನ ಬೇಳೆ ಹಾಗೂ ಕಡಲೇಬೇಳೆಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಕರಿಬೇವಿನ ಸೊಪ್ಪನ್ನು ಕುರುಕುರು ಆಗುವವರೆಗೆ ಹುರಿಯಬೇಕು. ನಂತರ ಒಣಮೆಣಸಿನ ಕಾಯಿಯನ್ನು ಹುರಿದುಕೊಳ್ಳಬೇಕು. ಹುರಿದ ಸಾಮಗ್ರಿಗಳೆಲ್ಲವನ್ನೂ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳಾದರೂ ಅದೇ ತಾಜಾತನ ಉಳಿದುಕೊಳ್ಳುತ್ತದೆ.

ಸಾಂಬಾರ್ ಪುಡಿ

ಬೇಕಾಗುವ ಸಾಮಗ್ರಿಗಳು: ಅರ್ಧ ಚಮಚ ಮೆಂತೆ, 1 ಚಮಚ ಜೀರಿಗೆ, 2 ಚಮಚ ಧನಿಯಾ, 1 ಇಂಚು ಉದ್ದದ ಚೆಕ್ಕೆ, ಸ್ವಲ್ಪ ಹಿಂಗು, 3 ಚಮಚ ಉದ್ದಿನಬೇಳೆ, 3 ಚಮಚ ಕಡಲೇಬೇಳೆ, ಒಂದು ಹಿಡಿ ಕರಿಬೇವಿನ ಸೊಪ್ಪು, 4 ಒಣಮೆಣಸಿನಕಾಯಿ, 20ರಿಂದ 25 ಬ್ಯಾಡಗಿ ಮೆಣಸಿನಕಾಯಿ ಹಾಗೂ 2 ಚಮಚ ಎಣ್ಣೆ.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಬೇರೆಬೇರೆಯಾಗಿ ಹುರಿದುಕೊಳ್ಳಬೇಕು. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಂಡರೆ ಯಾವುದೇ ಸಾಂಬಾರ್ ತಯಾರಿಸುವಾಗಲೂ ಈ ಪುಡಿಯನ್ನು ಉಪಯೋಗಿಸಬಹುದು. ಘಮಘಮಿಸುವ ರುಚಿಕರ ಸಾಂಬಾರ್ ತಯಾರು.

ಪಲ್ಯದ ಪುಡಿ

ಬೇಕಾಗುವ ಸಾಮಗ್ರಿಗಳು: ಅರ್ಧ ಚಮಚ ಮೆಂತೆ, 1 ಚಮಚ ಜೀರಿಗೆ, 2 ಚಮಚ ಧನಿಯಾ, 2 ಮರಾಠಿ ಮೊಗ್ಗು, 2 ಚಮಚ ಉದ್ದಿನಬೇಳೆ, 2 ಚಮಚ ಕಡಲೇಬೇಳೆ, 20ರಿಂದ 25 ಒಣಮೆಣಸಿನಕಾಯಿ, 1 ಹಿಡಿಯಷ್ಟು ಕರಿಬೇವು, 1 ಕಪ್‌ನಷ್ಟು ಒಣ ಕೊಬ್ಬರಿ, 2 ಚಮಚ ಗಸಗಸೆ, ಸ್ವಲ್ಪ ಹಿಂಗು ಹಾಗೂ ಹುರಿಯಲು 2 ಚಮಚ ಎಣ್ಣೆ.

ಮಾಡುವ ವಿಧಾನ: ಮೇಲೆ ಹೇಳಿದ ಸಾಮಗ್ರಿಗಳನ್ನು ಸ್ವಲ್ಪ ಎಣ್ಣೆ ಹಾಕಿಕೊಂಡು ಬೇರೆಬೇರೆಯಾಗಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಂಡರೆ, ತಿಂಗಳಾದರೂ ಪರಿಮಳ ಹಾಗೂ ರುಚಿ ಹಾಗೇ ಇರುತ್ತದೆ. ಯಾವುದೇ ತರಕಾರಿ ಬಳಸಿ ಪಲ್ಯ ಮಾಡಿದರೂ ಈ ಪುಡಿಯನ್ನು ಉಪಯೋಗಿಸಬಹುದು. ಕೆಲವು ಪಲ್ಯಗಳಿಗೆ ಇದರ ಜೊತೆಗೆ ಹುರಿದ ನೆಲಗಡಲೆ ಪುಡಿಯನ್ನು ಸೇರಿಸಿಕೊಳ್ಳಬಹುದು. ಕೆಲವು ಪಲ್ಯಗಳಿಗೆ ಎಳ್ಳನ್ನು ಹುರಿದು ಪುಡಿ ಮಾಡಿ ಸೇರಿಸಿ, ಈ ಪುಡಿಯನ್ನು ಹಾಕಿದರೆ ವಿಭಿನ್ನ ರುಚಿಯ ಪಲ್ಯ ತಯಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT