6

ಹೆದ್ದಾರಿ ವಿಸ್ತರಣೆ: ಬೇಕಿದೆ ಕಾಳಜಿ

Published:
Updated:
ಹೆದ್ದಾರಿ ವಿಸ್ತರಣೆ: ಬೇಕಿದೆ ಕಾಳಜಿ

ರಾಮನಗರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ತರಾತುರಿಯಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಯ ವಿಸ್ತರಣೆ ಕಾಮಗಾರಿ ನಡೆಸುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ.

ರಸ್ತೆಯಲ್ಲಿಯೇ ಇರುವ ವಿದ್ಯುತ್ ಕಂಬಗಳು, ನೀರಿನ ಪೈಪ್‌ಲೈನ್ ಸೇರಿದಂತೆ ಯಾವುದನ್ನೂ ಸ್ಥಳಾಂತರ ಮಾಡದೇ ನಿಯಮಬಾಹಿರವಾಗಿ ಕಾಮಗಾರಿ ಆರಂಭಿಸಲಾಗಿದೆ ಎಂದು ದೂರುಗಳು ಕೇಳಿಬಂದಿವೆ. ಕಾಮಗಾರಿ ನಡೆಯುವ ಸಂದರ್ಭ ಪದೇಪದೇ ವಿದ್ಯುತ್‌ ಲೈನ್ ತುಂಡಾಗುತ್ತಿದ್ದು, ನಿರಂತರ ವಿದ್ಯುತ್‌ ಪೂರೈಕೆಗೂ ಅಡಚಣೆ ಉಂಟಾಗಿದೆ.

ಹೆದ್ದಾರಿ ವಿಸ್ತರಣೆಯ ನಿಯಮಾವಳಿಗಳ ಪ್ರಕಾರ ಯಾವುದೇ ಕಾಮಗಾರಿ ಆರಂಭಕ್ಕೆ ಮುನ್ನ ಅಲ್ಲಿನ ಮೂಲ ಸೌಕರ್ಯಗಳನ್ನು ರಸ್ತೆಯ ಪಕ್ಕಕ್ಕೆ ಸ್ಥಳಾಂತರ ಮಾಡುವುದು ಕಡ್ಡಾಯವಾಗಿದೆ. ಆದರೆ ಸದ್ಯ ರಾಮನಗರ ಹಾಗೂ ಬಿಡದಿ ನಗರದ ಒಳಗೆ ವಿಸ್ತರಣೆ ಆಗುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು: ‘ಬೆಂಗಳೂರು–ಮೈಸೂರು ಹೆದ್ದಾರಿಯು ಷಟ್ಪಥವಾಗುವುದಾಗಿ ಸರ್ಕಾರ ಘೋಷಿಸಿದ್ದು, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಹೀಗಾಗಿ ವ್ಯವಸ್ಥಿತ ರೀತಿಯಲ್ಲಿ ರಸ್ತೆ ನಿರ್ಮಾಣ ಆಗುವುದಾಗಿ ನಿರೀಕ್ಷೆ ಹೊಂದಿದ್ದೆವು. ಆದರೆ ನಗರದ ಒಳಗೆ ಮನಸ್ಸೋ ಇಚ್ಛೆ ಕಾಮಗಾರಿ ನಡೆದಿದೆ. ಕೆಲವು ಕಡೆ 30–40 ಅಡಿ ಅಗಲಕ್ಕೆ ರಸ್ತೆ ವಿಸ್ತರಣೆ ಆಗುತ್ತಿದ್ದರೆ, ಇನ್ನೂ ಕೆಲವು ಕಡೆ 15–20 ಅಡಿಗೆ ಇಳಿದಿದೆ, ಹೊರವರ್ತುಲ ರಸ್ತೆ ನಿರ್ಮಾಣದ ನೆಪವೊಡ್ಡಿ ನಗರದ ಒಳಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿದೆ’ ಎಂದು ಸ್ಥಳೀಯರಾದ ರವಿಶಂಕರ್ ಆರೋಪಿಸುತ್ತಾರೆ.

‘ವಡೇರಹಳ್ಳಿಯಿಂದ ಆರಂಭಗೊಂಡು ಕೆಎಸ್‌ಆರ್‌ಟಿಸಿ ಡಿಪೊದವರೆಗೆ ಒಂದೇ ಮಾದರಿಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ನಡೆದಿಲ್ಲ. ಹೆದ್ದಾರಿ ಮಗ್ಗಲಿನಲ್ಲಿ ನಿರ್ಮಾಣ ಆಗಿರುವ ಚರಂಡಿಗಳೂ ಏಕಮುಖವಾಗಿಲ್ಲ. ಸ್ಥಳಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಮುಂದೆ ತೊಂದರೆ ಆಗಬಹುದು’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಕಾಮಗಾರಿಗೆ ಮುನ್ನ ಮೂಲ ಸೌಕರ್ಯಗಳ ಸ್ಥಳಾಂತರವನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಬೇಕು. ವ್ಯವಸ್ಥಿತ ರೀತಿಯಲ್ಲಿ, ಒಂದೇ ವಿಸ್ತೀರ್ಣದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಬೇಕು. ಯಾರಿಗೋ ಅನುಕೂಲ ಮಾಡಿಕೊಡುವ ಸಲುವಾಗಿ ಕಾಮಗಾರಿಗಳಲ್ಲಿ ಮಾರ್ಪಾಡು ಮಾಡಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಬೆಸ್ಕಾಂಗೆ ಸಂಕಷ್ಟ

ಯಾವುದೇ ಮುನ್ಸೂಚನೆ ನೀಡದೆಯೇ ಕಾಮಗಾರಿ ನಡೆದಿರುವುದರಿಂದ ಬೆಸ್ಕಾಂ ಸಹಿತ ವಿವಿಧ ಇಲಾಖೆಗಳು ತೊಂದರೆ ಅನುಭವಿಸುವಂತೆ ಆಗಿದೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ನೆಲದಲ್ಲಿನ ವಿದ್ಯುತ್ ತಂತಿಗಳು ತುಂಡಾಗಿವೆ. ಇದರಿಂದ ಹಲವು ಬಾರಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ತುಂಡಾದ ತಂತಿಗಳನ್ನು ಸರಿಪಡಿಸಿಕೊಳ್ಳಲು ಬೆಸ್ಕಾಂ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.

* * 

ಹೊರವರ್ತುಲ ರಸ್ತೆನೆಪವೊಡ್ಡಿ ನಗರದೊಳಗೆ ಮನಬಂದಂತೆ ಕಾಮಗಾರಿ ನಡೆಸಬಾರದು. ಎಲ್ಲರಿಗೂ ಅನುಕೂಲ ಆಗುವ ರೀತಿಯಲ್ಲಿ ಕೆಲಸ ನಡೆಯಬೇಕು

ರಂಗೇಗೌಡ, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry