ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಾಚರಣೆ ಮೂಲಕ ಅನ್ನದಾತರಿಗೆ ಗೌರವ

Last Updated 23 ಡಿಸೆಂಬರ್ 2017, 5:21 IST
ಅಕ್ಷರ ಗಾತ್ರ

ಮೈಸೂರು: 5ನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿ.23ರಂದು ರೈತ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ದೇಶ ಅವರಿಗೆ ಗೌರವ ಸಲ್ಲಿಸುತ್ತಿದೆ. ಇದರ ಜತೆಗೆ, ರೈತರ ಬದುಕನ್ನೂ ಗೌರವದಿಂದ ಕಾಣುವಂತಹ ದಿನವನ್ನಾಗಿಯೂ ಪರಿಗಣಿಸಲಾಗುತ್ತಿದೆ.

1979ರ ಜುಲೈ 8ರಿಂದ 1980ರ ಜನವರಿ 14ರ ವರೆಗೆ ಕೇವಲ ಆರು ತಿಂಗಳು ಮಾತ್ರ ದೇಶದ ಪ್ರಧಾನ ಮಂತ್ರಿಯಾಗಿದ್ದ ಅವರು ತಮ್ಮ ಅಲ್ಪ ಅವಧಿಯಲ್ಲೇ ರೈತರ ಬದುಕನ್ನು ಹಸನುಗೊಳಿಸಲು ಕೈಗೊಂಡ ಕ್ರಮಗಳು ಇಂದಿಗೂ ಚಿರಸ್ಥಾಯಿಯಾಗಿವೆ. ಅವರು ಮಂಡಿಸಿದ ಬಜೆಟ್‌ನಲ್ಲಿ ರೈತರಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದರು. ಇದಕ್ಕೂ ಪೂರ್ವದಲ್ಲಿ ಇವರು ಕೃಷಿಯ ಸುಧಾರಣೆಗೆ ಶ್ರಮಿಸಿದರು.

1960ರ ದಶಕದಲ್ಲಿ ಈ ದೇಶದಲ್ಲಿ ಉಂಟಾದ ಹಸಿರು ಕ್ರಾಂತಿಯಲ್ಲೂ ಅವರ ಪಾತ್ರ ದೊಡ್ಡದಿತ್ತು. ಅವರು ತಂದ ಕೃಷಿ ಮಾರುಕಟ್ಟೆ ಮಸೂದೆ ಆಗಿನ ಕಾಲದಲ್ಲಿ ವ್ಯಾಪಕ ಪ್ರಸಿದ್ಧಿಯನ್ನು ಅವರಿಗೆ ತಂದು ಕೊಟ್ಟಿತು.

ಕೈಗಾರಿಕಾ ಕ್ರಾಂತಿಗೆ ಹೆಚ್ಚಿನ ಮನ್ನಣೆ ನೀಡಿದ್ದರ ಫಲವಾಗಿ ಕೃಷಿ ಕ್ಷೇತ್ರ ಮಂಕಾಗಿತ್ತು. ರೈತರೇ ದೇಶದ ಬೆನ್ನುಲುಬು ಎಂದು ಸಾರಿದ ಚರಣ್‌ ಸಿಂಗ್ ಕೃಷಿಕರನ್ನು ಲೇವಾದೇವಿಗಾರರ ಕಪಿಮುಷ್ಟಿಯಿಂದ ಬಿಡಿಸುವುದಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು.‌

ಮುಖ್ಯವಾಗಿ ಅವರು ಜಮೀನ್ದಾರಿ ಪದ್ಧತಿ ನಿರ್ಮೂಲನೆಗಾಗಿ ತಂದ ಅನೇಕ ಯೋಜನೆಗಳು ಭವಿಷ್ಯದಲ್ಲಿ ಫಲ ನೀಡಿದವು. ಮುಂದಿನ ಅನೇಕ ರೈತ ಪರ ಕಾರ್ಯಕ್ರಮಗಳಿಗೆ ಅವರ ಚಿಂತನೆಗಳೇ ಆಕರಗಳಾದವು.‌ ರೈತ ಪರವಾದ ಅನೇಕ ವಿಚಾರಗಳುಳ್ಳ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ನಿಧನ ಹೊಂದಿದ ನಂತರ ನವದೆಹಲಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ ಸ್ಥಳವನ್ನು ಕಿಸಾನ್ ಘಾಟ್ ಎಂದು ಕರೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT