ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯೇ ಒಂದು ಉತ್ಸವ

Last Updated 23 ಡಿಸೆಂಬರ್ 2017, 5:17 IST
ಅಕ್ಷರ ಗಾತ್ರ

ಮಂಗಳೂರು: ಪಶ್ಚಿಮ ಘಟ್ಟದ ಪಾದ ತೊಳೆಯುವ ಅರಬ್ಬಿ ಸಮುದ್ರ, ಪರಶುರಾಮನ ಕೊಡಲಿಯಿಂದ ಸೃಷ್ಟಿಯಾದ ಕರ್ಮಭೂಮಿ ಕರಾವಳಿಯೇ ಒಂದು ಉತ್ಸವ ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಅಭಿಪ್ರಾಯಪಟ್ಟರು. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ಸಂಜೆ ಕರಾವಳಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯೇ ಒಂದು ಅದ್ಭುತ. ಸಮುದ್ರವು ತನ್ನ ಒಡಲಿಗೆ ಹಾಕಿದ್ದನ್ನು ದಡಕ್ಕೆ ತಂದು ಹಾಕುತ್ತದೆ. ಅದೇ ರೀತಿ ಇಲ್ಲಿನ ಜನರು ಪಡೆದುಕೊಂಡಷ್ಟನ್ನು ಸಮಾಜಕ್ಕೆ ಹಿಂದಿರುಗಿಸುವ ಮನೋಭಾವ ಹೊಂದಿದ್ದಾರೆ. ಸಮುದ್ರಕ್ಕೆ ಎಷ್ಟೇ ನದಿಗಳು ಸೇರಿದರೂ ಅದು ತುಂಬಿ ಹರಿಯುವುದಿಲ್ಲ. ಅದೇ ರೀತಿ ಎಷ್ಟೇ ನೀರು ತೆಗೆದರೂ, ಅದು ಬತ್ತುವುದಿಲ್ಲ. ಕರಾವಳಿಯ ಜನರೂ ಕೊಡುವಷ್ಟು ಶ್ರೀಮಂತರಿದ್ದರೂ, ಬೇಡುವಷ್ಟು ಭಿಕ್ಷಕುರಲ್ಲ ಎಂದು ಹೇಳಿದರು.

‘ಇಲ್ಲಿ ದೇವರು, ದೈವಕ್ಕೆ ಒಂದೇ ರೀತಿಯ ಗೌರವವಿದೆ. ಪ್ರಕೃತಿಯ ಜತೆಗೆ ಬಾಳಬೇಕು ಎಂಬುದನ್ನು ಹಿರಿಯರು ಕಲಿಸಿಕೊಟ್ಟಿದ್ದಾರೆ. ನಾಗಸ್ಥಳ, ಭೂತಾರಾಧನೆ ಇದ್ದಲ್ಲಿ ಕಾಡು ನಾಶವಾಗಿಲ್ಲ. ಪ್ರಕೃತಿಯೊಂದಿಗೆ ದೈವತ್ವವನ್ನು ಆಚರಿಸುವ ಮೂಲಕ ಪರಿಸರ ರಕ್ಷಣೆ ಮಾಡಿದ ಸಂಸ್ಕೃತಿ ನಮ್ಮದು’ ಎಂದು ತಿಳಿಸಿದರು.

ನಾವು ಮಾನವತಾ ವಾದಿಗಳಾಗಬೇಕು. ಪ್ರಕೃತಿಯನ್ನು ವಿರೋಧಿಸುವ ಕೆಲಸವನ್ನು ಅದು ಸಹಿಸುವುದಿಲ್ಲ. ದೇವರು, ಧರ್ಮ, ಸಂತೋಷ, ಅಭಿವೃದ್ಧಿ ನೀಡುವ ಬದುಕು ನಮಗೆ ಬೇಕು. ವಿಭಜಿಸುವ ಬದುಕು ಬೇಡವೇ ಬೇಡ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಅನೇಕ ದೇವಾಲಯಗಳು, ದೈವಸ್ಥಾನಗಳು, ನಾಗಾರಾಧನೆ, ಭೂತಾರಾಧನೆಯಂತ ಸಂಸ್ಕೃತಿ ನಮ್ಮದು. ಅದ್ಭುತವಾದ ಕಂಬಳ ಕ್ರೀಡೆಯೂ ಇಲ್ಲಿಯದು. ಯಕ್ಷಗಾನ, ತಾಳಮದ್ದಲೆಯ ಮೂಲಕ ಸಾಂಸ್ಕೃತಿಕ ಮೆರುಗನ್ನು ಪಡೆದ ಜಿಲ್ಲೆ ನಮ್ಮದು ಎಂದು ಹೇಳಿದರು.

ಜಿಲ್ಲೆಯ ಸಾಂಸ್ಕೃತಿಕ ಸಿರಿವಂತಿಕೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದಲೇ 20 ವರ್ಷಗಳಿಂದ ಕರಾವಳಿ ಉತ್ಸವ ಆಚರಿಸಿಕೊಂಡು ಬರಲಾಗಿದೆ. ಈ ಮೂಲಕ ನಾಡಿನ ವಿವಿಧ ಕಲೆ, ಸಂಸ್ಕೃತಿಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಶಾಸಕ ಜೆ.ಆರ್‌. ಲೋಬೊ ಅಧ್ಯಕ್ಷತೆ ವಹಿಸಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌, ಶಾಸಕ ಬಿ.ಎ. ಮೊಯಿದ್ದೀನ್‌ ಬಾವ, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್‌. ರವಿ, ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಪಾಲಿಕೆ ಆಯುಕ್ತ ಎಂ. ಮುಹಮ್ಮದ್‌ ನಜೀರ್‌, ಮೆರವಣಿಗೆ ಸಮಿತಿ ಅಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪ್ರೊ. ನರೇಂದ್ರ ಎಲ್‌. ನಾಯಕ್‌ ವೇದಿಕೆಯಲ್ಲಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು.

* * 

ಮೈಮುರಿದು ದುಡಿಯುವ ಜನರು, ಕಡಲನ್ನು ಸೀಳಿ ಸಾಗುವ ಮೀನುಗಾರರ ದೋಣಿ, ಇಂತಹ ಸೊಬಗಿನ ನಾಡನ್ನು ನಾನು ನೋಡಿಯೇ ಇಲ್ಲ
ಪ್ರಕಾಶ್‌ ರೈ
ಬಹುಭಾಷಾ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT