7

‘50 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ’

Published:
Updated:

ಬಂಟ್ವಾಳ: ಬೆಂಜನಪದವಿನಲ್ಲಿ ಇಸ್ಕಾನ್‌  ಅಕ್ಷಯ ಪಾತ್ರೆ ಯೋಜನೆಯ 'ಅಕ್ಷಯ ಪಾತ್ರಾ' ಬೃಹತ್‌ ಪಾಕಶಾಲೆಗೆ ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶುಕ್ರವಾರ ಭೂಮಿ ಪೂಜೆ ನೆರವೆರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 75ರಷ್ಟು ಸಹಾಯಧನ ನೀಡಿವೆ. ದೇಶದೆಲ್ಲೆಡೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತಹ ಪುಣ್ಯದ ಯೋಜನೆಗೆ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಶನ್, ಸಮಾಜಮುಖಿ ಸಂಸ್ಥೆಗಳು, ದಾನಿಗಳು ಕೈಜೋಡಿಸಿದ್ದಾರೆ.

‘ಜಿಲ್ಲೆಯ ಸುಮಾರು 50 ಸಾವಿರ ಬಡ ವಿದ್ಯಾರ್ಥಿಗಳಿಗೆ ಏಕ ಕಾಲದಲ್ಲಿ ಆಹಾರ ತಯಾರಿಸಲು ಅನುಕೂಲವಾಗುವಂತೆ ಇಲ್ಲಿನ ಅಕ್ಷಯ ಪಾತ್ರ ಫೌಂಡೇಶನ್, ಜಿ.ಟಿ.ಫೌಂಡೇಶನ್ ಮತ್ತು ಮಂಗಳೂರಿನ ದಿಯಾ ಸಿಸ್ಟಮ್ಸ್ ಪ್ರೈ.ಲಿಮಿಟೆಡ್ ಮತ್ತಿತರ ದಾನಿಗಳ ನೆರವಿನಿಂದ  ಮಂಗಳೂರಿನ ಬಾಡಿಗೆ ಜಮೀನಿನಲ್ಲಿ  ಪಾಕ ನಡೆಯುತ್ತಿತ್ತು. ಇದೀಗ ಬೆಂಜನ ಪದವಿನಲ್ಲಿ ಸರ್ಕಾರ ನೀಡಿದ ಸ್ವಂತ ಜಮೀನಿನಲ್ಲಿ ಸುವ್ಯವಸ್ಥಿತ ಮತ್ತು ಹೆಚ್ಚಿನ ಗುಣಮಟ್ಟದಲ್ಲಿ ಬಿಸಿಯೂಟ ತಯಾರಿಸಲು ಅನುಕೂಲವಾಗಲಿದೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಅಕ್ಷಯ ಪಾತ್ರ ಫೌಂಡೇಶನ್ ಅಧ್ಯಕ್ಷ ಕಾರುಣ್ಯ ಸಾಗರ್ ದಾಸ್ ಹೇಳಿದರು.

ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಅದಮಾರು ಮಠದ ಕಿರಿಯ ಯತಿಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಮಂಗಳೂರು ಕೆಥೋಲಿಕ್ ಧರ್ಮಪ್ರಾಂತದ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ನೀಡಿ ಮಾತನಾಡಿ, ‘ಮಕ್ಕಳ ಹಸಿದ ಹೊಟ್ಟೆ ತಣಿಸಲು ಗುಣಮಟ್ಟದ ಬಿಸಿಯೂಟ ನೀಡುವುದು ಪುಣ್ಯದ ಕೆಲಸ’ ಎಂದರು. ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಸರ್ಕಾರದ ಯೋಜನೆ ಯಶಸ್ವಿಯಾಗಲು ಸಮಾಜಮುಖಿ ಚಿಂತನೆ ಹೊಂದಿರುವ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ’ ಎಂದರು.

ಸಚಿವ ಯು.ಟಿ.ಖಾದರ್ ಮಾತನಾಡಿ, ‘ಈ ಯೋಜನೆಯಿಂದ ಬಡ ವರ ಮಕ್ಕಳು ಕೂಡಾ ಪೌಷ್ಟಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ’ ಎಂದರು. ಮಂಗಳೂರು ಯೇನೆಪೋಯ ವಿಶ್ವವಿದ್ಯಾಲಯ ಕುಲಾಧಿಪತಿ ಅಬ್ದುಲ್ಲಾ  ಕುಂಞಿ, ಮಂಗಳೂರಿನ ದಿಯಾ ಸಿಸ್ಟಮ್ಸ್ ಪ್ರೈ.ಲಿಮಿಟೆಡ್ ಸಂಸ್ಥೆ ಮುಖ್ಯಸ್ಥ ಡಾ.ವಿ.ರವಿಚಂದ್ರ, ಅಕ್ಷಯ ಪಾತ್ರಾ ಫೌಂಡೇಶನ್ ಉಪಾಧ್ಯಕ್ಷ ಚಂಚಲಪತಿ ದಾಸ್ ಮಾತನಾಡಿದರು.

ಇಸ್ಕಾನ್‌ನ  ವಂದನಾ ತಿಲಕ್ ಶುಭ ಹಾರೈಸಿದರು. ಅಕ್ಷಯ ಪಾತ್ರಾ ಫೌಂಡೇಶನ್ ಹುಬ್ಬಳ್ಳಿ - ಧಾರವಾಡ ಅಧ್ಯಕ್ಷ ರಾಜೀವ ಲೋಚನ ದಾಸ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕ ಎಚ್.ಕುಮಾರ್, ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ  ಬಿ.ನಾಗರಾಜ ರಾವ್, ಶಾಸಕ ಜೆ.ಆರ್.ಲೋಬೊ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು. ಮನೋಹರ ಪ್ರಸಾದ್ ನಿರೂಪಿಸಿದರು.

₹5 ಲಕ್ಷ ಅನುದಾನ

ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಈ ಯೋಜನೆ ವಿಸ್ತರಿಸಬೇಕು. ಇಲ್ಲಿನ ಬೆಂಜನಪದವು ಸಂಪರ್ಕ ರಸ್ತೆ ಅಭಿವೃದ್ಧಿಗೆ ₹ 5 ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry