7

ಸಂಕಷ್ಟ ತೀರದ ರೈತರ ಬದುಕು

Published:
Updated:
ಸಂಕಷ್ಟ ತೀರದ ರೈತರ ಬದುಕು

ಚಿಂತಾಮಣಿ: ರೈತರ ಸಮಸ್ಯೆಗಳಿಗೆ ಕೊನೆ ಇಲ್ಲ. ಹುಟ್ಟಿನಿಂದಲೇ ಸಮಸ್ಯೆಗಳನ್ನು ಅವರ ಬೆನ್ನಿಗೆ ಅಂಟಿಸಿಕೊಂಡಿರುತ್ತವೆ. ಬೆಲೆ ಕುಸಿತ, ಹವಾಮಾನ ವೈಪರೀತ್ಯ, ಬೆಳೆ ಹಾನಿ, ಆತ್ಮಹತ್ಯೆ ಹಾಗೂ ಆರ್ಥಿಕ ಸಂಕಷ್ಟಗಳು ಚರ್ಚೆಗೆ ಗ್ರಾಸವಾಗಿವೆ. ಇವುಗಳ ನಡುವೆ ರೈತನಾಯಕ ಚೌದರಿ ಚರಣಸಿಂಗ್‌ ಅವರ ಜನ್ಮದಿನವಾದ ಡಿಸೆಂಬರ್‌ 23ರಂದು ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ನೀರು ಹಾಗೂ ವಿದ್ಯುತ್‌ ಕೊರತೆ, ಮಳೆಯ ಕಣ್ಣುಮುಚ್ಚಾಲೆ, ಹವಾಮಾನ ವೈಪರೀತ್ಯಗಳನ್ನು ಎದುರಿಸಿ ಬೆಳೆಗಳನ್ನು ಬೆಳೆದರೆ ಬೆಲೆ ಕುಸಿತಕ್ಕೆ ಗುರಿಯಾಗುತ್ತಾರೆ. ಹಲವು ಸಮಸ್ಯೆಗಳಿಂದಾಗಿ ಕೃಷಿ ಕ್ಷೇತ್ರ ದಿವಾಳಿಯಾಗುತ್ತಿದೆ. ಕೃಷಿಕರಿಗೆ ಲಾಭದಾಯಕವಾದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ, ಮಾರುಕಟ್ಟೆ ವ್ಯವಸ್ಥೆ ಸರಿಯಾಗಿಲ್ಲ. ಬೆಳೆ ಹಾನಿ ಮತ್ತಿತರ ಕಾರಣಗಳಿಂದ ಕೃಷಿ ಬಿಟ್ಟು ತ್ಯಜಿಸಿ ಪಟ್ಟಣ, ನಗರಗಳಿಗೆ ವಲಸೆ ಹೋಗುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿ, ಹಿರಿಯರಷ್ಟೇ ಉಳಿಯುವಂತಾಗಿದೆ ಎಂಬ ಆತಂಕಗಳು ರೈತರನ್ನು ತೀವ್ರವಾಗಿ ಕಾಡುತ್ತಿದೆ.

ಬೆಲೆ ಇದ್ದಾಗ ರೋಗ ರುಜಿನುಗಳಿಂದ ಉತ್ಪಾದನೆ ಇರಲ್ಲ. ಇಳುವರಿ ಚೆನ್ನಾಗಿ ಇದ್ದರೆ ಉತ್ಪನ್ನಗಳಿಗೆ ಬೆಲೆ ಇರುವುದಿಲ್ಲ. ಹವಾಮಾನ ವೈಪರೀತ್ಯದಿಂದ ಕೈಗೆ ಬಂದು ತುತ್ತು ಬಾಯಿಗೆ ಬರುವುದಿಲ್ಲ. ಆಗೆಲ್ಲ ರೈತರ ಶ್ರಮ ‘ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತೆ’ ಆಗುತ್ತದೆ. ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದ ರೈತರು ಮತ್ತಷ್ಟು ಸಂಕಷ್ಟಗಳಿಗೆ ಗುರಿಯಾಗಬೇಕಾಗಿದೆ ಎಂಬುದು ರೈತರ ಅಳಲು.

ಜಾರಿಯಾಗದ ಸ್ವಾಮಿನಾಥನ್‌ ವರದಿ: ರೈತರು ಹಾಕುವ ಬಂಡವಾಳಕ್ಕೆ ಶೇ 50ರಷ್ಟು ಲಾಭಾಂಶ ಸೇರಿಸಿ ಬೆಲೆ ನಿಗದಿಪಡಿಸುವ ಅಧಿಕಾರ ಬೇಕು. ಕೈಗಾರಿಕೆಗಳ ಉತ್ಪನ್ನಗಳಿಗೆ ಅದರ ಮಾಲೀಕರು ಬೆಲೆ ನಿಗದಿಪಡಿಸುತ್ತಾರೆ. ಆದರೆ ರೈತರ ಉತ್ಪನ್ನಗಳಿಗೆ ಮಾತ್ರ ದಳ್ಳಾಳಿಗಳು ಬೆಲೆ ನಿಗದಿಪಡಿಸುವುದು ಸರಿಯಲ್ಲ.ರೈತರ ಸಮಸ್ಯೆ ಸ್ವಲ್ಪಮಟ್ಟಿಗಾದರೂ ಪರಿಹಾರವಾಗಬೇಕಾದರೆ ಕೃಷಿ ವಿಜ್ಞಾನಿ ಡಾ. ಸ್ವಾಮಿನಾಥನ್‌ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು. ಕೃಷಿ ಉತ್ಪನ್ನಗಳ ಬೆಲೆ ನಿಗದಿ ಮಾಡುವ ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಬೇಕು. ಕೇಂದ್ರ ಸರ್ಕಾರ ಚುನಾವಣೆ ಸಮಯದಲ್ಲಿ ಸ್ವಾಮಿನಾಥನ್‌ ವರದಿ ಜಾರಿಗೆ ತರುವುದಾಗಿ ನೀಡಿದ ಭರವಸೆ ಇನ್ನೂ ಈಡೇರಿಸಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಗೋಪಿನಾಥ್‌ ಆರೋಪಿಸಿದರು.

ರೈತರ ಸಂಕಷ್ಟ ನಿವಾರಣೆಗೆ ನೀರಾವರಿ ಯೋಜನೆಗಳ ಅನುಷ್ಠಾನ ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಬೇಕು. ನದಿ ಜೋಡಣೆ ಬಾಯಿ ಮಾತಾಗಿದೆ. ಚುನಾವಣೆ ಬಂದಾಗ ಕಣ್ಣೊರೆಸುವ ತಂತ್ರ ಅನುಸರಿಸುವ ಬದಲಾಗಿ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗಬೇಕು. ಕೈಗಾರಿಕೆಗಳಿಗೆ ನೀಡುವ ಆದ್ಯತೆಯನ್ನು ಕೃಷಿಗೂ ನೀಡಿ ಬಲಪಡಿಸಬೇಕು. ಕೈಗಾರಿಕಾ ವಲಯಕ್ಕೆ ನೀಡುವ ರಿಯಾಯಿತಿ, ಪ್ಯಾಕೇಜ್‌ಗಳನ್ನು ಕೃಷಿ ಕ್ಷೇತ್ರಕ್ಕೂ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಾಲಮನ್ನಾ ನೀತಿ: ರೈತರ ಸಣ್ಣ ಮೊತ್ತದ ಸಾಲವನ್ನು ಮನ್ನಾ ಮಾಡಿದರೆ ಅರ್ಥ ವ್ಯವಸ್ಥೆ ಕೆಡುತ್ತದೆ ಎಂಬುದು ಸರ್ಕಾರಗಳ ಅನಿಸಿದೆ. ಆದರೆ ಕೈಗಾರಿಕೆ, ಉದ್ದಿಮೆ, ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ ಲಕ್ಷಾಂತರ ಕೋಟಿ ಮೊತ್ತದ ಸಾಲವನ್ನು ಮನ್ನಾ ಮಾಡಲಾಗುತ್ತದೆ. ವಸೂಲಿಯಾಗದ ಸಾಲ ಎಂದು ಘೋಷಿಸಿ ಮನ್ನಾ ಮಾಡಲಾಗುತ್ತಿದೆ. ಅದಕ್ಕೆ ಹೋಲಿಸಿದರೆ ರೈತರ ಸಾಲ ಶೇ 10ರಷ್ಟಕ್ಕಿಂತ ಕಡಿಮೆ. ಬ್ಯಾಂಕುಗಳಲ್ಲಿ ರೈತರು ಸಾಲ ಪಡೆಯಲು ವಿಧಿಸುವ ಷರತ್ತುಗಳಿಗೆ ಬಸವಳಿದು ಅದರ ಸಹವಾಸವೇ ಬೇಡ ಎಂದು ಖಾಸಗಿ ಸಾಲಗಳಿಗೆ ಮೊರೆ ಹೋಗಿ, ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುದು ಎಂದು ಕೃಷಿ ತಜ್ಞರ ಅಭಿಪ್ರಾಯ.

ಆಹಾರದ ಕೊರತೆ: ರೈತರಿಗೆ ಪೂರಕವಾದ ಸಾಲ ನೀತಿ ರೂಪಿಸಲು ಸರ್ಕಾರಗಳು ಗಮನ ನೀಡುತ್ತಿಲ್ಲ. ಅಲ್ಲದೆ ಅವುಗಳಿಗೆ ಸ್ಥೈರ್ಯವೂ ಇಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಯೋಗ್ಯ ಭೂಮಿಯನ್ನು ಕಸಿದುಕೊಂಡು ಕೈಗಾರಿಕೆಗಳಿಗೆ, ವಿವಿಧ ಯೋಜನೆಗಳಿಗೆ ನೀಡಲಾಗುತ್ತಿದೆ. ರೈತರನ್ನು ಬೀದಿಗೆ ತಳ್ಳಲಾಗುತ್ತಿದೆ. ದುಡಿಯುವ ಜನರಿಗೆ ಭೂಮಿ ಇಲ್ಲದೆ ಇನ್ನೊಬ್ಬರ ಹೊಲದಲ್ಲಿ ಕೂಲಿಗಳಾಗಿ ದುಡಿಯುವಂತಾಗಿದೆ. ಭೂಮಿಯ ಹಂಚಿಕೆಗೆ ಪೂರಕವಾದ ಭೂ ಕಾನೂನು ಜಾರಿಗೆ ತರಬೇಕು. ಕೃಷಿ ಭೂಮಿ ಸ್ವಾಧೀನ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ದೇಶ ಸ್ವಾವಲಂಬನೆಯನ್ನು ಕಳೆದುಕೊಳ್ಳುವ ಆತಂಕವಿದೆ ಎಂದು ರೈತ ಮುಖಂಡರು ಎಚ್ಚರಿಸುವರು.

* * 

ರೈತರ ಹಿತಾಸಕ್ತಿ ಕಾಪಾಡುವ ರಾಜಕೀಯ ಇಚ್ಚಾಶಕ್ತಿ ಕೊರತೆ ಇದೆ. ರಾಜಕೀಯ ಪಕ್ಷಗಳು ಕೇವಲ ಚುನಾವಣಾ ಸಮಯದಲ್ಲಿ ಭರವಸೆ ನೀಡುತ್ತವೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನಂತರ ಕಣ್ಣೆತ್ತಿಯೂ ನೋಡಲ್ಲ

ಸಿ.ಗೋಪಿನಾಥ್‌

ಅಧ್ಯಕ್ಷ. ಕರ್ನಾಟಕ ಪ್ರಾಂತ ರೈತ ಸಂಘ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry