ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಗಳದಿಂದ ಏನೂ ಪ್ರಯೋಜನವಿಲ್ಲ’

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಿಂದೂಪುರದಿಂದ ಬೆಂಗಳೂರಿಗೆ ಬರುವ ಪ್ಯಾಸೆಂಜರ್‌ ರೈಲಿಗೆ ಗೌರಿಬಿದನೂರು ನಿಲ್ದಾಣದಲ್ಲಿ ಹಪ್ಪಳ ವ್ಯಾಪಾರಿಗಳು ಹತ್ತುತ್ತಾರೆ. ಜನರ ಕೈ–ಮೈ ತಾಕಿದರೆ ಹಪ್ಪಳ ಮುರಿದೀತು ಎಂಬ ಆತಂಕದಿಂದ ಚೀಲಗಳನ್ನು ಒಂದೆಡೆ ಒಪ್ಪವಾಗಿ ಜೋಡಿಸಿ ಅದರ ಸುತ್ತಲೂ ಕಾವಲು ನಿಂತಿರುತ್ತಾರೆ. ಅಂಥವರ ಪೈಕಿ ನಾನೂ ಒಬ್ಬ.

ದೊಡ್ಡಬಳ್ಳಾಪುರದಲ್ಲಿ ರೈಲು ಹತ್ತಿದ ಜೋಡಿಗೆ ಹಪ್ಪಳ ಚೀಲಗಳ ಸಮೀಪ ತುಸು ಜಾಗ ಕಾಣಿಸಿತು. ಹುಡುಗಿ ಅಲ್ಲಿಯೇ ಚಕ್ಕಮಕ್ಕಳ ಹಾಕಿ ಕುಳಿತಳು. ಹುಡುಗ ಅವಳಿಗೆ ಒರಗಿ ನಿಂತು ತಲೆಗೂದಲಿನೊಂದಿಗೆ ಆಡುತ್ತಿದ್ದ. ನನಗೆ ಅವರನ್ನು ನೋಡಿ ಸಿಟ್ಟುಬಂತು.

‘ಎದ್ದೇಳು ಹುಡುಗಿ, ಇಲ್ಯಾಕೆ ಕೂತ್ಕೊಂಡಿದ್ದೀಯಾ. ಬೇರೆ ಕಡೆ ಜಾಗ ಇಲ್ವಾ’ ಅಂತ ಬೈಯ್ದುಬಿಟ್ಟೆ. ಅವಳ ಜೊತೆಗಿದ್ದ ಹುಡುಗನೂ ಜಗಳಕ್ಕೆ ನಿಂತ. ‘ನಾನೂ ಕೂತ್ಕೋತೀನಿ, ಏನು ಮಾಡ್ತೀಯಾ’ ಅಂತ ಚೀಲಗಳನ್ನು ಸರಿಸಲು ಮುಂದಾದ. ಅವನೋ ಹರೆಯದ ಹುಡುಗ, ನಾನು ಬಿಳಿಕೂದಲಿನ ಮುದುಕ.

‘ಹಾಗೆ ಮಾಡಬೇಡಣ್ಣೋ. ಹಪ್ಪಳ ಮುರಿದು ಹೋದ್ರೆ ವ್ಯಾಪಾರ ಆಗಲ್ಲ’ ಅಂದೆ. ಕಣ್ಣಲ್ಲಿ ನೀರು ತುಂಬಿಕೊಳ್ತಿತ್ತು.ಇಷ್ಟುಹೊತ್ತೂ ನಮ್ಮ ಜಗಳವನ್ನು ಗಮನಿಸುತ್ತಿದ್ದ ದೊಡ್ಡ ಮನುಷ್ಯರೊಬ್ಬರು, ‘ನಿನ್ನ ಹುಡುಗಿಗೇ ಈಕಡೆ ಬರೋಕೆ ಹೇಳಪ್ಪ. ನೀವಿನ್ನೂ ಮದುವೆಯಾಗಿ ಬಾಳಬೇಕಾದವರು. ಇಷ್ಟೊಂದು ಸಿಟ್ಟಿದ್ರೆ ಹೇಗೆ’ ಇತ್ಯಾದಿಯಾಗಿ ಅವನನ್ನು ರೇಗಿಸುತ್ತಲೇ ಬುದ್ಧಿ ಹೇಳಿದರು. ಅವರ ಮಾತು ಕೇಳಿ ಎಲ್ಲರಿಗೂ ನಗುಬಂತು.

ನಾಚಿಕೊಂಡ ಯುವಕ, ‘ಏಯ್, ಈ ಕಡೆ ಬಾರೆ’ ಎಂದು ಹುಡುಗಿಯ ಕೈಹಿಡಿದು ಎಬ್ಬಿಸಿಕೊಂಡ. ‘ನೀವು ಹೇಳೋ ಹಾಗೆ ಅವರೂ ಸಮಾಧಾನವಾಗಿ ಹೇಳಿದ್ರೆ ನಾವ್ಯಾಕೆ ಜಗಳ ಮಾಡ್ತಾ ಇದ್ವಿ ಹೇಳಿ’ ಎಂದು ತನ್ನವಳ ಕೈಹಿಡಿದು ಮತ್ತೊಂದು ಬೋಗಿಗೆ ಹೊರಟುಬಿಟ್ಟ. ಆ ಹುಡುಗನ ಮಾತು ನನಗೂ ಸರಿ ಅನಿಸ್ತು. ನಾವು ಜೋರಾಗಿ ಜಗಳ ಮಾಡಿದ್ರೆ ಆಗದ ಎಷ್ಟೋ ಕೆಲಸಗಳು ಸಮಾಧಾನವಾಗಿ ಮಾತನಾಡಿದಾಗ ಆಗಿಬಿಡುತ್ತವೆ. ಅವತ್ತಿನಿಂದ ನಾನು ರೈಲಿನಲ್ಲಿ ಜಗಳ ಮಾಡೋದು ಬಿಟ್ಟುಬಿಟ್ಟೆ. ಎಷ್ಟೋ ಜನರು ಹೊಸದಾಗಿ ಪರಿಚಯವಾದ್ರು. ಅಂಥವರು ಈಗ ರೈಲಿನಲ್ಲೇ ಹಪ್ಪಳ ತಗೊಳ್ಳೋಕೂ ಶುರು ಮಾಡಿದ್ದಾರೆ.

–ವೆಂಕಟೇಶ್ವರಲು, ವಿದುರಾಶ್ವತ್ಥ, ಗೌರಿಬಿದನೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT