7

ವರದಿ ಸಲ್ಲಿಸಲು ಅಲ್ಪಸಂಖ್ಯಾತ ಆಯೋಗಕ್ಕೆ ಸೂಚನೆ

Published:
Updated:

ಧಾರವಾಡ: ‘ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಬಂದಿರುವ ಐದು ಅರ್ಜಿಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ರಾತ್ರಿ ನಗರದ ಸರ್ಕಿಟ್‌ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರೂ ಒಟ್ಟಾಗಿ ಒಂದು ಅರ್ಜಿ ಕೊಡುವಂತೆ ಮೊದಲೇ ಹೇಳಿದ್ದೆ. ಆದರೆ, ಮಾತೆ ಮಹಾದೇವಿ, ವಿರಕ್ತ ಮಠಗಳು, ವೀರಶೈವ ಮಠಾಧೀಶರು, ವೀರಶೈವ ಮಹಾಸಭಾ ಹಾಗೂ ಎಸ್‌.ಎಂ.ಜಾಮದಾರ ಅವರು ಪ್ರತ್ಯೇಕ ಧರ್ಮ ರಚನೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇವೆಲ್ಲವನ್ನೂ ಪರಿಶೀಲಿಸಿ ವರದಿ ನೀಡುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ವ್ಯಾಜ್ಯ ಇದು. ಇದು ರಾಜ್ಯ, ರಾಜ್ಯಗಳ ನಡುವೆ ನಡೆಯಬೇಕಾದ ಚರ್ಚೆ. ಪಕ್ಷಗಳ ಜತೆ ಅಲ್ಲ. ಕಳೆದ ಒಂದೂವರೆ ವರ್ಷಗಳಿಂದ ಎರಡೂ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ. ಇಂದೂ ಒಂದು ಪತ್ರ ಬರೆದಿದ್ದೇನೆ. ಅವರು ಎಲ್ಲಿಗೆ ಕರೆದರೂ ಚರ್ಚೆಗೆ ಹೋಗಲು ಸಿದ್ಧ’ ಎಂದರು.

‘ಪರಿವರ್ತನಾ ಯಾತ್ರೆ ಉತ್ತರ ಕರ್ನಾಟಕಕ್ಕೆ ಕಾಲಿಡುವ ಮೊದಲು ಮಹದಾಯಿಯಿಂದ 7.5 ಟಿಎಂಸಿ ನೀರು ಹರಿಸುತ್ತೇನೆ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದ ಬಿ.ಎಸ್‌.ಯಡಿಯೂರಪ್ಪ, ಸುಳ್ಳು ಹೇಳಿ ಅದೆಷ್ಟು ಪತ್ರಗಳನ್ನು ರಕ್ತದಲ್ಲಿ ಬರೆದುಕೊಟ್ಟಿದ್ದಾರೋ’ ಎಂದು ವ್ಯಂಗ್ಯವಾಡಿದರು.

ಸಚಿವ ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕಂ ಠಾಕೂರ, ಕೆಪಿಸಿಸಿ ಕಾರ್ಯದರ್ಶಿ ಭಾವನಾ ರಾಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry