7

ಒಳ ಮೀಸಲಾತಿ ವಿರೋಧಿಸಿ 29ರಂದು ಪ್ರತಿಭಟನೆ

Published:
Updated:

ಚಿಂತಾಮಣಿ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕವಾಗಿದೆ. ಯಾವುದೇ ಒತ್ತಾಯಕ್ಕೆ ಮಣಿದು ಈ ವರದಿಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಡಿಸೆಂಬರ್‌ 29ರಂದು ವಿಧಾನಸೌಧ ಚಲೋ ಹಾಗೂ ಮುಖ್ಯಮಂತ್ರಿಯ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಅನಂತನಾಯಕ್‌ ತಿಳಿಸಿದರು.

ನಗರಸಭೆಯ ಸಭಾಂಗಣದಲ್ಲಿ ಗುರುವಾರ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಸದಾಶಿವ ಆಯೋಗದ ವರದಿಯಲ್ಲಿ ಹಲವಾರು ನ್ಯೂನತೆಗಳಿವೆ. ವರದಿ ಜಾರಿಯಾದರೆ ಬೋವಿ, ಲಂಬಾಣಿ, ಛಲವಾದಿ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಶೋಷಿತ ಸಮುದಾಯಗಳಿಗೆ ಒದಗಿಸಿರುವ ಮೀಸಲಾತಿಗೆ ಧಕ್ಕೆಯಾಗುತ್ತದೆ ಎಂದು ವರದಿಯನ್ನು ಟೀಕಿಸಿದರು.

ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ಧರ್ಮ ಧರ್ಮಗಳನ್ನು ಎತ್ತಿಕಟ್ಟುವ ಹುನ್ನಾರ ಮಾಡುತ್ತಿದೆ. ಏಕಪಕ್ಷೀಯ ವರದಿಯಾಗಿರುವ ಸದಾಶಿವ ಆಯೋಗದ ವರದಿಯ ಬಗ್ಗೆ ತಜ್ಞರ ಜತೆಯಲ್ಲಿ ಚರ್ಚೆ ನಡೆಸದೆ ಜಾರಿ ಮಾಡಬಾರದು. ಜಾರಿಗೊಳಿಸಲು ಹೊರಟರೆ ಒಕ್ಕೂಟದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಬೋವಿ ಜನಾಂಗದ ರಾಷ್ಟ್ರ ಘಟಕದ ಕಾರ್ಯಾಧ್ಯಕ್ಷ ರವಿ ಮಾಕಲಿ ಮಾತನಾಡಿ ಬೋವಿ ಜನಾಂಗವು ಯಾರನ್ನೂ ಬೆದರಿಸದೆ ಕಷ್ಟಪಟ್ಟು ಶ್ರಮಜೀವಿಗಳಾಗಿ ದುಡಿದು ಜೀವನ ನಡೆಸುತ್ತಿದ್ದಾರೆ. ಬೋವಿ ಜನಾಂಗದ ಒಗ್ಗಟ್ಟಿನ ಕೊರತೆಯನ್ನು ಬಂಡವಾಳ ಮಾಡಿಕೊಂಡು ಬೋವಿ ಜನಾಂಗವನ್ನು ಮೀಸಲಾತಿಯಿಂದ ದೂರಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಸಮಾಜದ ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಬೋವಿ ಜನಾಂಗವನ್ನು ಮುಂದುವರಿದ ಸಮಾಜ ಎಂದು ಪರಿಗಣಿಸಲು ಪ್ರಯತ್ನಗಳು ನಡೆಯುತ್ತಿವೆ. ವರದಿ ಜಾರಿ ವಿರೋಧಿಸಿ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 99 ಲಕ್ಷ ಜನಸಂಖ್ಯೆ ಇರುವ ಸಮಾಜವನ್ನು ಒಡೆಯುವ ಕೆಲಸವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಬೋವಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಗುರ್ರಪ್ಪ ಮಾತನಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ನಡೆಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸಬೇಕು.ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ 50ರಿಂದ ಶೇ 77ಕ್ಕೆ ಹೆಚ್ಚಿಸಬೇಕು. ಎಲ್ಲ ಜನಾಂಗದವರಿಗೂ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಉಪಾಧ್ಯಕ್ಷ ಮುನಿಮಾರಪ್ಪ, ಜಯರಾಮ್‌, ಯುವ ಘಟಕದ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್‌.ಶ್ರೀನಿವಾಸ್‌, ಬೋವಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಿ, ಗೌರವಾಧ್ಯಕ್ಷ ಮಂಜುನಾಥ್‌, ಯುವ ಘಟಕದ ಅಧ್ಯಕ್ಷ ಮಂಜುನಾಥ್‌, ಮುಖಂಡರಾದ ಬಿ.ಎನ್‌.ಶ್ರೀನಿವಾಸಪ್ಪ, ಸಂತೋಷ್‌, ಚಂದ್ರಶೇಖರ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry