7

ರೈತರಿಗೆ ನೀರು, ವಿದ್ಯುತ್‌ ಹಾಗೂ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿ

Published:
Updated:

ಚಿಂಚೋಳಿ: ‘ರೈತರಿಗೆ ಬೇಸಾಯಕ್ಕೆ ಅಗತ್ಯವಾದ ವಿದ್ಯುತ್‌ ಹಾಗೂ ನೀರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಕೊಟ್ಟರೆ ಅವರು ಸರ್ಕಾರಕ್ಕೆ ಬೇರೇನು ಕೇಳುವುದಿಲ್ಲ’ ಎಂದು ರಟಕಲ್‌ ಮುರುಗೇಂದ್ರ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಅವರು ಇಲ್ಲಿನ ಚಂದಾಪುರದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ರೈತ ಹಿತ ರಕ್ಷಣಾ ಸಂಘ ಮತ್ತು ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.

‘ವೈದ್ಯರು, ಎಂಜಿನಿಯರ್‌ಗಳು, ಸರ್ಕಾರಿ ನೌಕರರು ಮುಷ್ಕರ ನಡೆಸಿದರೆ ಅಲ್ಲಿಗೆ ದೌಡಾಯಿಸುವ ಸರ್ಕಾರ, ರೈತರು ತಾವು ಬೆಳೆದ ಉತ್ಪನ್ನಗಳನ್ನು ಒಂದು ದಿನ ಸೇವಿಸದಂತೆ ಇದ್ದು ನೋಡಿ ಆಗ ರೈತರ ಸೇವೆಯ ಅರಿವು ನಿಮಗಾಗುತ್ತದೆ’ ಎಂದರು.

ಸಂಘದ ಗೌರವಾಧ್ಯಕ್ಷ ಸಂಗಯ್ಯಸ್ವಾಮಿ ಮಾತನಾಡಿ, ‘ಶೈಕ್ಷಣಿಕವಾಗಿ ತಾಲ್ಲೂಕು ಹಿಂದುಳಿದಿದೆ. ರೈತರು ಸಂಘಟಿತರಾಗಿ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.

ಸಂಘದ ಅಧ್ಯಕ್ಷ ಶಿವಶರಣಪ್ಪ ಜಾಪಟ್ಟಿ ಮಾತನಾಡಿ, ‘ವೀರೇಂದ್ರ ಪಾಟೀಲರು ದೇವರ ಸಮಾನ ವ್ಯಕ್ತಿಗಳು, ಅವರು 2 ಬೃಹತ್‌ ನೀರಾವರಿ ಯೋಜನೆ, 18 ಸಣ್ಣ ನೀರಾವರಿ ಕೆರೆ ನಿರ್ಮಿಸಿಕೊಟ್ಟಿದ್ದಾರೆ. ಆದರೆ, ಇಲ್ಲಿ ಸಕ್ಕರೆ ಕಾರ್ಖಾನೆ ಇಲ್ಲದ ಕಾರಣ ಕಬ್ಬು ಬೆಳೆಯಲು ಅನನುಕೂಲವಾಗಿದೆ’ ಎಂದರು.

‘ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಯುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯವಾಗಿದೆ. ಆದರೆ, ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳು ಜನಹಿತ ಮರೆತು ಕೆಲಸ ಮಾಡುತ್ತಿದ್ದಾರೆ’ ಎಂದು ಜಾಪಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ರೈತರಾದ ಅಶೋಕ ಪಾಟೀಲ, ಗುರುಲಿಂಗಪ್ಪ ಹಾಲಳ್ಳಿ, ಸಂಘದ ಕಾರ್ಯದರ್ಶಿ ರಾಮರಾವ್‌ ಪಾಟೀಲ, ಚಂದ್ರಶೇಖರ ಪಲ್ಲೇದ್‌, ಮಹಾಂತ್ರಾಯ ಬಗಲಿ, ಬಸವಣಪ್ಪ ಕುಡಳ್ಳಿ ರೈತರ ಸಮಸ್ಯೆಗಳನ್ನು ತಿಳಿಸಿದರು.

ರಟಕಲ್‌ ಹಿರೇಮಠದ ರೇವಣಸಿದ್ದ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಗೌರಿಗುಡ್ಡದ ಶರಣರು ವೇದಿಕೆಯಲ್ಲಿದ್ದರು. ನಂದಿಕುಮಾರ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಇದಕ್ಕೂ ಮುನ್ನ ಚಿಂಚೋಳಿಯಿಂದ ಚಂದಾಪುರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೇಡಿಕೆ ಮನವಿ ಪತ್ರ ಸಲ್ಲಿಕೆ: ಹೆಸರು, ಉದ್ದು ಮಾರಾಟದ ಹಣ ರೈತರ ಖಾತೆಗೆ ಜಮಾ ಮಾಡಬೇಕು. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು. ಗ್ರಾ.ಪಂ.ಮಟ್ಟದಲ್ಲಿ ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಕ್ವಿಂಟಲ್‌ಗೆ ₹7,500 ದರ ನೀಡಬೇಕು. ಅವ್ಯಾಹತವಾಗಿ ಸಾಗಿದ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಒತ್ತಾಯಿಸುವ ಮನವಿಯನ್ನು ಶಿರಸ್ತೇದಾರ ವೆಂಕಟೇಶ ದುಗ್ಗನ್‌ ಸ್ವೀಕರಿಸಿದರು.

* * 

ಮಾಜಿ ಸಿಎಂ ವೀರೇಂದ್ರ ಪಾಟೀಲರು ತಾಲ್ಲೂಕಿನಲ್ಲಿ 2 ಬೃಹತ್‌ ನೀರಾವರಿ ಯೋಜನೆ ಹಾಗೂ 18 ಸಣ್ಣ ನೀರಾವರಿ ಕೆರೆ ನಿರ್ಮಿಸಿದ್ದಾರೆ. ಇದರಿಂದ ಕಬ್ಬು ಬೆಳೆಯಬಹುದಾಗಿದೆ. ಆದರೆ, ಸಕ್ಕರೆ ಕಾರ್ಖಾನೆ ಕೊರತೆಯಿದೆ.

22ಸಿಎಚ್‌ಎಲ್‌2: ಶಿವಶರಣಪ್ಪ ಜಾಪಟ್ಟಿ,

ಅಧ್ಯಕ್ಷ, ಅಖಿಲ ಭಾರತ ರೈತ ಹಿತರಕ್ಷಣಾ ಸಂಘ, ಚಿಂಚೋಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry