ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪ ನಿರೀಕ್ಷೆಯಲ್ಲಿ ಪಾಳುಬಿದ್ದ ಅಂಗನವಾಡಿ ಕೇಂದ್ರ

Last Updated 23 ಡಿಸೆಂಬರ್ 2017, 9:50 IST
ಅಕ್ಷರ ಗಾತ್ರ

ದಾವಣಗೆರೆ: ಹಲವು ವರ್ಷಗಳಿಂದ ಸಂಪೂರ್ಣ ಪಾಳುಬಿದ್ದ ಅಂಗನವಾಡಿ ಕಟ್ಟಡ ಕ್ರೀಮಿ ಕೀಟಗಳ ಆವಾಸ ಸ್ಥಾನವಾಗಿದೆ. ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿವೆ. ಇದು ಹೊನ್ನಾಳಿ ತಾಲ್ಲೂಕಿನ ಕೆಂಗಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ದುಸ್ಥಿತಿ.

ಊರಿನ ಮುಖ್ಯ ರಸ್ತೆಯಲ್ಲಿರುವ ಈ ಅಂಗನವಾಡಿ ಕೇಂದ್ರ ಹಾಳಾಗಿದ್ದು, ಪಕ್ಕದ ಶಾಲೆಯ ಕೊಠಡಿಯಲ್ಲಿಯೇ ಮಕ್ಕಳಿಗೆ ಅಕ್ಷರಾಭ್ಯಾಸ, ಅಡುಗೆ ಮಾಡಲಾಗುತ್ತಿದೆ. ಜತೆಗೆ 2 ವರ್ಷಗಳಿಂದ ಇಲ್ಲಿ ಅಂಗನವಾಡಿ ಸಹಾಯಕಿಯ ನೇಮಕ ಮಾಡಿಕೊಳ್ಳದಿರುವುದರಿಂದ ಕಾರ್ಯಕರ್ತೆಯೇ ಹೆಚ್ಚುವರಿ ಕಾರ್ಯದೊತ್ತಡವನ್ನು ನಿಭಾಯಿಸುತ್ತಿದ್ದಾರೆ.

ಎಚ್ಚರ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ: ಮಕ್ಕಳ ಅಕ್ಷರಾಭ್ಯಾಸ, ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ಊಟ, ಆಹಾರ ಪದಾರ್ಥಗಳ ದಾಸ್ತಾನು, ಗ್ಯಾಸ್‌ ಸಿಲಿಂಡರ್‌, ಓಲೆಗಳು, ಕುಡಿಯುವ ನೀರಿನ ಸೌಲಭ್ಯ ಹೀಗೆ ಒಂದು ಸಣ್ಣ ಕೊಠಡಿಯಲ್ಲಿ ಎಲ್ಲವನ್ನೂ ಸಂಗ್ರಹಿಸಿಡಲಾಗುತ್ತಿದೆ. ಚಿಕ್ಕಮಕ್ಕಳು ಇರುವ ಜಾಗದಲ್ಲಿ ಸಿಲಿಂಡರ್‌ನಂತಹ ಅಪಾಯಕಾರಿ ವಸ್ತುಗಳನ್ನು ಇಡುವುದು, ಅಡುಗೆ ಮಾಡುವುದು ಸರಿಯಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಸಣ್ಣ ನಿರ್ಲಕ್ಷ್ಯದಿಂದ ಅಪಾಯ ಎದುರಾಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಹಾಗಾಗಿ, ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಡಬೇಕು ಎಂಬುದು ಅವರ ಒತ್ತಾಯ.

15 ದಿನದೊಳಗೆ ಹುದ್ದೆ ಭರ್ತಿ: ಕಳೆದ ನವೆಂಬರ್‌ನಲ್ಲಿ ತಾಲ್ಲೂಕುವಾರು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ ಕೆಂಗಲಹಳ್ಳಿ ಅಂಗನವಾಡಿ ಕೇಂದ್ರವೂ ಸೇರಿದೆ. ಖಾಲಿ ಇರುವ ಸಹಾಯಕಿಯ ಹುದ್ದೆಯನ್ನು 15 ದಿನಗಳಲ್ಲಿ ಭರ್ತಿ ಮಾಡಲಾಗುವುದು ಎನ್ನುತ್ತಾರೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಶಿವಲಿಂಗಪ್ಪ.

ಅಂಗನವಾಡಿ ಕಟ್ಟಡ ಹಾಳಾಗಿದ್ದರಿಂದ ಶಾಲೆಯ ಕೊಠಡಿಯೊಂದನ್ನು ನೀಡುವಂತೆ ಗ್ರಾಮದ ಮುಖಂಡರು, ಕಾರ್ಯಕರ್ತೆ ಮನವಿ ಮಾಡಿದ್ದರು. ಅದರಂತೆ ನಾಲ್ಕೈದು ತಿಂಗಳ ಮಟ್ಟಿಗೆ ಅಂಗನವಾಡಿ ಕೇಂದ್ರ ನಡೆಸಲು ಶಾಲೆಯ ಒಂದು ಕೊಠಡಿಯನ್ನೇ ನೀಡಲಾಗಿತ್ತು. ಈಗ ನಮ್ಮ ಶಾಲೆಯ ಕೊಠಡಿಯೊಂದು ಸಂಪೂರ್ಣ ಹಾಳಾಗಿದೆ. ಮಕ್ಕಳಿಗೆ ಪಾಠ ಹೇಳಲು ಇರುವ ಕೊಠಡಿಗಳು ಸಾಲುತ್ತಿಲ್ಲ. ನಮಗೂ ಕೊಠಡಿಯ ಅಗತ್ಯವಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಶಿವಶಂಕರ್‌.

ಅಂಗನವಾಡಿ ನಿರ್ಮಾಣಕ್ಕೆ ₹ 9.17 ಲಕ್ಷ ಮಂಜೂರು

ಅಂಗನವಾಡಿ ಕೇಂದ್ರ ನಿರ್ಮಿಸಲು ಈಗಾಗಲೇ ಮಂಜೂರಾತಿ ದೊರಕಿದೆ. ಕಟ್ಟಡ ನಿರ್ಮಾಣಕ್ಕೆ ವಿಶೇಷ ಅಭಿವೃದ್ಧಿ ಯೋಜನೆಯಡಿ ₹ 9.17 ಲಕ್ಷ ಹಣ ಬಿಡುಗಡೆಯಾಗಿದೆ. ಅಲ್ಲದೇ ಭೂ ಸೇನಾ ನಿಗಮ ನಿಯಮಿತದಿಂದ (ಕೆಆರ್‌ಡಿಎಲ್‌) ವರ್ಕ್‌ ಆರ್ಡರ್‌ ದೊರೆತಿದೆ. 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಮಾರ್ಚ್‌ ಅಂತ್ಯದೊಳಗೆ ಕಟ್ಟಡ ನಿರ್ಮಾಣದ ಕೆಲಸ ಪೂರ್ಣಗೊಳ್ಳಲಿದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಶಿವಲಿಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT