ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತನಾಮರನ್ನು ಬೆಳೆಸಿದ ’ಅಕ್ಷರ ದೇಗುಲ’ಕ್ಕೆ ಬೇಕಿದೆ ಕಾಯಕಲ್ಪ !

Last Updated 23 ಡಿಸೆಂಬರ್ 2017, 9:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಲವು ಖ್ಯಾತನಾಮರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಕೋಟೆ ಸರ್ಕಾರಿ ಪ್ರೌಢಶಾಲೆ ಈಗ ಹಲವು ಮೂಲ ಸೌಲಭ್ಯಗಳಿಂದ ನಲುಗುತ್ತಿದೆ. ಬ್ರಿಟಿಷರ ಕಾಲದಲ್ಲಿ ಮಂಜೂರಾಗಿ, ಸೆಪ್ಟೆಂಬರ್ 30, 1947ರಲ್ಲಿ ಉದ್ಘಾಟನೆಗೊಂಡ ಶಾಲೆಯ ಕಟ್ಟಡ ಈಗ ಶಿಥಿಲಗೊಂಡಿದೆ. ಕಟ್ಟಡದ ಒಂದು ಗೋಡೆಗೆ ಹೊಂದಿಕೊಂಡಿದ್ದ ಹಳೇ ನಗರಸಭೆ ಕಚೇರಿಯನ್ನು ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ತೆರವುಗೊಳಿಸಲಾಗುತ್ತಿದೆ. ಇದರಿಂದ ಶಾಲಾ ಕಟ್ಟಡದ ಎರಡು ಕೊಠಡಿಗಳು ಶಿಥಿಲಗೊಂಡಿವೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಶಿಥಿಲಗೊಂಡ ಕೊಠಡಿಗಳಿಗೆ ಬೀಗ ಹಾಕಲಾಗಿದೆ.

ಸಾವಿರದಿಂದ 287 ಸಂಖ್ಯೆ ಕುಸಿತ
ಒಂದು ಕಾಲದಲ್ಲಿ ಈ ಶಾಲೆಗೆ ಸೇರಲು ವಿದ್ಯಾರ್ಥಿಗಳು, ಪೋಷಕರು ಮಂತ್ರಿಗಳು ಶಿಫಾರಸು ಪತ್ರ ತೆಗೆದುಕೊಂಡು ಬರುತ್ತಿದ್ದರಂತೆ. ಆಗ ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದರು. ಮೂಲ ಸೌಕರ್ಯದ ಕೊರತೆಯಿಂದಾಗಿ ಆ ಸಂಖ್ಯೆ 287 ಕ್ಕೆ ಇಳಿದಿದೆ.

ಒಟ್ಟು ವಿದ್ಯಾರ್ಥಿಗಳಲ್ಲಿ ಪರಿಶಿಷ್ಟ ಜಾತಿ 69 , ಪರಿಶಿಷ್ಟ ಪಂಗಡ 27, ಪ್ರ–ವರ್ಗ-125, ಅಲ್ಪಸಂಖ್ಯಾತ ವರ್ಗ 72, ಹಿಂದುಳಿದ ವರ್ಗ 10 ಹಾಗೂ ಸಾಮಾನ್ಯ ವರ್ಗದ 87 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶದವರು, ರೈತರು, ಬಡವರು, ಕೂಲಿ ಕಾರ್ಮಿಕರ ಮಕ್ಕಳು, ಅಲ್ಪಸಂಖ್ಯಾತ ವರ್ಗದ ಮಕ್ಕಳೇ ಹೆಚ್ಚಾಗಿ ಈ ಶಾಲೆಯಲ್ಲಿ ಓದುತ್ತಿದ್ದಾರೆ.

ಶಾಲೆಯಲ್ಲಿ 8, 9, 10 ತರಗತಿಗಳಿವೆ. ಒಂಬತ್ತು ವಿಭಾಗಗಳಿವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಪಾಠ ಮಾಡುತ್ತಾರೆ. ಒಟ್ಟು 17 ಶಿಕ್ಷಕರಿದ್ದಾರೆ. ಗುಣಮಟ್ಟದ ಬೋಧನೆಯಿದೆ. ಹೊಸ ಕಟ್ಟಡ ನಿರ್ಮಿಸಿ, ಶಾಲೆಗೆ ಮೂಲ ಸೌಲಭ್ಯಗಳನ್ನು ನೀಡಿದರೆ ಪುನಃ ಕೋಟೆ ಸರ್ಕಾರಿ ಶಾಲೆಯ ಹಳೆಯ ವೈಭವ ಮರುಕಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಶಿಕ್ಷಕರು.

ತಾತ್ಕಾಲಿಕ ಸೂರಿನ ವ್ಯವಸ್ಥೆ: ಮೂಲ ಕಟ್ಟಡ ಶಿಥಿಲಗೊಂಡಿದ್ದು, ಹಳೇಯ ನಗರಸಭೆ ಕಚೇರಿಯನ್ನು ತೆರವುಗೊಳಿಸಲು ಆರಂಭಿಸಿದ ಮೇಲೆ ಮಕ್ಕಳ ಸುರಕ್ಷತೆ, ದೂಳಿನ ಸಮಸ್ಯೆಯಿಂದ ಮೂರ್ನಾಲ್ಕು ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಪಕ್ಕದಲ್ಲಿ ಆರು ಕೊಠಡಿಗಳುಳ್ಳ ಕಟ್ಟಡವಿದೆ. ಅದರಲ್ಲಿ ಪಾಠ ಮಾಡುತ್ತಾರೆ. ಅದೂ ಸಾಕಾಗುವುದಿಲ್ಲ. ಆರು ಕೊಠಡಿಗಳಲ್ಲಿ ಒಂದು ಶಿಕ್ಷಕರಿಗೆ, ಮತ್ತೊಂದು ಬಿಸಿಯೂಟಕ್ಕೆ, ಇನ್ನೊಂದು ಸ್ಮಾರ್ಟ್‌ ಕ್ಲಾಸ್‌ಗೆ ಬಳಕೆಯಾಗುತ್ತದೆ. ಹಾಗಾಗಿ ಉಳಿಯುವ ಮೂರು ಕೊಠಡಿಗಳ ಜತೆಗೆ, ಶಾಲೆ ಪಕ್ಕದಲ್ಲಿರುವ ಡಯಟ್‌ ಗೆ ಸೇರಿರುವ ಕಟ್ಟಡದಿಂದ ತಾತ್ಕಾಲಿಕವಾಗಿ ಐದು ಕೊಠಡಿಗಳನ್ನು ಅನುಮತಿ ಮೇರೆಗೆ ಬಳಸಿಕೊಳ್ಳುತ್ತಿದ್ದಾರೆ.

ಕುಡಿಯುವ ನೀರಿಗೆ ಕೊರತೆ: ಶಾಲೆಗೆ ಪ್ರತ್ಯೇಕ ಕೊಳವೆಬಾವಿಯಿಲ್ಲ. ನಗರಸಭೆ ನೀರು ಬಿಟ್ಟಾಗ ಕುಡಿಯುವ ನೀರು ಸಿಗುತ್ತದೆ. ನಿತ್ಯ ಬಿಸಿಯೂಟ ಹಾಗೂ ಮಕ್ಕಳಿಗೆ ನೀರು ಬೇಕಾಗಿರುವುದರಿಂದ, ಶಿಕ್ಷಕರೇ ಹಣ ಕೊಟ್ಟು ಟ್ಯಾಂಕರ್ ನೀರು ಹಾಕಿಸುತ್ತಾರೆ. ‘ಶಾಲೆಗೆ ಪರಿವೀಕ್ಷಣೆಗಾಗಿ ಬಂದ ಅಧಿಕಾರಿಗಳಿಗೂ ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಿದ್ದೇನೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಜಗದೀಶ್.

ಶೌಚಾಲಯದ ಸಮಸ್ಯೆ ಎದುರಾದಾಗ, ಶಿಕ್ಷಕರು, ಹಿತೈಷಿಗಳು ಸೇರಿಕೊಂಡು ಹಣ ಹೊಂದಿಸಿ, ಶೌಚಾಲಯವನ್ನೂ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೂ, ಕುಡಿಯುವ ನೀರಿನ ಸಮಸ್ಯೆ, ಶೌಚಾಯಲದ ಸಮಸ್ಯೆ ಪೂರ್ಣ ಬಗೆಹರಿದಿಲ್ಲ. ಕಟ್ಟಡ, ಸೌಲಭ್ಯ ಹೀಗಿದ್ದರೂ, ಈ ಶಾಲೆಗೆ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿರುವ ಮಾಳಪ್ಪನಹಟ್ಟಿ, ಮದಕರಿಪುರ, ಹಿರೇಹಳ್ಳಿ, ಬಾಲೇನಹಳ್ಳಿ, ಮೇದೆಹಳ್ಳಿ, ಜಾಲಿಕಟ್ಟೆ, ಕುರುಮರಡಿಕೆರೆ, ಹಿರಿಯೂರು ತಾಲೂಕಿನ ಐಮಂಗಲ, ಬಸಪ್ಪನ ಮಾಳಿಗೆ, ಪಾಲವ್ವನಹಳ್ಳಿ, ನೇರ್‍ಲಗುಂಟೆ ಹಳ್ಳಿಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದೇ ಈ ಶಾಲೆಯ ವಿಶೇಷ.

ಶಾಲೆಯಲ್ಲಿ ಓದಿರುವ ಸಾಧಕ ವ್ಯಕ್ತಿಗಳು

ಕೋಟೆ ಪ್ರೌಢಶಾಲೆಯಲ್ಲಿ ಓದಿದವರಲ್ಲಿ ಗಣ್ಯರ ಪಟ್ಟಿ ಇದೆ. ಮಾಜಿ ಸಚಿವ ಅಶ್ವಥ್ ರೆಡ್ಡಿ, ಹಾಲಿ ಗುಲ್ಬರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಧೀಶ ರಂಗೇಗೌಡ, ‘ಚಂದ್ರಯಾನ’ ಯೋಜನೆಯ ರೂವಾರಿ ವಿಜ್ಞಾನಿ ಶಿವಕುಮಾರ್, ಶಿಕ್ಷಣಾಧಿಕಾರಿ ಎಸ್‌ಕೆಬಿ ಪ್ರಸಾದ್ ಸೇರಿದಂತೆ ಹಲವರು ಇಲ್ಲಿ ಓದಿದ್ದಾರೆ. ದೇಶ, ವಿದೇಶಗಳಲ್ಲಿ ವೈದ್ಯರು, ಎಂಜಿನಿಯರ್ ಗಳು, ವಿಜ್ಞಾನಿಗಳಾಗಿದ್ದಾರೆ. ಇಂಥವರನ್ನೆಲ್ಲ ದೇಶಕ್ಕೆ ಕೊಡುಗೆ ನೀಡಿದ ಶಾಲೆ ಈ ಸ್ಥಿತಿಯಲ್ಲಿರುವುದು ವಿಪರ್ಯಾಸ.

ಇಂದು ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿರುವ ವಿದ್ಯಾರ್ಥಿಗಳು ‘ಫೋರ್ಟ್ ಸ್ಕೂಲ್ ಬಾಯ್ಸ್‌–98 ಬ್ಯಾಚ್’ ಹೆಸರಲ್ಲಿ ಸಂಘಟಿತರಾಗಿ, ಕೋಟೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದ್ದಾರೆ. ಆ ಪ್ರಯತ್ನದ ಭಾಗವಾಗಿ ಶನಿವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಶಾಲೆಯ ಆವರಣದಲ್ಲೇ ಕಾರ್ಯಕ್ರಮ ಆಯೋಜಿಸಿ, ಶಿಕ್ಷಕರನ್ನೂ ಸನ್ಮಾನಿಸುತ್ತಿದ್ದಾರೆ.

ಕೋಟೆ ಪ್ರೌಢಶಾಲೆಯಲ್ಲಿ ಓದಿದವರಲ್ಲಿ ಗಣ್ಯರ ಪಟ್ಟಿ ಇದೆ. ಮಾಜಿ ಸಚಿವ ಅಶ್ವಥ್ ರೆಡ್ಡಿ, ಹಾಲಿ ಗುಲ್ಬರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಧೀಶ ರಂಗೇಗೌಡ, ‘ಚಂದ್ರಯಾನ’ ಯೋಜನೆಯ ರೂವಾರಿ ವಿಜ್ಞಾನಿ ಶಿವಕುಮಾರ್, ಶಿಕ್ಷಣಾಧಿಕಾರಿ ಎಸ್‌ಕೆಬಿ ಪ್ರಸಾದ್ ಸೇರಿದಂತೆ ಹಲವರು ಇಲ್ಲಿ ಓದಿದ್ದಾರೆ. ದೇಶ, ವಿದೇಶಗಳಲ್ಲಿ ವೈದ್ಯರು, ಎಂಜಿನಿಯರ್ ಗಳು, ವಿಜ್ಞಾನಿಗಳಾಗಿದ್ದಾರೆ. ಇಂಥವರನ್ನೆಲ್ಲ ದೇಶಕ್ಕೆ ಕೊಡುಗೆ ನೀಡಿದ ಶಾಲೆ ಈ ಸ್ಥಿತಿಯಲ್ಲಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT