7

‌ದೇವಾಲಯಕ್ಕೆ ಮೂಲ ಸೌಕರ್ಯ ಒದಗಿಸಿ

Published:
Updated:

ಮುಳಬಾಗಿಲು: ನಗರದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಬಳಿ ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

‘ಈ ದೇವಾಲಯ ಪುರಾಣ ಪ್ರಸಿದ್ಧವಾಗಿದೆ. ಆದರೆ ಇಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಮುಜರಾಯಿ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಐತಿಹಾಸಿಕ ಮತ್ತು ಚಾರಿತ್ರಿಕ ತಾಣವಾಗಿರುವ ಈ ದೇವಾಲಯಕ್ಕೆ ನೂರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಆದರೆ ಸ್ವಚ್ಛತೆ ಸಮಸ್ಯೆಯಿಂದಾಗಿ ಭಕ್ತರು ಕಿರಿಕಿರಿ ಅನುಭವಿಸುವಂತಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಸಂಚಾಲಕ ಆರ್.ವಿಶ್ವನಾಥ್ ದೂರಿದರು.

ದೇವಾಲಯದ ಮುಂಭಾಗದಲ್ಲಿರುವ ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿ ದೇವರುಗಳ ಉಯ್ಯಾಲೆ ಜಾಗವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡುಗೊಂಡಿದ್ದು, ಇದರಿಂದ ದೇವಾಲಯಕ್ಕೆ ಕಳಂಕ ಬರುವಂತಾಗಿದೆ ಎಂದು ಹೇಳಿದರು.

ದೇವಾಲಯಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಕಟ್ಟಡಕ್ಕೆ ಅಶ್ಲೀಲ ಚಲನಚಿತ್ರಗಳ ಭಿತ್ತಿ ಪತ್ರ ಅಂಟಿಸಲಾಗುತ್ತಿದೆ. ಇದು ದೇವಾಲಯಕ್ಕೆ ಬರುವವರಿಗೆ ಮುಜುಗರ ತರಿಸುತ್ತದೆ. ಆದ್ದರಿಂದ ಕೂಡಲೇ ಅಶ್ಲೀಲ ಭಿತ್ತಿ ಚಿತ್ರಗಳನ್ನು ತೆರವುಗೊಳಿಸಲು ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಮೂಲಕ ಹಾದು ಹೋಗುವ ಆಂಜನೇಯಸ್ವಾಮಿ ದೇವಾಲಯ ದಾರಿಯಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ರಾತ್ರಿ ವೇಳೆಯಲ್ಲಿ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಲ್ಲದ ಕಾರಣದಿಂದ ಭಕ್ತರು ಮತ್ತು ಯಾತ್ರಿಕರು ದೇವಾಲಯಕ್ಕೆ ಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಾಲಯಕ್ಕೆ ಭದ್ರತೆ ಒದಗಿಸುವಲ್ಲಿ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಮುಜರಾಯಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಜತೆಗೆ ಯಾತ್ರಾ ಭವನವನ್ನು ಶೀಘ್ರವಾಗಿ ಲೋಕಾರ್ಪಣೆ ಮಾಡಿ ಯಾತ್ರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿ ವರ್ಷ ಬ್ರಹ್ಮ ರಥೋತ್ಸವ ನಡೆಯುವುದರಿಂದ ಸಾವಿರಾರು ಮಂದಿ ದೇವಾಲಯಕ್ಕೆ ಬರುತ್ತಾರೆ. ದೇವಾಲಯಕ್ಕೆ ಬರುವ ಜನರಿಗೆ ಕುಡಿಯುವ ನೀರಿಲ್ಲ, ಸ್ನಾನ ಮಾಡಲು ಕೋಣೆಗಳಿಲ್ಲ, ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ ಎಂದು ದೂರಿದರು.

ದೇವಾಲಯಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಶೀಘ್ರವಾಗಿ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಮೂಲಕ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಿರಸ್ತೇದಾರ್‌ ಗುಪ್ತ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಭಜರಂಗಿ ಚಲಪತಿ, ನಗರ ಸಂಚಾಲಕ ಡಿಶ್‌ ಮಣಿ, ಕಾರ್ಯಕರ್ತರಾದ ರಾಜೇಶ್, ಪ್ರದೀಪ್, ಅರುಣ್, ಪ್ರಶಾಂತ್, ಗಣೇಶ್, ವಂಶಿ, ರಾಮಪ್ಪ, ವೆಂಕಟೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry