7

ಉದ್ಯೋಗದಲ್ಲಿ ಶೇ 25 ಮೀಸಲು ಅಗತ್ಯ: ಪೂಜಾರಿ

Published:
Updated:
ಉದ್ಯೋಗದಲ್ಲಿ ಶೇ 25 ಮೀಸಲು ಅಗತ್ಯ: ಪೂಜಾರಿ

ಕೋಟ (ಬ್ರಹ್ಮಾವರ):ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಶಿಕ್ಷಣ ಪಡೆಯಬೇಕು ಎನ್ನುವ ಪ್ರಸ್ತಾವನೆ ಶಾಸನವಾದಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ನೌಕರರಿಗೆ ಸರ್ಕಾರಿ ಶಾಲೆಗಳ ದುಃಸ್ಥಿತಿ ಅರಿವಾಗಿ ಶಾಲೆಗಳು ಸುಧಾರಣೆಯಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯಪಟ್ಟರು.

ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ‘ಸರ್ಕಾರಿ ಶಾಲೆ ಉಳಿಸಿ’ ಎನ್ನುವ ವಿಚಾರ ಕುರಿತು ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 25 ಮೀಸಲಾತಿ ಅಗತ್ಯವಿದೆ. ಕರ್ನಾಟಕದಲ್ಲಿ ಪ್ರಸ್ತುತ 45 ಸಾವಿರ ಸರ್ಕಾರಿ ಶಾಲೆಗಳಿವೆ. ಇಲ್ಲಿ 2 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 1 ಕೋಟಿಗೂ ಹೆಚ್ಚು ಮಕ್ಕಳು ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕಾಗಿ ₹18 ಸಾವಿರ ಕೋಟಿಗಿಂತ ಹೆಚ್ಚು ಹಣ ರಾಜ್ಯದಲ್ಲಿ ಖರ್ಚಾಗುತ್ತದೆ. ಇಷ್ಟೆಲ್ಲ ಇದ್ದರೂ ಮುಂದಿನ ಮೂರು ವರ್ಷದಲ್ಲಿ 4800ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತವೆ ಎಂಬ ವಿಚಾರ ಆತಂಕ ಮೂಡಿಸುವಂತದ್ದು ಎಂದರು.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಅಸಮಾನತೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳ ಕುರಿತು ಹೆತ್ತವರು ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಸೌಲಭ್ಯಗಳು ಸರ್ಕಾರಿ-ಖಾಸಗಿ ಶಾಲೆಗಳ ನಡುವೆ ಸಮಾನವಾದರೆ ಉತ್ತಮ ಎಂದರು.

ಒಂದಾಗಿ ಹೋರಾಟ ನಡೆಸಬೇಕು: ಸಭೆಯಲ್ಲಿ ಉಪಸ್ಥಿತರಿದ್ದ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವು ಕೆಲವೇ ಮಂದಿಯಿಂದ ಆಗುವ ಕಾರ್ಯವಲ್ಲ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿದರೆ ಗುರಿ ತಲುಪಬಹುದು. ನಿಮ್ಮ ಹೋರಾಟದಲ್ಲಿ ನಾನು ಸಂಪೂರ್ಣವಾಗಿ ಕೈಜೋಡಿಸುತ್ತೇನೆ ಎಂದು ತಿಳಿಸಿದರು.

ನಮ್ಮಲ್ಲಿ ನೈತಿಕ ಬಲವಿಲ್ಲ: ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ಉಳಿಸಬೇಕು ಎಂದು ಹೋರಾಟ ನಡೆಸುವ ನಾವೆಲ್ಲ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತೇವೆ. ಹೀಗಾಗಿ ಈ ಕುರಿತು ಹೋರಾಟ ಮಾಡುವ ಸಂಪೂರ್ಣ ನೈತಿಕತೆ ನಮಗಿಲ್ಲ. ಆದರೂ ಶಾಲೆಗಳ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ದಿನದಲ್ಲಿ ನಾವೆಲ್ಲರೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬಹುದು ಎಂದು ಅಭಿಪ್ರಾಯಪಟ್ಟರು.

ಸಂವಾದದಲ್ಲಿ ವ್ಯಕ್ತವಾದ ಜನಾಭಿಪ್ರಾಯ: ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಎಲ್ಲರ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಕಡ್ಡಾಯವಾಗಿ ಓದಬೇಕು ಎಂದು ಶಾಸನ ರೂಪಿಸುವುದು ಉತ್ತಮ. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು. ಖಾಸಗಿ ಶಾಲೆಗಳಲ್ಲಿ ಬಸ್ಸಿನ ವ್ಯವಸ್ಥೆ ಇರುವ ಹಾಗೆ ಸರ್ಕಾರಿ ಶಾಲೆಗಳಿಗೂ ಬಸ್ಸಿನ ವ್ಯವಸ್ಥೆ ಮಾಡಿದಲ್ಲಿ ಉತ್ತಮ.

ಆರ್.ಟಿ.ಐ.ನಲ್ಲಿ ಖಾಸಗಿ ಶಾಲೆಗಳಲ್ಲಿ ಸೀಟು ನೀಡುವುದರಿಂದ ಪರೋಕ್ಷವಾಗಿ ಸರ್ಕಾರಿ ಶಾಲೆಗಳಿಗೆ ಹೊಡೆತ ಬೀಳಲಿದೆ. ಪಕ್ಷಭೇದ ಮರೆತು ಈ ಮಸೂದೆಯನ್ನು ಬೆಂಬಲಿಸ ಬೇಕು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ 90ರಷ್ಟು ಜನಪ್ರತಿನಿಧಿಗಳಿಗೆ ಸೇರಿರುವುದರಿಂದ ಈ ಮಸೂದೆ ಚರ್ಚೆಗೆ ಬರುವುದೇ ಅನುಮಾನ ಎಂದು ಸಂವಾದದಲ್ಲಿ ಚಂದ್ರಮೋಹನ್, ಸರಸ್ವತಿ ಪುತ್ರನ್, ರವೀಂದ್ರ ದೊಡ್ಮನೆ, ಕೃಷ್ಣ, ಶೇಖರ್, ರಂಜಿತ್ ಕೋಟ ಜನಾಭಿಪ್ರಾಯ ವ್ಯಕ್ತಪಡಿಸಿದರು. ವಿದ್ವಾನ್ ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry