ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಂಬಡ್ತಿ ಮಸೂದೆ: ರಾಷ್ಟ್ರಪತಿಗೆ ತಲುಪೇ ಇಲ್ಲ’

Last Updated 23 ಡಿಸೆಂಬರ್ 2017, 9:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಜಾತಿ, ಪಂಗಡಗಳ ಮುಂಬಡ್ತಿ ಮಸೂದೆ ರಾಷ್ಟ್ರಪತಿಗಳಿಂದ ತಿರಸ್ಕಾರವಾಗಿರುವುದಾಗಿ ಪ್ರಕಟವಾಗಿರುವ ವರದಿಗಳಲ್ಲಿ ಸಂತ್ಯಾಂಶವಿಲ್ಲ ಎಂದು ರಾಜ್ಯ ಎಸ್‌ಸಿ ಎಸ್ ಟಿ ನೌಕರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

‘ಇದು ಎಸ್‌ಸಿ ಎಸ್‌ ಟಿ ವಿರೋಧಿಗಗಳು ಸೃಷ್ಟಿಸಿರುವ ಅವಾಂತರವಾಗಿದ್ದು, ಈ ವರದಿಗಳ ಬಗ್ಗೆ ಪರಿಶಿಷ್ಟ ಜಾತಿ, ಪಂಗಡಗಳ ನೌಕರರು ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಇಂಥ ಸುಳ್ಳು ಸುದ್ದಿಯ ಆಧಾರದ ಮೇಲೆ ‘ಅಹಿಂಸಾ’ ನಾಗರಾಜ್ ಅವರು ನೀಡಿರುವ ಹೇಳಿಕೆಯನ್ನು ಒಕ್ಕೂಟವೂ ಖಂಡಿಸುತ್ತದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ಸಂಸತ್ತು ಪರಿಶಿಷ್ಟ ಜಾತಿ, ವರ್ಗಗಳಿಗೆ ಎಲ್ಲಾ ವೃಂದಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡಲು ಸಂವಿಧಾನ ಅನುಚ್ಛೇದ 16(4)(ಎ) ತಿದ್ದುಪಡಿಯನ್ನು ಅಂಗೀಕರಿಸಿದ್ದು ಅದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ. ಹಾಗೆಯೇ ರಾಜ್ಯಗಳ ಎಸ್‌ ಸಿ ಎಸ್ ಟಿ ನೌಕರರಿಗೆ ಎಲ್ಲಾ ವೃಂದಗಳಲ್ಲಿ ಸಮರ್ಪಕ ಪ್ರಾತಿನಿಧ್ಯವಿರುವುದು, ಪರಿಶಿಷ್ಟ ಜಾತಿ, ಪಂಗಡಗಳು ಈಗಲೂ ಹಿಂದುಳಿದಿವೆ ಎಂಬ ವಿಚಾರ ಹಾಗೂ ಒಟ್ಟಾರೆ ಆಡಳಿತದ ದಕ್ಷತೆಗೆ ಮುಂಬಡ್ತಿಯಿಂದ ತೊಂದರೆಯೇ? ಎಂಬ ಮೂರು ಅಂಶಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಈ ಅಂಶಗಳು ಹಾಗೂ ಬಿ.ಕೆ.ಪವಿತ್ರ ಪ್ರಕರಣದ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಈಗಿನ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಇದೇ ಅಂಶಗಳ ವರದಿ ಆಧರಿಸಿ 2017ರ ಮಸೂದೆಯನ್ನು ಉಭಯ ಸದನಗಳು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಬೇಕೆಂದು ಸೂಚಿಸಿ ಹಿಂದಿರುಗಿಸಿದ್ದಾರೆ. ಇದು ರಾಷ್ಟ್ರಪತಿಗೆ ಹೋಗುವ ಮೊದಲು ರಾಜ್ಯಗಳ ಕಾಯ್ದೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯದ ಪರಿಶೀಲನೆಗೆ ಹೋಗಬೇಕು.

ಅಲ್ಲಿಂದ ಭಾರತದ ಪರಿಶಿಷ್ಟ ಜಾತಿ, ವರ್ಗಗಳ ಆಯೋಗ, ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ರಾಷ್ಟ್ರಪತಿಗೆ ಕಳುಹಿಸುತ್ತಾರೆ. ಮಸೂದೆ ಈಗಲೂ ಗೃಹ ಸಚಿವಾಲಯದ ಪರಿಶೀಲನೆಯಲ್ಲಿದೆ’ ಎಂದು ಅವರು ವಿವರಿಸಿದ್ದಾರೆ.

ಈ ಪ್ರಕ್ರಿಯೆಗಳು ಸಂವಿಧಾನಬದ್ಧವಾಗಿದ್ದು ಇದನ್ನು ರಾಷ್ಟ್ರಪತಿ ಅಂಗೀಕರಿಸುವ ಭರವಸೆ ಇದೆ. ರಾಷ್ಟ್ರಪತಿ ಅನುಮೋದನೆಗೆ ಹೋಗದೆ ಇರುವ ಮಸೂದೆಯ ಬಗ್ಗೆ ಈಗಾಗಲೇ ತಿರಸ್ಕರಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದ ವರದಿ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT