7

ಮೆಕ್ಕೆಜೋಳ ಖರೀದಿಸುವಂತೆ ಕೇಂದ್ರಕ್ಕೆ ಸಿ.ಎಂ ಒತ್ತಾಯ

Published:
Updated:
ಮೆಕ್ಕೆಜೋಳ ಖರೀದಿಸುವಂತೆ ಕೇಂದ್ರಕ್ಕೆ ಸಿ.ಎಂ ಒತ್ತಾಯ

ಯಮಕನಮರಡಿ: ರೈತರು ಬೆಳೆದಿರುವ ಮೆಕ್ಕೆಜೋಳವನ್ನು ಖರೀದಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುವಂತೆ ಗೋಗರೆದರೂ ಮಾಡಲಿಲ್ಲ. ಕೇಂದ್ರದ್ದು ರೈತ ವಿರೋಧಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ಸಿಇಎಸ್‌ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತವು ಹಮ್ಮಿಕೊಂಡಿದ್ದ ಯಮಕನಮರಡಿ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೆಕ್ಕೆಜೋಳ ಉತ್ತಮವಾಗಿ ಬೆಳೆದಿದೆ. ಮಾರುಕಟ್ಟೆಯಲ್ಲಿ ದರ ಬಿದ್ದುಹೋಗಿದೆ. ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಇದಕ್ಕೆ ಉತ್ತರಿಸಿದ ಕೇಂದ್ರವು, ಮೆಕ್ಕೆಜೋಳವನ್ನು ಪಡಿತರ (ಪಿಡಿಎಸ್‌) ವ್ಯವಸ್ಥೆಯಡಿ ವಿತರಿಸುವಂತೆ ಷರತ್ತು ವಿಧಿಸಿದೆ. ನಮ್ಮಲ್ಲಿ ಯಾರಾದರೂ ಮೆಕ್ಕೆಜೋಳ ತಿನ್ನುತ್ತಾರೆಯೇ? ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ತಕ್ಷಣ ತನ್ನ ಷರತ್ತನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮೆಕ್ಕೆಜೋಳವನ್ನು ಖರೀದಿಸಲು ಮುಂದೆ ಬರಬೇಕು ಎಂದು ಒತ್ತಾಯಿಸಿದರು.

‘ನಾವು ಸಹಕಾರಿ ಬ್ಯಾಂಕ್‌ಗಳಲ್ಲಿದ್ದ ರೈತರ ಸಾಲ ಮನ್ನಾ ಮಾಡಿದ್ದೇವೆ. ಇದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನು ಕೂಡ ಮನ್ನಾ ಮಾಡಿಸಬೇಕೆಂದು ರೈತರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಹಿಡಿದು ಕೇಳಬೇಕು’ ಎಂದರು.

ಚರ್ಚೆಗೆ ಬನ್ನಿ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಾವು ನೀರಾವರಿ ಯೋಜನೆಗಳಿಗೆ ₹45,000 ಕೋಟಿ ಖರ್ಚು ಮಾಡಿದ್ದೇವೆ. ಆದರೆ, ಯಡಿಯೂರಪ್ಪ ಅವರು ನಾವು ಕೇವಲ ₹ 5,500 ಕೋಟಿ ಖರ್ಚು ಮಾಡಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ. ಅವರ ಬಳಿ ಅಂಕಿ ಅಂಶವಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ನಾವು ಮಾಡಿರುವ ವೆಚ್ಚದ ವಿವರಗಳನ್ನು ಜಾಹೀರಾತು ಮೂಲಕ ಪತ್ರಿಕೆಗಳಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಈ ಅಂಕಿ ಅಂಶಗಳು ಸುಳ್ಳಾದರೆ ಫೆಬ್ರುವರಿಯಲ್ಲಿ ನಾನು ಕರೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಯಡಿಯೂರಪ್ಪ ನಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿ ಎಂದು ಕಿಚಾಯಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಸತೀಶ ಜಾರಕಿಹೊಳಿ, ‘ಯಮಕನಮರಡಿ ಕ್ಷೇತ್ರ ವಿಂಗಡಣೆಯಾಗಿ 10 ವರ್ಷ ಕಳೆದಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಸ್ತೆ ಸುಧಾರಣೆ, ಶಿಕ್ಷಣ, 109 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ, ಸರ್ಕಾರಿ– ಖಾಸಗಿ ಶಾಲೆಗಳ ಅಭಿವೃದ್ಧಿ, ಕೆರೆ ತುಂಬುವ ಯೋಜನೆ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ’ ಎಂದರು.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಸರ್ಕಾರ ಮಾಡಿದ್ದ ರೈತರ ಸಾಲ ಮನ್ನಾ ಯೋಜನೆಯ ಲಾಭ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರದ ರೈತರಿಗೆ ಹೆಚ್ಚು ಲಭಿಸಿದೆ. ಮಾರ್ಕಂಡೇಯ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಸುಲ್ತಾನಪುರ ಬ್ಯಾರೇಜ್‌ ನಿರ್ಮಾಣ ಕಾಮಗಾರಿಗೆ ಸದ್ಯದಲ್ಲಿ ಒಪ್ಪಿಗೆ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ‘ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಾಗುವುದು’ ಎಂದರು.

ಬೆಳ್ಳಿಗದೆ ಕಾಣಿಕೆ: ಸತೀಶ ಅಭಿಮಾನ ಬಳಗದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ಎರಡು ತ್ರಿಚಕ್ರ ವಾಹನಗಳನ್ನು ಸಿಎಂ ಸಿದ್ದರಾಯಯ್ಯ ಹಾಗೂ ಸತೀಶ ಜಾರಕಿಹೊಳಿ ಅವರು ಫಲಾನುಭವಿಗಳಿಗೆ  ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕ ಫಿರೋಜ್‌ ಸೇಠ್‌, ಅಂಜಲಿ ನಿಂಬಾಳಕರ, ಲಕ್ಷ್ಮಣ ಚಿಂಗಳೆ, ಕಾಕಾ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದಗೌಡಾ ಸುಣಗಾರ, ಗಂಗಾಧರಸ್ವಾಮಿ ತವಗಮಠ, ಮಂಜುನಾಥ ಪಾಟೀಲ, ಮನಿಷಾ ಪಾಟೀಲ, ಹುಕ್ಕೇರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಹತ್ತರಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವ ಪಟೋಳಿ, ಈರಣ್ಣಾ ಬಿಸಿರೊಟ್ಟಿ, ರವೀಂದ್ರ ಜಿಂಡ್ರಾಳಿ, ರಾಮಾ ಗುಳ್ಳಿ, ಯಮಕನಮರಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅವ್ವಕ್ಕಾ ಮಾದರ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಎಸ್ಪಿ ಬಿ.ಆರ್.ರವಿಕಾಂತೇ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಉಪಸ್ಥಿತರಿದ್ದರು. ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿದರು. ಕೊನೆಯಲ್ಲಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಕಿರಣ ರಜಪೂತ ವಂದಿಸಿದರು.

ಬಳಲಿದ ಸಿ.ಎಂ

ಕಳೆದ 10 ದಿನಗಳಿಂದ ವಿವಿಧ ಸ್ಥಳಗಳಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಯಮಕನಮರಡಿಯಲ್ಲಿ ಬಳಲಿದಂತೆ ಕಂಡುಬಂದರು. ಈ ಮೊದಲು ಮಾತನಾಡುತ್ತಿದ್ದಾಗ ಅವರು ತೋರುತ್ತಿದ್ದ ಹಾವಭಾವಗಳು ಇಲ್ಲದೇ ಮಾತುಗಳಿಗಷ್ಟೇ ಅವರ ಭಾಷಣ ಸೀಮಿತವಾಗಿತ್ತು. ಕೇವಲ 40 ನಿಮಿಷಗಳವರೆಗೆ ಮಾತ್ರ ಮಾತನಾಡಿದರು.

* ಶಾಲೆಗೆ ‘ರಜೆ’

ಯಮಕನಮರಡಿಯ ಸಿಇಎಸ್‌ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಗೆ ಯಾವ ವಿದ್ಯಾರ್ಥಿಗಳು ಬಂದಿರಲಿಲ್ಲ, ಪಾಠಪ್ರವಚನಗಳು ನಡೆಯಲಿಲ್ಲ. ಅನಧಿಕೃತ ರಜೆ ಘೋಷಿಸಿದಂತಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry