7

ಕುಡಿಯುವ ನೀರು: ₹ 28.75 ಕೋಟಿ ಬಿಡುಗಡೆ

Published:
Updated:

ಕೆ.ಆರ್.ಪೇಟೆ: ‘ಇಲ್ಲಿಯ ಪುರಸಭಾ ವ್ಯಾಪ್ತಿಯ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಅವಳಿ ಪಟ್ಟಣಗಳ ಕುಡಿಯುವ ನೀರು ಯೋಜನೆಗಾಗಿ ₹ 28.75 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ರಾಜ್ಯ ನಗರ ಮೂಲ ಸೌಕರ್ಯ ಹಾಗೂ ಹಣಕಾಸು ನಿಗಮದ ರಾಜ್ಯ ಘಟಕ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಹೇಳಿದರು. ಪಟ್ಟಣದಲ್ಲಿ ಈಚೆಗೆ ಪುರಸಭೆ ಸದಸ್ಯರು ಹಾಗೂ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು.

‘ಈ ಯೋಜನೆಯ ಶಂಕು ಸ್ಥಾಪನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 12ರಂದು ಪಟ್ಟಣಕ್ಕೆ ಬರಲಿದ್ದಾರೆ ರಾಜ್ಯದ 5 ಪುರಸಭೆಗಳು ಮತ್ತು 4 ಪಟ್ಟಣ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಯೋಜನೆ ಕೈಗೊಳ್ಳುವುದಕ್ಕಾಗಿ ₹ 206 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ’ ಎಂದರು.

‘ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗೆ ಮಂಜೂರಾಗಿದ್ದ ₹ 27.75 ಕೋಟಿ ತಾಂತ್ರಿಕ ದೋಷವಿದ್ದ ಕಾರಣ ಸರ್ಕಾರಕ್ಕೆ ವಾಪಸ್ ಹೋಗುವ ಹಂತದಲ್ಲಿತ್ತು. ಅದನ್ನು ಕೆ.ಆರ್.ಪೇಟೆಗೆ ತರಲು ಯತ್ನ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸ್ಪಂದಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಸಿಕೊಟ್ಟು ಯೋಜನೆಗೆ ಕಾಯಕಲ್ಪ ನೀಡಿದ್ದಾರೆ. ಇದರಿಂದ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಅವಳಿ ಪಟ್ಟಣಗಳ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಗೆ ಅಂದಾಜಿಸಲಾಗಿರುವ ₹ 30 ಕೋಟಿ ಹಾಗೂ ಪುರಸಭೆಯ ನೂತನ ಕಟ್ಟಡ ಮತ್ತು ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹ 5 ಕೋಟಿ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು, ‘ಪಟ್ಟಣದ ಅಭಿವೃದ್ಧಿಗಾಗಿ ₹ 30 ಕೋಟಿ ಗೂ ಹೆಚ್ಚು ಅನುದಾನವನ್ನು ಸರ್ಕಾರ ನೀಡಿರುವುದು ಹೆಮ್ಮೆಯ ವಿಚಾರ’ ಎಂದರು.

ಮುಖ್ಯಾಧಿಕಾರಿ ಮೂರ್ತಿ, ಪುರಸಭೆಯ ಮಾಜಿ ಆಧ್ಯಕ್ಷ ಕೆ.ಗೌಸ್ ಖಾನ್ , ಎಚ್.ಕೆ.ಅಶೋಕ್, ಆಟೋಕುಮಾರ್, ಕೆ.ಟಿ.ಚಕ್ರಪಾಣಿ ಮತ್ತು ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕ್ಮಾಂಗದ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಮಾಜಿ ಸದಸ್ಯ ರವೀಂದ್ರಬಾಬು, ಮನ್‌ಮುಲ್‌ ನಿರ್ದೇಶಕರಾದ ಶೀಳನೆರೆ ಅಂಬರೀಶ್, ಡಾಲು ರವಿ, ಪುರಸಭೆ ಆಶ್ರಯ ಸಮಿತಿ ಸದಸ್ಯ ಹಾದನೂರು ಪರಮೇಶ್ ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry