7

ದಲಿತರ ಕೇರಿಯಲ್ಲಿ ಪಾದಯಾತ್ರೆ

Published:
Updated:

ಗದಗ: ‘ಲಿಂಗಾಯತ–ವೀರಶೈವ ಎರಡೂ ಒಂದೇ. ಯಾವುದೇ ಕಾರಣಕ್ಕೂ ಧರ್ಮವನ್ನು ಒಡೆಯಲು ಬಿಡಬಾರದು’ ಎಂದು ಸಾರಿದ ಗುರು–ವಿರಕ್ತ ಮಠಾಧೀಶರು ಶುಕ್ರವಾರ ಬೆಟಗೇರಿಯ ಅಂಬೇಡ್ಕರ್‌ ನಗರದ ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸಿ, ಧರ್ಮ ಜಾಗೃತಿ ಮೂಡಿಸಿದರು.

ಅಂಬೇಡ್ಕರ್‌ ನಗರದ ಬಸವೇಶ್ವರ ದೇವಸ್ಥಾನದಲ್ಲಿ ಮಠಾಧೀಶರು 200ಕ್ಕೂ ಹೆಚ್ಚು ದಲಿತರಿಗೆ ಲಿಂಗಧಾರಣೆ ಮತ್ತು 100ಕ್ಕೂ ಹೆಚ್ಚು ಜನರಿಗೆ ರುದ್ರಾಕ್ಷಿ ಧಾರಣೆ ಮಾಡಿ ಸಮಾನತೆಯ ಸಂದೇಶ ಸಾರಿದರು. ಪಾದಯಾತ್ರೆಯಲ್ಲಿ ಭಾಗಿಯಾದ ಎಲ್ಲರಿಗೂ ಭಸ್ಮಧಾರಣೆಯನ್ನು ಮಾಡಲಾಯಿತು.

‘ಇಷ್ಟಲಿಂಗ, ರುದ್ರಾಕ್ಷಿ ಮತ್ತು ಭಸ್ಮ ವೀರಶೈವ–ಲಿಂಗಾಯತ ಧರ್ಮದ ಲಾಂಛನಗಳು. ಭಕ್ತರಿಗೆ ಇದನ್ನು ಕೊಟ್ಟು ಡಿ. 24ರ ಸಮನ್ವಯ ಸಮಾವೇಶಕ್ಕೆ ಆಹ್ವಾನ ನೀಡುತ್ತಿದ್ದೇವೆ’ ಎಂದರು. ಅಂಬೇಡ್ಕರ್‌ ನಗರದಲ್ಲಿ ದಲಿತರು ರಸ್ತೆಗೆ ನೀರು ಚಿಮುಕಿಸಿ, ರಂಗೋಲಿ ಹಾಕಿ ಮಠಾಧೀಶರನ್ನು ಸ್ವಾಗತಿಸಿದರು.

ಪುಷ್ಪವೃಷ್ಟಿ ಮಾಡಿ ಜೈಕಾರ ಮೊಳಗಿಸಿದರು. ‘ಲಿಂಗಾಯತ–ವೀರಶೈವ ಎರಡೂ ಒಂದೇ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವವೇ ನಮ್ಮ ಬಂಧು’ ಎಂಬ ಘೋಷಣೆ ಮೊಳಗಿದವು. ನೂರಾರು ಮಹಿಳೆಯರು ಕುಂಭ ಹೊತ್ತು ಭಾಗವಹಿಸಿದರು.

ಪಾದಯಾತ್ರೆ ಅಂಬೇಡ್ಕರ್‌ ನಗರದ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಶರಣ ಬಸವೇಶ್ವರ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಸಮಾರೋಪಗೊಂಡಿತು. ನಂತರ ನಡೆದ ಧರ್ಮಸಭೆಯಲ್ಲಿ ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ‘ವೀರಶೈವ– ಲಿಂಗಾಯತ ಎರಡು ಒಂದೇ ಎಂದು ಸಮನ್ವಯತೆ ಸಾರುವವರು ಅಹಿಂಸಾವಾದಿಗಳು, ಧರ್ಮ ಒಡೆಯುವವರು ಹಿಂಸಾವಾದಿಗಳಾಗಿದ್ದಾರೆ. ಅಖಂಡ ವೀರಶೈವ–ಲಿಂಗಾಯತ ಧರ್ಮಕ್ಕೆ ಸಂಕಷ್ಟ ಎದುರಾಗಿದೆ. ಧರ್ಮಕ್ಕೆ ಎದುರಾಗಿರುವ ಕಂಟಕವನ್ನು ದೂರ ಮಾಡುವ ನಿಟ್ಟಿನಲ್ಲಿ,ಸಮನ್ವಯ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.

ಒಂದೇ ದಿನ 2 ಕಡೆ ಪಾದಯಾತ್ರೆ: ಶುಕ್ರವಾರ ಬೆಟಗೇರಿ ಹಾಗೂ ನರಸಾಪುರದಲ್ಲಿ ಪಾದಯಾತ್ರೆ ನಡೆಯಿತು. ನರಸಾಪುರದ ಗುರುಮಠದಿಂದ ಮಾರುತಿ ದೇವಸ್ಥಾನ, ಖಾದಿ ಪ್ಲಾಟ್, ಹನುಮಂತ ದೇವರ ದೇವಸ್ಥಾನ, ನೇಕಾರ ಓಣಿಯ ಮೂಲಕ ಹೊಸ ವೀರೇಶ್ವರ ಮಠಕ್ಕೆ ಬಂದು ತಲುಪಿತು.

ಪಾದಯಾತ್ರೆಯಲ್ಲಿ ಸೊರಟೂರ ಫಕ್ಕೀರೇಶ್ವರ ಶ್ರೀ, ಶಿವಕುಮಾರ ಶರಣ, ಅನ್ನದಾನೀಶ್ವರ ಶಾಖಾ ಮಠದ ವೀರೇಶ್ವರ ಸ್ವಾಮೀಜಿ ಭಾಗವಹಿಸಿದ್ದರು. ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ, ವಿ.ಕೆ.ಗುರುಮಠ, ಪ್ರಕಾಶ ಬೇಲಿ ಹಾಗೂ 500ಕ್ಕೂ ಹೆಚ್ಚು ಭಕ್ತರು ಇದ್ದರು.

ಶೋಕಿಗಾಗಿ ಪಾದಯಾತ್ರೆ ನಡೆಸುತ್ತಿಲ್ಲ

‘ನಾವು ಶೋಕಿಗಾಗಿ ಪಾದಯಾತ್ರೆ ನಡೆಸುತ್ತಿಲ್ಲ. ಧರ್ಮದ ಉಳಿವಿಗಾಗಿ ಜನ ಜಾಗೃತಿ ಪಾದಯಾತ್ರೆ ಕೈಗೊಂಡಿದ್ದೇವೆ. ಸನಾತನ ಧರ್ಮ ವೀರಶೈವ– ಲಿಂಗಾಯತ ಒಡೆಯಲು ಕೆಲವು ಮಠಾಧೀಶರು, ರಾಜಕಾರಣಿಗಳು ಮುಂದಾಗಿದ್ದಾರೆ. ಹಣದ ಮೇಲೆ ನಿಂತಿರುವ ಮಠಗಳು ಧರ್ಮವನ್ನು ಒಡೆಯಲು ಯತ್ನಿಸುತ್ತಿವೆ. ಹಣ ಇರುವವರು ದೊಡ್ಡ ಸ್ವಾಮೀಜಿಗಳು ಎಂದುಕೊಂಡಿದ್ದಾರೆ. ಆದರೆ, ಅವರೇ ದಡ್ಡ ಸ್ವಾಮೀಜಿಗಳು. ಸಮಾಜಕ್ಕೆ ಒಳಿತನ್ನು ಬಸುವವರು, ಸಮಾನತೆ ಸಾರುವವರು ನಿಜವಾದ ಸ್ವಾಮೀಜಿ ಆಗುತ್ತಾರೆ’ ಎಂದು ಬಸವಕಲ್ಯಾಣದ ಗಡಿಗೌಡಗಾಂವ್‌ ಸ್ವಾಮೀಜಿ ಅಭಿಪ್ರಾಯಪಟ್ಟರು.

* * 

ಒಂದಾಗಿರುವ ವೀರಶೈವ–ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿರುವ ಸ್ವಾಮೀಜಿಗಳು ಘಟಸರ್ಪ ಇದ್ದಂತೆ. ಅವರು ಸಮಾಜದ ಹಿತಕ್ಕೆ ಮಾರಕ

ಹಂಪಸಾಗರ ಶ್ರೀ ವಿರಕ್ತ ಮಠಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry