ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವಿಬ್ಬರು, ನಮಗೆರಡು; ವೋಟೊ? ನೋಟಾನೊ!

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗ್ಳೂರಿನಲ್ಲಿ ರಸ್ತೆಯಾವ್ದೊ, ಗುಂಡಿ ಯಾವ್ದೊ ಎನ್ನುವ ಗೊಂದಲ. ವೈಟ್‌ ಟಾಪಿಂಗ್, ಒನ್‌ವೇಗಳ ಗೋಜಲಿನಲ್ಲಿ ಯಾವ್‌ ಕಡೆ ಹೋಗಬೇಕಂತ್‌ ಗೊಂದಲ್‌ದ್ಹಾಗ್‌ ಸಿಕ್‌ ಹಾಕಿಕೊಂಡವರಂಗ್‌ ಕಾಣುತ್ತಿದ್ದ ಪ್ರಭ್ಯಾ ಎಂಜಿ ರೋಡ್ನಲ್ಲಿ ನನ್ನ ನೋಡಿದವ್ನ, ‘ಏಯ್‌ ದಾರಿ ಯಾವುದಯ್ಯ ಮಾನ್ಯತಾ ಟೆಕ್ ಪಾರ್ಕ್‌ಗೆ ಲಗುನ ಹೇಳ್‌’ ಎಂದ.

ಓಹೋ ಇದು ಸಮೂಹ ಸನ್ನಿ ಕೇಸ್‌ ಅನಕೊಂಡು, ‘ಏಯ್‌ ಮಾನ್ಯತಾ ಮಹಿಮೆನಾ ಮರ್ತ್‌ಬಿಡು’ ಎಂದೆ.

ಟ್ರಾಫಿಕ್‌ ಸೌಂಡ್‌ನ್ಯಾಗ್‌ ಅದ್ನ ಕಿವಿ ಮ್ಯಾಗ್‌ ಹಾಕ್ಕೊಳ್ದ, ‘ಏಯ್‌ ನಂಗ್‌ ಎರ್ಡ್‌ ಟಿಕೆಟ್‌ ಬೇಕು. ಎಲ್ಲಿ ಸಿಗ್ತಾವ್‌ ಹೇಳಲೇ’ ಎಂದು ದನಿ ಎತ್ತರಿಸಿದ.

‘ಎರ್ಡ್‌ ಯಾಕೊ ಎಂದೆ. ಒಂದ್‌ ಬ್ಲ್ಯಾಕ್‌ನ್ಯಾಗ್‌ ಮಾರಾಕ್‌’ ಎಂದು ಕಣ್ಣು ಮಿಟುಕಿಸಿದ.

‘ಮೊನ್ನೇನ ಆ ಕಾರ್ಯಕ್ರಮಾನs ರದ್ದಾಯ್ತಲ್ಲ. ಸನ್ನೀನ ಟ್ವೀಟ್‌ ಮಾಡಿ ಬೆಂಗ್ಳೂರಿಗೆ ಬಿಲ್‌ಕುಲ್ ಬರುದಿಲ್ಲಂತ್‌ ಹೇಳಿಬಿಟ್ಟಾಳಲ್ಲ’ ಎನ್ನುತ್ತಿದ್ದಂತೆ, ಪ್ರಭ್ಯಾನ ಉತ್ಸಾಹ ಜರ್‍ರನೆ ಇಳದ್‌ ಹೋಯ್ತು. ಜೀವ್‌ ಬಿಡಾವ್ರು ಕೊನೆಗುಟುಕ್‌ನ್ಯಾಗ್‌ ಅನ್ನು ಹಂಗ ‘ಹ್ಞಾ’ ಎಂದ ಗಾಬರಿಯಿಂದ.

ಅವನ ಅವತಾರ ನೋಡಿ ಗಾಬ್ರಿ ಆಗಿ ಬಾಟ್ಲ್ಯಾಗಿನ ನೀರ್‌ ಮುಖಕ್ಕೆ ಚಿಮುಕಿಸಿ ಎಚ್ಚರಿಸಿದೆ.

‘ಖರೇ ಏನೋ’ ಎಂದು ಹೌಹಾರಿದವರಂಗ್‌ ಕೇಳಿದ.

‘ಹ್ಞೂನಪಾ. ‘ಸಮೂಹ ಸನ್ನಿ’ ಆಣೆಪಾ. ಬೇಕಾದ್ರ ಕರುನಾಡಿನ ಕಟ್ಟಾಳುಗಳನ್ನೇ ಕೇಳು. ಅವರೂ ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲಂತ ಕಂಗಾಲಾಗಿ ಕುಂತಾರ್‌’ ಅಂದೆ.

‘ಹೋಗ್ಲಿ ಬಿಡು. ಯಾವ್ದರ ಪಾರ್ಟಿಯವರು ಎರಡು ಟಿಕೆಟ್‌ ಕೊಡ್ತಾರೇನ್‌ ನೋಡ್ತೀನಿ. ಉತ್ತರದ ರೋಡ್ ಬಂದ್‌ ಆದ್ರ, ದಕ್ಷಿಣದ ಪದ್ಮನಾಭನಗರ ದಾರಿನಾದ್ರು ತೋರ್ಸೊ’ ಎಂದು ಅಲವತ್ತುಕೊಂಡ.

‘ಲೇ, ನಶೆದಾಗಿನ ಮಾತ್‌ ಕಿಸೆದಾಗ್‌ ಅನ್ನುಹಂಗ್‌, ಯಾಕಪ, ಒಮ್ಮೇಲೆ ಈ ಕಡೆ ಮುಖಾ ಮಾಡ್ದಿ’ ಎಂದೆ. ‘ಸೀದಾ ದೊಡ್ಡ ಗೌಡ್ರ ಹತ್ರ ಹೋಗಿ ಎರಡು ಟಿಕೆಟ್‌ ಕೇಳ್ತೀನಿ’ ಎಂದ ತಣ್ಣಗೆ.

‘ಹೋಗಪಾ ಹೋಗ್‌. ಕರ್ದು ಟಿಕೆಟ್‌ ಕೊಡಾಕ್‌ ಅವ್ರಿಗೇನ್‌ ದರ್ದ್‌ ಐತಿ. ನೀ ಏನ್‌ ಕತ್ತೀನ, ಕುದ್ರೀನ. ಸೂಟ್ಕೇಸ್‌ ತಗೊಂಡು ಹೋದ್ರ ಟಿಕೆಟ್‌ ಕೊಡ್ತಾರಂತ ಏನ್‌ ಗ್ಯಾರಂಟಿ ಐತಿ. ಮನಿ ಮಂದಿಗೆ ಹಂಚಾಕs ಅವ್ರಿಗೇ ಟಿಕೆಟ್‌ ಕಡ್ಮಿ ಬಿದ್ದಾವ್‌. ಅಂಥಾದ್ರಾಗ ನೀ ಹ್ವಾದ್ರ ಹುಚ್‌ ನಾಯಿ ಹಂಗ್‌ ಹಚಾ ಹಚಾ ಎಂದು ಓಡುಸ್ತಾರ್‌ ಹೋಗು’ ಎಂದೆ.

‘ಕತ್ತಿ ರೂಪ್ದಾಗ್‌ ಪರಂ ಹತ್ರ ಹೋದ್ರs’ ಎಂದು ರಾಗಾ ಎಳೆದ. ‘ಕರ್ಕೊಬಹುದು. ಎಲ್ಲಾ ನಿನ್ನ ನಸೀಬ್‌ ಇದ್ಹಂಗ್‌’ ಎಂದೆ.

‘ನಾವಿಬ್ಬರು, ನಮಗೆರಡು ಟಿಕೆಟ್ ಭಾಗ್ಯಕ್ಕೆ ಅವರೊಳ್ಗೂ ಜೋರ್‌ ಜಟಾಪಟಿ ನಡ್ದದ. ಅಂಥಾದ್ರಾಗ ನಿನ್ನಂತಹ ತಿರುಬೋಕಿಗೆ ಟಿಕೆಟ್‌ ಕೊಡ್ತಾರೇನೊ’ ಎಂದು ಹಂಗಿಸಿದೆ.

‘ನಾವಿಬ್ಬರು ನಮಗಿಬ್ಬರು ಅನ್ನೊ ಗ್ವಾಡಿ ಮ್ಯಾಲಿನ ಬರಹ ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದೆಯಲ್ಲೊ’ ಎಂದ ಅಮಾಯಕನಾಗಿ.

‘ಹೌದಪ. ಇದು ಒಂದ್‌ ನಮೂನಿ ಗ್ವಾಡಿ ಮ್ಯಾಲಿನ ಬರಹನ. ಕುಟುಂಬ ಕಲ್ಯಾಣ ಉದ್ದೇಶ ಇದ್ಕೂ ಐತಿ. ಕುಟುಂಬ ನಿಯಂತ್ರಣ ಬದ್ಲಿಗೆ ಕುಟುಂಬದ ರಾಜಕಾರ್ಣ ವಿಸ್ತರಿಸೋದು ಇದ್ರ ಉದ್ದೇಶ’.

‘ಒಂದ್‌ ಕುಟುಂಬಕ್ಕೆ ಒಂದs ಟಿಕೆಟ್ ಅಂತ ಪರಂ ಪರೋಕ್ಷವಾಗಿ ಬತ್ತಿ ಇಡಾಕ ಹೋದ್ರೂ, ಸಿದ್ದಣ್ಣ ಶಲ್ಯ ಝಾಡಿಸಿ, ಅದೆಂಗ್ಹ್‌ ಆಗ್ತೈತಿ ಅಂದಾರ. ವರುಣಾ, ಚಾಮುಂಡೇಶ್ವರಿ ಕ್ಷೇತ್ರ ಅಪ್ಪ– ಮಗಗ ಮೀಸಲು ಖಾತ್ರಿ ಬರ್ಕೊಳ್ಳಿ ಅಂತ ಖಡಕ್ಕಾಗಿ ಹೇಳ್ಯಾರ’ ಅಂದೆ.

‘ಎಲ್ಲಾ ಪಾರ್ಟಿ ಒಳಗ್‌ ಇದ ಗುದಮುರಗಿ ನಡ್ದದ. ಅಪ್ಪ– ಮಗ, ಕುಮಾರಣ್ಣ – ಅನಿತಕ್ಕ, ರೇವಣ್ಣ– ಪ್ರಜ್ವಲ್‌, ಹಿಂಗ್‌, ಯಡ್ಯೂರಪ್ಪ– ರಾಘವೇಂದ್ರ ಹಿಂಗ್‌ ನಾವಿಬ್ಬರು ನಮಗೆರಡು ಟಿಕೆಟ್‌ ಬೇಕಂತ್‌ ವರಾತ್‌ ಹಚ್ಯಾರ್‌. ಇನ್‌ ನಿನಗೆಲ್ಲಿ ಎರಡು ಸಿಗ್ತಾವ್‌. ಸಿಕ್ರ ಎರ್ಡ್‌ ನಾಮಾ ಸಿಗಬಹುದು ನೋಡ್‌’ ಎಂದು ಛೇಡಿಸಿದೆ.

‘ನಾ, ದೊಡ್ಡ ಗೌಡ್ರ ಹತ್ರ ಸೀದಾ ಸೂಟ್‌ಕೇಸ್ ತಗೊಂಡ್‌ ಹೋಗ್ತೀನಿ. ಆಗ್ ಪ್ರಜ್ವಲ್‌ನೂ ನನ್ನ ಹಿಂದ್‌ ಬರ್ತಾನ್‌ ನೋಡ್‌ ಬೇಕಂದ್ರ’ ಅಂದ. ಅವ್ನ ಮಾತೂ ಖರೆ ಅನಿಸಿ ಬೆನ್ನು ಚಪ್ಪರಿಸಿದೆ.

‘ಏಯ್ ಹಂಗ್ಯಾಕ್‌ ಎಮ್ಮಿ ಚಪ್ಪರಿಸೋ ಥರ ಹೊಡಿತಿ. ನಾನು ಕತ್ತಿ ಇದ್ಹಂಗ್‌. ಯಾರಿಗೆ ಒದಿತಿನೊ ಅಂತ ಇನ್ನೂ ತೀರ್ಮಾನಿಸಿಲ್ಲ ಹರಾಮ್ ಖೋರ್‌’ ಎಂದು ಅರ್ಥಗರ್ಭಿತವಾಗಿ ಬೈದ. ‘ಒದೀಪಾ, ಒದಿ. ನಮಗೆಲ್ ಮುಂದ್‌ ಮಾರಿ ಹಬ್ಬ ಕಾದೈತಿ ನೋಡ್‌’ ಎಂದೆ ಚಿಂತೆಯಿಂದ.

‘ಹೌದ್ಹೌದು. ಎಲ್ರಿಗೂ ಕಾದೈತಿ ಹಬ್ಬ. ನಾವಿಬ್ಬರು, ನಮಗೆರಡು ಅನ್ನೋ ಸೂತ್ರಾನ ಮತದಾರರೂ ಕುಟುಂಬಕ್ಕೊಂದು ವೋಟ್‌, ಅದರ್‌ ಮ್ಯಾಲ್‌ ಕುಟುಂಬ ಕಲ್ಯಾಣಕ್ಕೊಂದು ನೋಟಾ ಒತ್ತಿದ್ರ ಎರಡೆರಡು ಟಿಕೆಟ್‌ ಕೇಳಿದವ್ರೆಲ್ಲ ಮನ್ಯಾಗs ಕುಂದ್ರಬೇಕಾಗ್ತೈತಿ. ಇದs ಗ್ವಾಡಿ ಮ್ಯಾಲಿನ ಹೊಸ ಬರಹ ನೋಡಪಾ’ ಎಂದು ಕಣಿ ಹೇಳಿ, ನೋ(ಟ)ಟಾದಾಗೆ ನಗೆಯಾ ಮೀಟಿ ಮೋಜಿನಾಗೆ ಎಲ್ಲೆಯದಾಟಿ ಮಾನ್ಯತಾ ದೊಳಗ ಮೋಡಿಯ ಮಾಡಿ(ಡ)ದೋಳ ಪರಸಂಗ ಐತಿ...’ ಎಂದು ಗುನುಗುನಿಸತೊಡಗಿದ.

ಅವನ ಹಾಡನ್ನು ಅರ್ಧಕ್ಕ ಮೊಟಕುಗೊಳಿಸಿ, ‘ಹೋಗ್ಲಿ ಬಿಡಪಾ, ಈ ಹೊಸ ವರ್ಷಾನ್ನ ನಾನು – ನೀನು ಮನ್ಯಾಗ್‌ ಕುಂತs ಆಚರಿಸೋಣ ಏಳ್‌’ ಎಂದೆ ಸಂತೈಸುವ ದನಿಯಲ್ಲಿ.

‘ಮಂಗ್ಯಾನ್‌ ಮಗ್ನ ಮನ್ಯಾಗ್‌ ಕುಂತ್‌ ನೀ ಒಬ್ನ ಆಚರಿಸು. ಮನ್ಯಾಗ್‌ ಕುಂತ್ರನ ಅರವತ್‌ ಸೀಟ್‌ ಬರ್ತಾವಂತ ಕುಮಾರಣ್ಣ ಕಪ್ಪಕಾಣಿಕೆಯ ಲೆಕ್ಕ ಹಾಕುತ್ತ ಕಿಂಗ್‌ಮೇಕರ್‌ ಕನಸು ಕಾಣಾಕತ್ತಾನ್‌. ನೀನೂ ಹಂಗ ಮನ್ಯಾಗ್‌ ಕುತ್ಕೊಂಡು ಮನಸ್ಸಿನ್ಯಾಗ ಮಂಡಿಗೆ ತಿನ್ನುತ್ತ ಕನಸು ಕಾಣ್ಹೋಗು’ ಎಂದು ಶಪಿಸಿ ಮುಂದೆ ನಡೆದ.

‘ರೀ ಏಳ್ರಿ, ಕಸದ್‌ ಗಾಡಿ ಬಂದದ್‌, ಕಸಾ ಹಾಕ್‌ ಬೇಕ್ರಿ’ ಎಂದು ಕೂಗಿದ ಅರ್ಧಾಂಗಿಯ ದನಿಗೆ ಫಕ್ಕನೆ ಎಚ್ಚರ ವಾಯ್ತು. ಕಣ್ಣು ಹೊಸೆಯುತ್ತ ಎದ್ದು, ‘ಥೂ ಈ ಸಮೂಹ ಸನ್ನಿ ಕನ್ಸಿಗೆ ಇಷ್ಟ್‌ ಕಸ ಹಾಕಾ’ ಎಂದು ಗೊಣಗುತ್ತ ಹಾಸಿಗೆ ಝಾಡಿಸಿ ಎದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT