7

‘ಬಿಜೆಪಿ, ಜೆಡಿಎಸ್‌ಗೆ ಗುದ್ದು ಕೊಡಿ, ಕಾಂಗ್ರೆಸ್‌ಗೆ ಮತ ನೀಡಿ’

Published:
Updated:

ಜಮಖಂಡಿ: ‘ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಗ್ರಾಮದೊಳಗೆ ಸೇರಿಸಿಕೊಳ್ಳಬೇಡಿ. ಅವರಿಂದ ಗ್ರಾಮಸ್ಥರು ಎಚ್ಚರವಾಗಿರಬೇಕು. ಬಿಜೆಪಿ ನಾಯಕರು ಸುಳ್ಳು ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹರಿಬಿಟ್ಟು ಯುವಕರನ್ನು ಬಿಜೆಪಿಯತ್ತ ಸೆಳೆಯಲಾಗುತ್ತಿದೆ’ ಎಂದು ಸಚಿವೆ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮದ ಹತ್ತಿರ ಕೃಷ್ಣಾನದಿಗೆ ನಿರ್ಮಿಸಲಾದ ಸಂಪರ್ಕ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗುಜರಾತ್ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವ ಮೂಲಕ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಕುಸಿಯುತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ ಎಂದರು.

‘ಜೆಡಿಎಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಎಲ್ಲ ಭಾಗ್ಯ ಯೋಜನೆಗಳನ್ನು ರದ್ದುಪಡಿಸುವುದಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ. ಇದರಿಂದ ಮತದಾರರು ಜೆಡಿಎಸ್‌ಗೆ ಗುದ್ದು ಕೊಡುವಂತಾಗಿದೆ’ ಎಂದರು.

ಶಾಸಕ ಸಿದ್ದು ನ್ಯಾಮಗೌಡ ಮಾತನಾಡಿ, ‘ಬಿಜೆಪಿ ಸರ್ಕಾರ ಜಂಬಗಿ ಸೇತುವೆ ನಿರ್ಮಾಣಕ್ಕೆ ಕೇವಲ ₨10 ಕೋಟಿ ಖರ್ಚು ಮಾಡಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₨50 ಕೋಟಿ ಖರ್ಚು ಮಾಡಿ ಸೇತುವೆಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಲ್ಲಿ ಅನವಶ್ಯಕ ವಿಳಂಬ ಮಾಡಿಲ್ಲ’ ಎಂದರು.

ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಬಾಪುಗೌಡ ಪಾಟೀಲ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಸಿದ್ದು ಮೀಸಿ, ಪ್ರಕಾಶ ಕಣಬೂರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಶೋಭಾ ಹೊಸೂರ, ಸಾವಳಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಸ ಪಾಟೋಳಿ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಫಕೀರಸಾಬ ಬಾಗವಾನ ಹಾಜರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry