7

ಹಿಂಗಾರು ಬೆಳೆ ಕಟಾವು ಆರಂಭಿಸಲು ಸೂಚನೆ

Published:
Updated:
ಹಿಂಗಾರು ಬೆಳೆ ಕಟಾವು ಆರಂಭಿಸಲು ಸೂಚನೆ

ಕೊಪ್ಪಳ: ಹಿಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗ ಕೂಡಲೇ ಆರಂಭಿಸಿ ಮೊಬೈಲ್ ತಂತ್ರಾಂಶದಲ್ಲಿ ದಾಖಲಿಸುವಂತೆ ಉಪವಿಭಾಗಾಧಿಕಾರಿ ಗುರುದತ್‌ ಹೆಗ್ಡೆ ಹೇಳಿದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆ ಅಡಿ ಹಿಂಗಾರು ಹಂಗಾಮು ಬೆಳೆ ಸಮೀಕ್ಷೆಯ ಮೂಲ ಕಾರ್ಯಕರ್ತರಿಗೆ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

'ಬೆಳೆ ಕಟಾವು ಸಮೀಕ್ಷಾ ಕಾರ್ಯವು ಈ ಮೊದಲು ತಂತ್ರಜ್ಞಾನ ರಹಿತವಾಗಿ ಮಾಡಲಾಗುತ್ತಿತ್ತು. ಇದೀಗ ಸರ್ಕಾರ ಬೆಳೆ ಕಟಾವು ಸಮೀಕ್ಷಾ ವರದಿಯು ನಿಖರವಾಗಿರಬೇಕು. ದೋಷ ರಹಿತವಾಗಿರಬೇಕು ಎನ್ನುವ ಉದ್ದೇಶದಿಂದ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಈ ತಂತ್ರಾಂಶದಲ್ಲಿಯೇ ಸಮೀಕ್ಷಾ ಕಾರ್ಯ ಆಗಬೇಕು. ಈ ತಂತ್ರಾಂಶದಲ್ಲಿ ಸಿಬ್ಬಂದಿ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ಅಳವಡಿಕೆಗೆ ಅವಕಾಶವಿಲ್ಲ. ಯಾವುದೇ ಅಧಿಕಾರಿ, ಸಿಬ್ಬಂದಿ ತಪ್ಪೆಸಗಿದರೂ ಸಂಬಂಧಿಸಿದವರು ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ’ ಎಂದರು.

‘ತಂತ್ರಾಂಶದ ಕುರಿತು ಯಾವುದೇ ಗೊಂದಲಗಳಿದ್ದರೂ, ಜಿಲ್ಲಾ ಅಥವಾ ತಾಲ್ಲೂಕುಮಟ್ಟದಲ್ಲಿನ ನೋಡೆಲ್ ಅಧಿಕಾರಿಗಳು ಪರಿಹರಿಸಿಕೊಡುತ್ತಾರೆ. ಬೆಳೆ ಕಟಾವು ಪ್ರಯೋಗದ ಸಮೀಕ್ಷಾ ಕಾರ್ಯವು ಕೇವಲ ಬೆಳೆ ವಿಮಾ ಉದ್ದೇಶಕ್ಕೆ ಮಾತ್ರ ಸೀಮಿತವಲ್ಲ. ಈ ಕಾರ್ಯವು ಜಿಲ್ಲೆಯಲ್ಲಿ ಬೆಳೆಯಲಾದ ವಿವಿಧ ಬೆಳೆಗಳ ಪ್ರಮಾಣ, ಕೃಷಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ' ಎಂದು ಅವರು ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, 'ಹಿಂಗಾರು ಹಂಗಾಮಿಗೆ ಹೋಬಳಿ ಮಟ್ಟದಲ್ಲಿ ಸಮೀಕ್ಷೆಗಾಗಿ 1,070 ಪ್ರಯೋಗಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದ 648 ಪ್ರಯೋಗಗಳು ಸೇರಿದಂತೆ ಒಟ್ಟು 1,718 ಪ್ರಯೋಗಗಳನ್ನು ಆಯ್ಕೆ ಮಾಡಲಾಗಿದೆ' ಎಂದರು.

ಜಿಲ್ಲೆಯಲ್ಲಿ ಕೃಷಿ, ಪಂಚಾಯತ್‌ರಾಜ್, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 227 ಮೂಲ ಕಾರ್ಯಕರ್ತರನ್ನು ನೇಮಿಸಲಾಗಿದ್ದು, ಇವರೆಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೆ ತರಬೇತಿ ಕೈಗೊಳ್ಳಲಾಗಿದೆ.

ಮೂಲ ಕಾರ್ಯಕರ್ತರು ಬೆಳೆ ಕಟಾವುಗಳನ್ನು ಯಾವುದೇ ಕಾರಣಕ್ಕೂ ನಷ್ಟಗೊಳಿಸಬಾರದು. ಸಮೀಕ್ಷಾ ಹಂತದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವುದು ಕಡ್ಡಾಯ. ಸಮೀಕ್ಷೆ ಕೈಗೊಳ್ಳುವ ಮುನ್ನ ವಿಮಾ ಕಂಪೆನಿಗೆ ತಿಳಿಸುವುದು ಕಡ್ಡಾಯ. ಮೂಲ ಕಾರ್ಯಕರ್ತರೇ ಕಡ್ಡಾಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಬೇಕು. ಆಯ್ಕೆಯಾದ ಬೆಳೆಯು ವಿಮಾ ಘಟಕದಲ್ಲಿ  ನೋಂದಣಿ  ಮಾಡದಿದ್ದಲ್ಲಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯಬೇಕು  ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವೈ.ಬಿ. ಛಲವಾದಿ, ಕೊಪ್ಪಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ಗುರುಬಸವರಾಜ, ಕೃಷಿ ಸಹಾಯಕ ನಿರ್ದೇಶಕ ವೀರಣ್ಣ ಕಮತರ್ ಇದ್ದರು.

* * 

ಬೆಳೆ ಕಟಾವು ಪ್ರಯೋಗದ ಸಮೀಕ್ಷೆ ಕೇವಲ ಬೆಳೆ ವಿಮಾ ಉದ್ದೇಶಕ್ಕೆ ಮಾತ್ರ ಸೀಮಿತವಲ್ಲ. ಕೃಷಿಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.

ಗುರುದತ್‌ ಹೆಗ್ಡೆ, ಉಪವಿಭಾಗಾಧಿಕಾರಿ, ಕೊಪ್ಪಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry