6

ವರ್ತುಲ ರಸ್ತೆ ನಿರ್ಮಾಣಕ್ಕೆ ‘ರುಡಾ’ದಿಂದ ಭೂಮಿಕೆ ಸಿದ್ಧ

Published:
Updated:
ವರ್ತುಲ ರಸ್ತೆ ನಿರ್ಮಾಣಕ್ಕೆ ‘ರುಡಾ’ದಿಂದ ಭೂಮಿಕೆ ಸಿದ್ಧ

ರಾಯಚೂರು: ನಗರದ ಸುತ್ತಲೂ ವರ್ತುಲ ರಸ್ತೆ ನಿರ್ಮಿಸಲು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ (ರುಡಾ) ಉತ್ಸುಕವಾಗಿದ್ದು, ಜಮೀನುಗಳ ಸರ್ವೆ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಿ ಯೋಜನೆಗೆ ಭೂಮಿಕೆ ಸಿದ್ಧಪಡಿಸಿದೆ.

ಆಶಾಪುರ ಪಕ್ಕದ ಬೈಪಾಸ್‌ ರಸ್ತೆಯಿಂದ ಆರಂಭಿಸಿ ರಾಂಪೂರ, ಹೊಸೂರು ಸೇರಿದಂತೆ ಒಟ್ಟು 10 ಗ್ರಾಮಗಳ ಮೂಲಕ ವರ್ತುಲ ರಸ್ತೆ ನಿರ್ಮಿಸುವುದಕ್ಕೆ ಜಮೀನುಗಳನ್ನು ಸರ್ವೆ ಮಾಡಿಸಲಾಗಿದೆ. ಇದೀಗ ಜಿಪಿಎಸ್‌ ಅಳವಡಿಕೆ ಪ್ರಗತಿಯಲ್ಲಿದೆ. ಒಟ್ಟು 178 ಸರ್ವೆ ಸಂಖ್ಯೆಗಳಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದ್ದು, ಈ ಬಗ್ಗೆ ಸಂಬಂಧಿಸಿದ ರೈತರೊಂದಿಗೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.

ವರ್ತುಲ ರಸ್ತೆ ನಿರ್ಮಿಸುವುದಕ್ಕೆ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನ ಒದಗಿಸಲಿದೆ. ಸರ್ವೆ ಪೂರ್ಣಗೊಳಿಸಿದ ಪ್ರತಿ ಜಮೀನುಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್‌ ಕರೀಂಲಾಲ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲಬುರ್ಗಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಕೂಡಾ ರಸ್ತೆ ಮಾರ್ಗವನ್ನು ಶೀಘ್ರದಲ್ಲೆ ಪರಿವೀಕ್ಷಣೆ ಮಾಡುವವರಿದ್ದಾರೆ.

ರಾಯಚೂರು ನಗರದ ಮೂಲಕ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಸಂಪರ್ಕಿಸುವ ಹಗರಿ–ಜಡಚೆರ್ಲಾ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167)ಗೆ ಯರಮರಸ್‌ನಿಂದ ಅಸ್ಕಿಹಾಳವರೆಗೂ 7. 53 ಕಿಲೋ ಮೀಟರ್‌ ಉದ್ದದ ಬೈಪಾಸ್‌ ರಸ್ತೆ ಈಗಾಗಲೇ ಅಸ್ತಿತ್ವದಲ್ಲಿದೆ. ಈ ಬೈಪಾಸ್‌ ರಸ್ತೆಯನ್ನು ಒಳಗೊಂಡು ವರ್ತುಲ ರಸ್ತೆ ನಿರ್ಮಾಣ ಮಾಡುವುದಕ್ಕೆ ಯೋಜಿಸಲಾಗಿದೆ. ವರ್ತುಲ ರಸ್ತೆಯಾದರೆ ರಾಯಚೂರು ನಗರದೊಳಗೆ ಬರುವ ಭಾರಿ ವಾಹನಗಳ ಕಿರಿಕಿರಿ ತಪ್ಪಲಿದೆ. ರಾಯಚೂರು ನಗರದಲ್ಲಿ ಏರ್ಪಡುವ ವಾಹನ ದಟ್ಟಣೆ ಸಮಸ್ಯೆಯೂ ಇರುವುದಿಲ್ಲ.

‘ರಸ್ತೆ ನಿರ್ಮಿಸಲು ಭೂಮಿ ಒದಗಿಸುವ ರೈತರಿಗೆ 50:50 ಮಾದರಿಯಲ್ಲಿ ಭೂಮಿ ಅಭಿವೃದ್ಧಿ ಮಾಡಿಕೊಡಲಾಗುವುದು. ರಸ್ತೆಗೆ ಹೊಂದಿಕೊಂಡ ಜಮೀನುಗಳನ್ನು ಕೃಷಿಯೇತರ (ಎನ್‌ಎ) ಎಂದು ಘೋಷಿಸಿ, ನಿವೇಶನ ಅಭಿವೃದ್ಧಿಪಡಿಸಿ ರೈತರಿಗೆ ಕೊಡುತ್ತೇವೆ. ಬಡಾವಣೆ ಮಾಡುವುದಕ್ಕೆ ಕಡ್ಡಾಯವಾಗಿ ಉದ್ಯಾನ ಹಾಗೂ ಇನ್ನಿತರೆ ಮೀಸಲು ಜಾಗ ಬಿಡಬೇಕಾಗುತ್ತದೆ. ಆದರೆ ಜಮೀನು ಕೊಡುವ ರೈತರು ಮೀಸಲು ಜಾಗ ಬಿಡಬೇಕಿಲ್ಲ. ಈ ಯೋಜನೆಗೆ ಅನೇಕ ರೈತರು ಮೌಖಿಕವಾಗಿ ಒಪ್ಪಿಕೊಂಡಿದ್ದಾರೆ’ ಎಂದು ರುಡಾ ಅಧ್ಯಕ್ಷ ಅಬ್ದುಲ್‌ ಕರೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಾವಿದ ಮಂಜುನಾಥ ಅವರಿಗೆ ಗ್ರಾಫ್‌ ಮಾಡುವಂತೆ ಕೋರಿದ್ದೇನೆ.

* 34 ಕಿ.ಮೀ. ಒಟ್ಟಾರೆ ಉದ್ದದ ವರ್ತುಲ ರಸ್ತೆ

* 7.53 ಕಿ.ಮೀ ರಸ್ತೆ ಈಗಾಗಲೇ ಅಸ್ತಿತ್ವದಲ್ಲಿದೆ

* 26.24 ಕಿ.ಮೀ ಹೊಸದಾಗಿ ನಿರ್ಮಿಸಬೇಕಾದ ರಸ್ತೆ

* 100 ಅಡಿ ಅಗಲದ ಚತುಷ್ಪಥ ರಸ್ತೆ ನಿರ್ಮಾಣ

* 178 ಒಟ್ಟು ಸರ್ವೇ ಸಂಖ್ಯೆಗಳು ರಸ್ತೆ ಮಾರ್ಗದಲ್ಲಿವೆ

* 10 ಗ್ರಾಮಗಳು ನಿರ್ಮಾಣವಾಗುವ ರಸ್ತೆ ಮಾರ್ಗದಲ್ಲಿವೆ

* ಅಸ್ಕಿಹಾಳ, ರಾಂಪೂರು, ಹೊಸೂರು, ಅರಳಿಬೆಂಚಿ, ಮಲಿಯಾಬಾದ್‌, ರಾಯಚೂರು, ಸಿದ್ರಾಂಪೂರು, ಪೋತ್ಗಲ್‌, ಏಗನೂರು, ಚಿಕ್ಕಸುಗೂರು

* ಅಸ್ಕಿಹಾಳದಿಂದ ಯರಮರಸ್‌ವರೆಗೂ ಈಗಾಗಲೇ ಬೈಪಾಸ್‌ ರಸ್ತೆ ಇದೆ

ಬಳಕೆಯಾಗುವ ಜಮೀನುಗಳ ವಿವರ

* 167 ಎಕರೆ ರಸ್ತೆಗಾಗಿ ಒಟ್ಟು ಭೂಮಿ ಅಗತ್ಯ

* 155 ರೈತರಿಗೆ ಸಂಬಂಧಿಸಿದ ಜಮೀನುಗಳು

* * 

ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮೊದಲೆ ವರ್ತುಲ ರಸ್ತೆ ನಿರ್ಮಾಣಕ್ಕೆ ಚಾಲನೆ ಮಾಡಿದರೆ ನಗರದ ಜನರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಚರ್ಚಿಸಿ ಕೆಲಸ ಮಾಡುತ್ತಿದ್ದೇವೆ.

ಅಬ್ದುಲ್‌ ಕರೀಂ

ರುಡಾ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry