7

‘ದೇಹ ಒಂದು ಪಾತ್ರ ಹಲವು’

Published:
Updated:
‘ದೇಹ ಒಂದು ಪಾತ್ರ ಹಲವು’

ಇತ್ತೀಚೆಗೆ ಮಿಸ್ ವರ್ಲ್ಡ್‌ ಕಿರೀಟವನ್ನು ಮುಡಿಗೇರಿಸಿಕೊಂಡ ಭಾರತದ ಮಾನುಷಿ ಛಿಲ್ಲರ್‌ಗೆ ಕೇಳಿದ ಕೊನೆಯ ಪ್ರಶ್ನೆಯೆಂದರೆ, ‘ಅತಿ ಹೆಚ್ಚು ಸಂಬಳವನ್ನು ಪಡೆಯಲು ಅರ್ಹವಾಗಿರುವ ಕೆಲಸ ಯಾವುದು?’ ಅದಕ್ಕೆ ಅವರು ಕೊಟ್ಟ ಉತ್ತರ ‘ತಾಯ್ತನ’. ‘ತಾಯಿ’ಯ ಹುದ್ದೆ ಅತ್ಯಂತ ಪವಿತ್ರವಾದದ್ದು. ಒಬ್ಬ ತಾಯಿಯಾದವಳು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಬಹುಶಃ ಇದಕ್ಕಿಂತ ಬೇರೆ ಉತ್ತರ ಈ ಪ್ರಶ್ನೆಗೆ ಇಲ್ಲವೆಂದರೆ ತಪ್ಪಿಲ್ಲ.

ವಾಸ್ತವವಾಗಿ ಪ್ರಪಂಚದಾದ್ಯಂತ ಎಲ್ಲೆಡೆಯೂ ತಾಯ್ತನದ ಜೊತೆಗೆ ಅಡುಗೆ ಮಾಡುವುದು, ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳುವುದು, ಮನೆಯ ಉಸ್ತುವಾರಿ ನಡೆಸುವುದು – ಹೀಗೆ ಮನೆಯ ಇತರ ಕೆಲಸಗಳೂ ಸೇರಿಕೊಂಡಿರುತ್ತವೆ. ಬೇರೆ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ‘ಗೃಹಿಣಿ’ಯರ ಸಂಖ್ಯೆ ಹೆಚ್ಚು. ಈ ಮನೆಯ ಕೆಲಸಗಳು ದೈಹಿಕ ಹಾಗೂ ಮಾನಸಿಕ ಶ್ರಮದ ದುಡಿತ. ಈ ದುಡಿಮೆಗೆ ಹಣಕಾಸಿನ ಮಾನ್ಯತೆ ಇಲ್ಲ. ಅದಕ್ಕೆಂದೇ ಈ ಹುದ್ದೆಗೆ ಸಂಬಳವಿಲ್ಲ!

ಕೆಲವರು ಮನೆಕೆಲಸ ಜೊತೆಗೆ ಮನೆ ಹೊರಗೂ ದುಡಿದು ಹಣ ಸಂಪಾದನೆ ಮಾಡುತ್ತಾರೆ. ಮತ್ತೆ ಕೆಲವರು ‘ಗೃಹಿಣಿ‌’ ಎಂಬ ಪಟ್ಟವನ್ನು ಮಾತ್ರ ಹೊತ್ತು ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೆಗಲಿಗೇರಿಸಿಕೊಂಡಿರುತ್ತಾರೆ. ವಿಪರ್ಯಾಸದ ಸಂಗತಿಯೆಂದರೆ, ಗೃಹಿಣಿಯಾಗಿ ಮನೆಯ ಎಲ್ಲಾ ಹೊಣೆಯನ್ನೂ ಹೊತ್ತಿರುವ ಮಹಿಳೆಯನ್ನು ‘ನೀವೇನು ಮಾಡಿಕೊಂಡಿದ್ದೀರಿ?’ ಎಂದು ಕೇಳಿದರೆ, ಬರುವ ಉತ್ತರ ‘ಏನೂ ಇಲ್ಲ, ಮನೆಯಲ್ಲಿದ್ದೇನೆ’! ಮನೆಯಿಂದ ಹೊರಗೆ ಹೋಗಿ ಸಂಪಾದಿಸುವವರದು ಮಾತ್ರ ಕೆಲಸವೇ? ಮನೆಕೆಲಸವನ್ನು ನೋಡಿಕೊಳ್ಳುವವರದ್ದು ಕೆಲಸವಲ್ಲವೇ? ಗೃಹಿಣಿಯ ಕೆಲಸ, ಕೆಲಸವಲ್ಲ ಎನ್ನುವುದನ್ನು ಬಹಳಷ್ಟು ಗಂಡಸರು ತಿಳಿದಿದ್ದಾರೆ. ವಿಷಾದದ ವಿಷಯವೆಂದರೆ, ಗೃಹಿಣಿಯರೂ ಸಹಾ ತಾವೇನೂ ಮಾಡುತ್ತಿಲ್ಲವೆಂದು ಭಾವಿಸಿರುವುದು.

ಮಕ್ಕಳನ್ನು ಪೋಷಿಸಿ, ವಿದ್ಯಾವಂತರನ್ನಾಗಿಸಿ, ಅವರನ್ನು ದೊಡ್ಡ ಮಟ್ಟದಲ್ಲಿ ದುಡಿಯುವಂತೆ ಮಾಡಿ, ಒಳ್ಳೆಯ ನಾಗರಿಕರನ್ನಾಗಿಸುವುದು ಸಾಮಾನ್ಯದ ಸಂಗತಿಯಲ್ಲ. ಇಷ್ಟು ಮಾಡಿಯೂ ನಮ್ಮ ಸಮಾಜದ ದೃಷ್ಟಿಯಲ್ಲಿ ಗೃಹಿಣಿಯಾಗಿರುವುದು ಸಂಬಳವಿಲ್ಲದ ಕೆಲಸ! ಉದ್ಯೋಗಸ್ಥ ಗೃಹಿಣಿಯರು ಮನೆಕೆಲಸದ ಕೊಂಚ ಕೆಲಸವನ್ನಾದರೂ ಮನೆಯ ಇತರ ಸದಸ್ಯರ ಜೊತೆಗೆ ಹಂಚಿಕೊಂಡಿರುತ್ತಾರೆ. ಆದರೆ ಎಲ್ಲಾ ಉದ್ಯೋಗಸ್ಥ ಗೃಹಿಣಿಯರಿಗೂ ಈ ಭಾಗ್ಯ ಲಭಿಸುವುದಿಲ್ಲ! ಮನೆಯನ್ನು ಸಂಭಾಳಿಸುವುದರ ಜೊತೆಗೆ ಹೊರಗೆ ಹೋಗಿ ದುಡಿಯುವ ಬಹಳಷ್ಟು ಮಹಿಳೆಯರು, ಎರಡೂ ಕಡೆಗೆ ಸರಿಯಾದ ನ್ಯಾಯವನ್ನು ಒದಗಿಸಲು ಹೆಣಗಾಡುತ್ತಿರುತ್ತಾರೆ. ಎಲ್ಲಾ ಉದ್ಯೋಗಸ್ಥ ಗೃಹಿಣಿಯರಿಗೂ ಮನೆಯವರ ಒತ್ತಾಸೆ ಇರುವುದಿಲ್ಲ. ಮನೆ ಹಾಗೂ ಉದ್ಯೋಗದ ನಡುವೆ ಸಿಕ್ಕಿ ಒದ್ದಾಡುತ್ತಿರುತ್ತಾರೆ. ಕೆಲವು ಸಂಸಾರಗಳಿಗೆ ಇಬ್ಬರ ಆದಾಯದ ಅವಶ್ಯಕತೆಯಿದ್ದರೆ, ಮತ್ತೆ ಕೆಲವು ಮಹಿಳೆಯರಿಗೆ ಉದ್ಯೋಗವೆನ್ನುವುದು ‘ಪ್ರತಿಷ್ಠೆ’ಯ ಪ್ರಶ್ನೆಯಾಗಿರುತ್ತದೆ.

ಗೃಹಿಣಿಯ ಕೆಲಸ ಮೂಲಭೂತವಾದ ವೃತ್ತಿ. ಬಾಕಿ ಎಲ್ಲಾ ವೃತ್ತಿಗಳು ಒಂದೇ ಉದ್ದೇಶಕ್ಕಾಗಿ ಇರುತ್ತವೆ. ಆ ಉದ್ದೇಶವೇ ಮೂಲಭೂತ ವೃತ್ತಿಯಾದ ಗೃಹಿಣಿಯ ಕೆಲಸಕ್ಕೆ ಬೆಂಬಲವಾಗಿ, ಒತ್ತಾಸೆಯಾಗಿ ನಿಲ್ಲುವುದು. ಉದ್ಯೋಗಸ್ಥ ಗೃಹಿಣಿಯರು ಹಣವನ್ನು ಸಂಪಾದಿಸಿದರೆ, ಮನೆಕೆಲಸವನ್ನು ಮಾತ್ರ ಮಾಡುವ ಗೃಹಿಣಿಯರು ಗಳಿಸಿದ ಹಣವನ್ನು ಉಳಿಸುವ ಕೆಲಸವನ್ನು ಮಾಡುತ್ತಾರೆ. ಬಹಳಷ್ಟು ಜನರ ಜೀವನದಲ್ಲಿ ಹಲವು ಬಾರಿ ಗೃಹಿಣಿಯರು ಉಳಿಸಿದ ಹಣವೇ ಉಪಯೋಗಕ್ಕೆ ಬಂದಿರುವುದು ವಾಸ್ತವದ ಸಂಗತಿ. ಕೆಲಸದ ಒತ್ತಡವಾಗಲೀ, ಸಾಂಸಾರಿಕ ಒತ್ತಡವಾಗಲೀ, ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲವಳು ಮಹಿಳೆ ಮಾತ್ರ.

‘ಗೃಹಿಣಿ’ ಎಂದರೆ, ಹೆಂಡತಿಯಾಗಿ, ಸೊಸೆಯಾಗಿ, ತಾಯಿಯಾಗಿ, ಮನೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುವವಳು. ಇದು ಗೃಹಿಣಿಯ ಜೀವನವನ್ನು ಕುರಿತ ಸಾಮಾನ್ಯ ಅಭಿಪ್ರಾಯ.

ಗೃಹಿಣಿಯಾದವಳು ಮನೆಯ ಇತರ ಸದಸ್ಯರ ಜಾಗವನ್ನು ತುಂಬಬಲ್ಲಳು. ಆದರೆ ಆಕೆಯ ಜಾಗವನ್ನು ಯಾರೂ ತುಂಬಲು ಆಗುವುದಿಲ್ಲ. ಗೃಹಿಣಿಯರ ಕೆಲಸಕ್ಕೆ ಮೆಚ್ಚುಗೆ ಸೂಚಿಸುವವರೇ ಇಲ್ಲ. ಆಕೆ ಮನೆಯನ್ನು ಹಾಗೂ ಮನೆಯ ಜನರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾಳೆಯೇ ಹೊರತು ಕರ್ತವ್ಯ ಎಂದಲ್ಲ. ಮನೆಗೆ ಸಂಪಾದಿಸಿ ತರುವ ಗಂಡಸು ಹೊರಗೆ ಇಂತಿಷ್ಟೇ ತಾಸುಗಳು ಎಂಬಂತೆ ಕೆಲಸ ಮಾಡುತ್ತಾರೆ. ವಾರಾಂತ್ಯದಲ್ಲಿ ಅವರಿಗೆ ಸೂಟಿ! ಆದರೆ ಮನೆಗೆಲಸದಲ್ಲಿ ನಿರತಳಾಗಿರುವ ಮಹಿಳೆಗೆ ವಾರಾಂತ್ಯದ ರಜೆ ಕನಸೇ ಸರಿ.

ರಜಾದಿನಗಳಂದು ಎಲ್ಲರೂ ಮನೆಯಲ್ಲಿರುವುದರಿಂದ, ವಾರದ ಇತರ ದಿನಗಳಿಗಿಂತ ಹೆಚ್ಚಿನ ಕೆಲಸ ವಾರಾಂತ್ಯದಲ್ಲಿರುತ್ತದೆ. ಗಂಡಸರಿಗೆ 58-60 ವರ್ಷಗಳಿಗೆ ಕೆಲಸದಿಂದ ನಿವೃತ್ತಿ. ಆದರೆ ಗೃಹಿಣಿಯಾದವಳಿಗೆ ನಿವೃತ್ತಿ ಎನ್ನುವುದೇ ಇಲ್ಲ. ದೈಹಿಕಶಕ್ತಿ ಕುಂದುವವರೆಗೂ ಕೆಲಸ. ನಮ್ಮ ದೇಶದಲ್ಲಿ ಹಲವು ವರ್ಷಗಳಿಂದೀಚೆಗೆ ಮಹಿಳೆ ಮನೆಯಿಂದ ಹೊರಗೆ ಹೋಗಿ ಸಂಪಾದಿಸುತ್ತಿದ್ದಾಳೆ. ಅದಕ್ಕೂ ಮುನ್ನ ಮಹಿಳೆಯೆಂದರೆ, ಗೃಹಿಣಿ ಅಷ್ಟೇ ಎಂಬ ನಿರ್ವಿಕಾರ ಭಾವ. ಇತ್ತೀಚೆಗಂತೂ ಮಹಿಳೆಯರು ಹೊರಗೆ ಹೋಗಿಯೇ ದುಡಿಯಬೇಕೆನ್ನುವ ಅವಶ್ಯಕತೆಯಿಲ್ಲ. ಬಹಳಷ್ಟು ಮಹಿಳೆಯರು ಮನೆಕೆಲಸದ ಜೊತೆಗೇ ಬಿಡುವಿನ ವೇಳೆಯಲ್ಲಿ ಮನೆಯಿಂದಲೆ  ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ. ಮಹಿಳೆಯಾದವಳು ಹಣವನ್ನು ಸಂಪಾದಿಸಲೀ ಬಿಡಲೀ, ಆಕೆ ಹಲವಾರು ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಚತುರತೆಯನ್ನು ಹೊಂದಿದ್ದಾಳೆ. ಆದ್ದರಿಂದಲೇ ಮಹಿಳೆಗೆ ‘ಮಲ್ಟಿಟಾಸ್ಕರ್’ ಎನ್ನುವುದು. ಈ ರೀತಿಯ ಹಲವು ಬಗೆಯ ಕಾರ್ಯಗಳನ್ನು ಹೊರಲು ಮಹಿಳೆ ಮಾತ್ರ ಸಮರ್ಥಳು.

ಇಂತಹ ‘ಮಲ್ಟಿಟಾಸ್ಕಿಂಗ್’ ಮಹಿಳೆಯು ತನ್ನ ಪರಿಚಯವನ್ನು ಇತರರೊಂದಿಗೆ ಮಾಡಿಕೊಳ್ಳುವಾಗ ಮಾತ್ರ ಎಡವುತ್ತಾಳೆ. ಎಷ್ಟೆಲ್ಲಾ ಕೆಲಸಗಳನ್ನು ಮಾಡಿಯೂ ತಾನು ‘ಗೃಹಿಣಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಇನ್ನು ಉದ್ಯೋಗಸ್ಥ ಗೃಹಿಣಿಯರು ತಮ್ಮನ್ನು ಗುರುತಿಸಿಕೊಳ್ಳುವುದು, ತಮ್ಮ ದುಡಿಮೆಯ ಕೆಲಸದಿಂದ! ಆ ಕೆಲಸ ಎಷ್ಟೇ ಚಿಕ್ಕದಾದರೂ ಅಭಿಮಾನದಿಂದ ಹೇಳಿಕೊಳ್ಳುತ್ತಾರೆಯೇ ಹೊರತು ತಾವೊಬ್ಬ ಗೃಹಿಣಿ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಕಾರಣ ಗೃಹಿಣಿಯ ಕೆಲಸದ ಮಹತ್ವದ ಅರಿವು ಅವರಿಗಿರುವುದಿಲ್ಲ. ಮನೆಯಿಂದ ಹೊರಗೆ ಹೋಗಿ  ಸಂಪಾದಿಸಿದರಷ್ಟೇ ಗೌರವ, ಪ್ರತಿಷ್ಠೆ ಎಂದು ಕೆಲವರು ಭಾವಿಸಿದ್ದಾರೆ.

ಹಣ ಸಂಪಾದನೆಯಿಲ್ಲದೆ, ಬರೀ ಮನೆಕೆಲಸವನ್ನು ನೋಡಿಕೊಳ್ಳುವ ಬಹಳಷ್ಟು ಮಹಿಳೆಯರಿಗೆ ತಾನು ಸಂಪಾದಿಸುತ್ತಿಲ್ಲ ಎನ್ನುವ ಕೀಳರಿಮೆ ಮನದಲ್ಲಿರುತ್ತದೆ. ಗೃಹಿಣಿಯಾದವಳ ಕೆಲಸ ಎಲ್ಲಕ್ಕಿಂತ ಶ್ರೇಷ್ಠ. ಒಬ್ಬ ಮಹಿಳೆ ಗೃಹಿಣಿಯಾಗಿ, ಮಕ್ಕಳ ತಾಯಿಯಾಗಿ ಜೀವನಪೂರ್ತಿ ತನ್ನ ಕನಸುಗಳನ್ನು ಕಡೆಗಣಿಸಿ, ತ್ಯಾಗಮಯಿಯಾಗಿರುತ್ತಾಳೆಂದರೆ, ಆಕೆಗಿಂತ ಧೈರ್ಯಶಾಲಿ ಯಾರೂ ಇಲ್ಲ. ನೆಮ್ಮದಿಯ ಕುಟುಂಬದ ಶಕ್ತಿಯೇ ಗೃಹಿಣಿ. ಇಂತಹ ಮಹಿಳೆಗೆ ನಮ್ಮ ವ್ಯವಸ್ಥೆ ಕೊಡುವ ಬೆಲೆ ಸೊನ್ನೆ! ಮಕ್ಕಳನ್ನು ಪೋಷಿಸಿ, ಕಲಿಸಿ, ಬೆಳೆಸಿ, ವಿದ್ಯಾವಂತರನ್ನಾಗಿ ಮಾಡಿ, ಸ್ವತಂತ್ರ ಪೌರರನ್ನಾಗಿ ಮಾಡುವುದು ಸುಲಭದ ಕೆಲಸವಲ್ಲ. ಮುಖ್ಯವಾಗಿ ಬೆಳೆಯುವ ಸಮಯದಲ್ಲಿ ಮಕ್ಕಳಿಗೆ ಬೇಕಾಗುವುದು ತಾಯಿಯ ಸನಿಹ, ಪ್ರೀತಿ, ವಾತ್ಸಲ್ಯ. ಬಹಳಷ್ಟು ಮಕ್ಕಳು ಇದರಿಂದ ವಂಚಿತರು. ಗೃಹಿಣಿಯಾದವಳಿಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗಿನ ಕೆಲಸವಲ್ಲ. ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಕಣ್ಣೆವೆಗಳು ಮುಚ್ಚುವವರೆಗೂ ಕೆಲಸಗಳು ಇದ್ದೇ ಇರುತ್ತವೆ.

ಬಹಳಷ್ಟು ಜನರ ಮನಸ್ಸಿನಲ್ಲಿ ಗೃಹಿಣಿಯೆಂದರೆ, ಮನೆಯಲ್ಲಿ ಆರಾಮವಾಗಿ ಕುಳಿತು ಕಾಲ ಕಳೆಯುವವಳು ಎನ್ನುವ ತಪ್ಪು ಕಲ್ಪನೆಯಿದೆ. ವಾಸ್ತವವಾಗಿ ಗೃಹಕೃತ್ಯದಷ್ಟು ಹೆಚ್ಚಿನ ಕೆಲಸ ಯಾವುದೂ ಇಲ್ಲ. ಗೃಹಿಣಿಯರೇ, ನಿಮ್ಮ ಅಸ್ತಿತ್ವವನ್ನು ಗೃಹಿಣಿಯೆಂದು ಗುರುತಿಸಿಕೊಳ್ಳಲು ಯಾವ ಸಂಕೋಚವೂ ಬೇಡ. ಗೃಹಿಣಿಯಾದವಳು ಕುಟುಂಬದ ಬೆನ್ನೆಲುಬು ಇದ್ದಂತೆ. ಆಕೆ ಸಂತೋಷವಾಗಿಲ್ಲದಿದ್ದರೆ ಇಡೀ ಮನೆ ಅಸ್ತವ್ಯಸ್ತವಾಗಿರುತ್ತದೆ. ಆಕೆ ನಗು ನಗುತ್ತಾ ಇದ್ದರೆ, ಎಲ್ಲರೂ ಸಂತೋಷದಿಂದಿರಬಹುದು. ಆಕೆ ಮನೆಯ ಸದಸ್ಯರಿಂದ ನಿರೀಕ್ಷಿಸುವುದು ಕೊಂಚ ಗಮನ, ಸ್ವಲ್ಪ ಪ್ರೀತಿ ಹಾಗೂ ತಾನು ಮಾಡುವ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ! ಇವಿಷ್ಟೇ ಆಕೆಯನ್ನು ಸಂತುಷ್ಟಳನ್ನಾಗಿ ಮಾಡಬಲ್ಲವು. ಮಹಿಳೆಯಾದವಳು ಉದ್ಯೋಗಸ್ಥ ಗೃಹಿಣಿಯಾಗಿರಬಹುದು ಅಥವಾ ಮನೆಕೆಲಸವನ್ನು ಮಾಡುವ ಗೃಹಿಣಿಯಾಗಿರಬಹುದು. ಆಕೆಯನ್ನು ಗೌರವಿಸಲು ಹಿಂಜರಿಯಬೇಡಿ. ಮಹಿಳೆಯನ್ನು ಗೌರವಿಸುವ ಪದ್ಧತಿ ಅಂದು, ಇಂದು, ಎಂದೆಂದೂ ಬದಲಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry