3

ಮಹಿಳೆಯರಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ವಿಫಲ

Published:
Updated:

ಕಾರವಾರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡಲು ಸಂಪೂರ್ಣ ವಿಫಲವಾಗಿದ್ದು, ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.

‘ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ಇತ್ತೀಚಿಗೆ ನಡೆದಿದೆ. ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಕರಾಳ ಘಟನೆಯನ್ನು ನೆನಪಿಸುವಂಥ ಕೃತ್ಯ ರಾಜ್ಯದಲ್ಲಿ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಮಹಿಳೆಯರು ಭಯದಲ್ಲಿ ಜೀವಿಸುವ ವಾತಾವರಣ ಸೃಷ್ಟಿಯಾಗಿದೆ’ ಎಂದು ಬಿಜೆಪಿ ಮುಖಂಡ ನಾಗರಾಜ ಜೋಶಿ ದೂರಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬೀದರ್‌ನಿಂದ ಕೋಲಾರದ ಮಾಲೂರಿನವರೆಗೆ 2014ರಲ್ಲಿ ಸರಣಿ ಅತ್ಯಾಚಾರ ನಡೆದಿತ್ತು. ಅವರು ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಸುಮಾರು 476 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ರಾಜ್ಯದಲ್ಲಿ ಪೊಲೀಸ್ ಬೀಟ್‌ ವ್ಯವಸ್ಥೆ ಇಲ್ಲದಿರುವುದು, ಶಾಲಾ– ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಆಗದಿರುವುದರಿಂದ ಇಂಥ ಘಟನೆಗಳು ಪುನರಾವರ್ತನೆಯಾಗುತ್ತಿದೆ’ ಎಂದು ಆರೋಪಿಸಿದರು.

‘ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಘಟನೆಗಳನ್ನು ಕೂಲಂಕಷವಾಗಿ ಗಮನಿಸಿದರೆ ದುಷ್ಕರ್ಮಿಗಳು ಇಲ್ಲಿ ಸಕ್ರಿಯರಾಗಿರುವುದು ಕಾಣುತ್ತಿದೆ. ಸಮಾಜ ಘಾತುಕ ಶಕ್ತಿಗಳು ಕಾರ್ಯಪ್ರವೃತ್ತವಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸದಿರುವುದಿಂದ ವಿಧ್ವಂಸಕ ಕೃತ್ಯಗಳು ಇಲ್ಲಿ ಹೆಚ್ಚಾಗಿದೆ’ ಎಂದು ಆಪಾದಿಸಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೊಳಂಬಕರ್‌, ನಗರ ಘಟಕದ ಅಧ್ಯಕ್ಷ ಮನೋಜ್ ಭಟ್ ಉಪಸ್ಥಿತರಿದ್ದರು.

* * 

ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು

ನಾಗರಾಜ ಜೋಶಿ, ಬಿಜೆಪಿ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry