7

‘ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಹೆಚ್ಚಿದ ಒತ್ತಡ’

Published:
Updated:

ಕುಷ್ಟಗಿ: ಹೆಚ್ಚಿನ ಅಂಕ ಗಳಿಕೆಗಾಗಿ ಪಾಲಕರಿಂದ ಒತ್ತಡ ಹೆಚ್ಚುತ್ತಿರುವುದರಿಂದ ಮಕ್ಕಳ ಸಹಜ ಪ್ರತಿಭೆಗೆ ಮುಕ್ತ ಅವಕಾಶ ದೊರೆಯದಂತಾಗಿದೆ ಎಂದು ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶ ಬಿ.ಕೇಶವಮೂರ್ತಿ ಹೇಳಿದರು.

ಪಟ್ಟಣದ ಕ್ರೈಸ್ತ್‌ ದ ಕಿಂಗ್‌ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಮೇಲೆ ಒತ್ತಡ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಷಾದಿಸಿದರು.

ಪ್ರಸಕ್ತ ಶಿಕ್ಷಣ ವ್ಯವಸ್ಥೆ ಅಂಕಗಳನ್ನೇ ಅವಲಂಬಿಸಿದೆ ಎಂಬಂತೆ ಬಿಂಬಿಸುವ ಮೂಲಕ ಪಾಲಕರು, ಶಿಕ್ಷಕರು ಮಕ್ಕಳ ಬೆನ್ನು ಹತ್ತಿದ್ದಾರೆ, ಕೆಲವು ದಶಕಗಳ ಹಿಂದೆ ಮಕ್ಕಳು ಸಾಮಾನ್ಯ ದರ್ಜೆಯಲ್ಲಿ ಪಾಸಾಗುತ್ತಿದ್ದಾಗ ಪಾಲಕರು ಅನುಭವಿಸುತ್ತಿದ್ದ ಖುಷಿ ಈಗ ಶೇ 90ರಷ್ಟು ಅಂಕ ಗಳಿಸಿದರೂ ದೊರೆಯುತ್ತಿಲ್ಲ. ಅಂಕಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೆ ಸಹಜ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಹಿರೇವಂಕಲಕುಂಟಾ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸವ ಡಾಣಿ, ಕೇವಲ ನೌಕರಿ ಅಥವಾ ಹೊಟ್ಟೆ ಹೊರೆಯುವುದಕ್ಕೆ ಮಾತ್ರ ಶಿಕ್ಷಣ ಅಲ್ಲ, ಬದಲಾಗಿ ಅದೊಂದು ಬದುಕು ರೂಪಿಸುವ ಅಸ್ತ್ರ ಎಂದು ಭಾವಿಸಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಯುವಂತೆ ನೋಡಿಕೊಂಡರೆ ಭವಿಷ್ಯದಲ್ಲಿ ಅವರು ಸಮಾಜಮುಖಿಯಾಗುತ್ತಾರೆ ಎಂದರು.

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ, ಬೇರೆ ಕ್ಷೇತ್ರಗಳಿಗಿಂತ ಭಿನ್ನವಾಗಿದೆ, ಶಿಕ್ಷಕ ತಪ್ಪು ಮಾಡಿದರೆ ಸಾಮಾಜಿಕ ವ್ಯವಸ್ಥೆಯನ್ನೇ ಹೊಸಕಿಹಾಕಿದಂತಾಗುತ್ತದೆ. ಮಕ್ಕಳನ್ನು ಭಾವಿ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಇದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.

ಸಬ್‌ ಇನ್‌ಸ್ಪೆಕ್ಟರ್‌ ವಿಶ್ವನಾಥ ಹಿರೇಗೌಡರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ, ದೈಹಿಕ ಪರಿವೀಕ್ಷಕ ವೆಂಕನಗೌಡ ದಾದ್ಮಿ, ಸಂಪನ್ಮೂಲ ವ್ಯಕ್ತಿ ನಾಗರಾಜ, ರಾಜು ಬಾಳಿತೋಟ, ಶಾಲೆಯ ವ್ಯವಸ್ಥಾಪಕ ಎನ್.ಎ.ವಿನ್ಸಂಟ್, ಮುಖ್ಯಶಿಕ್ಷಕಿ ಲಿನ್ಸಿ ಮ್ಯಾಥ್ಯೂ, ಶಾಲಾ ಸಮಿತಿ ಸದಸ್ಯ ಜೀರಾಲ್ಡ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry