7

ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ

Published:
Updated:
ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ

ದೊಡ್ಡಬಳ್ಳಾಪುರ: ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕು ಜಾರಿ ಮಾಡಬಾರದು ಎಂದು ಭೋವಿ ಜನಾಂಗ ಸಂಘದ ತಾಲ್ಲೂಕು ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಹೇಳಿದರು.

ಡಿಸೆಂಬರ್ 29ರಂದು ವರದಿ ಜಾರಿ ಮಾಡಬಾರದು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

‌ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಗಳಲ್ಲಿ 101 ಜಾತಿಗಳಿದ್ದು, ನಾವೆಲ್ಲಾ ಒಂದಾಗಿ ಬಾಳುತ್ತಿದ್ದೇವೆ. ಇದರಲ್ಲಿ ಸುಮಾರು 10 ಜಾತಿಗಳು ಪ್ರಮುಖವಾಗಿವೆ’ ಎಂದರು.

ಉಳಿದ ಜಾತಿಗಳು ಯಾವುವು ಹಾಗೂ ಎಷ್ಟು ಇವೆ ಎಂಬ ಕುರಿತು ಸರಿಯಾದ ಮಾಹಿತಿಯಿಲ್ಲ. ಸರ್ಕಾರ ಜಾತಿ ಗಣತಿ ಮಾಡಿದ್ದು, ಅದನ್ನು ಮೊದಲು ಪ್ರಕಟಿಸಿ, ನಂತರ ಸಮಿತಿ ರಚಿಸಿ ಗಂಭೀರವಾಗಿ ಪರಿಶೀಲಿಸಬೇಕಿದೆ ಎಂದರು.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಒಳ ಮೀಸಲಾತಿ ಕುರಿತು ಪ್ರಸ್ತಾಪವೇ ಮಾಡಿಲ್ಲ. ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಅನ್ಯಾಯವಾಗುವ ಈ ವರದಿ ಸಂವಿಧಾನ ವಿರೋಧಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ನೆರೆಯ ಆಂಧ್ರಪ್ರದೇಶದಲ್ಲಿಯೂ ಇದೇ ರೀತಿ ಒಳ ಮೀಸಲಾತಿ ಕುರಿತ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಮೊದಲಾದವರು ಈ ಬಗ್ಗೆ ಗಂಭೀರ ಗಮನ ಹರಿಸಬೇಕು ಎಂದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ಡಿ.31ರಂದು ರಾಜ್ಯದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಪರಿಶೀಲಿಸಿ, ಯಾವುದೇ ಕಾರಣಕ್ಕೂ ವರದಿ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಲಂಬಾಣಿ ಸಮುದಾಯದ ಮುಖಂಡ ಗೋಪಾಲನಾಯಕ್, ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಜಾತಿಗಳ ಕುರಿತು ಸರ್ವೇ ಮಾಡದೇ ಯಾರೋ ಹೇಳಿದ್ದನ್ನು, ಎ.ಸಿ ಕೊಠಡಿಯಲ್ಲಿ ಕುಳಿತು ರಚಿಸಿರುವ ಈ ವರದಿ ಬಗ್ಗೆ ಯಾರಿಗೂ ಸರಿಯಾದ ಮಾಹಿತಿಯಿಲ್ಲ ಎಂದು ಆರೋಪಿಸಿದರು.

ಇಂದಿಗೂ ಹಲವಾರು ಪರಿಶಿಷ್ಟ ಜಾತಿಗಳಲ್ಲಿ ಕಡುಬಡವರು ಇದ್ದಾರೆ. ಸರ್ಕಾರ ಬೇಕಾದರೆ ಮೀಸಲಾತಿ ಪ್ರಮಾಣ ಹೆಚ್ಚಿಸಲಿ. ಆದರೆ ಇರುವುದನ್ನು ಕಸಿದುಕೊಳ್ಳುವುದು ಬೇಡ ಎಂದರು.

ಸಭೆಯಲ್ಲಿ ಬೋವಿ ಸಮುದಾಯದ ಬಸವರಾಜು, ಕೊರಚ ಸಮಾಜದ ಗೋವಿಂದರಾಜು, ಲಂಬಾಣಿ ಮಹಾಸಭಾದ ರಾಮಾನಾಯಕ್, ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ಬೋವಿ ಸಮಾಜದ ರಾಜ್ಯ ಮುಖಂಡ ವೆಂಕಟೇಶ್, ಮುನಿಯಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry